
Gujarat Elections 2022: ಮತದಾರರ ನಿರಾಸಕ್ತಿ, ಕಳೆದ ಬಾರಿಗಿಂತ ಕಡಿಮೆ ಮತದಾನ, ಯಾವ ಪಕ್ಷಕ್ಕೆ ನಷ್ಟ?
ಗಾಂಧಿನಗರ, ನವೆಂಬರ್ 12: ಗುಜರಾತ್ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನದಲ್ಲಿ ಗುರುವಾರ ಸಂಜೆ 5 ಗಂಟೆ ವರೆಗೆ ಶೇಕಡಾ 57 ರಷ್ಟು ಮತದಾನವಾಗಿದೆ.
19 ಜಿಲ್ಲೆಗಳ 89 ಕ್ಷೇತ್ರಗಳಲ್ಲಿ 788 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲು ಬೆಳಿಗ್ಗೆ 8 ಗಂಟೆಗೆ ಮತದಾನ ಪ್ರಾರಂಭವಾಯಿತು. ಮಧ್ಯಾಹ್ನ 3 ಗಂಟೆಯವರೆಗೆ ಶೇ.48.48ರಷ್ಟು ಮತದಾನವಾಗಿತ್ತು. ಸಂಜೆ 5 ಗಂಟೆ ಮುಕ್ತಾಯಗೊಂಡಂತೆ ಶೇ 57ರಷ್ಟು ಮತದಾನ ಆಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.
ಗುಜರಾತ್ ಚುನಾವಣೆ: ಮಲ್ಲಿಕಾರ್ಜುನ ಖರ್ಗೆಯ 'ರಾವಣ' ಹೇಳಿಕೆಗೆ ಮೋದಿ ತಿರುಗೇಟು

ಚುನಾವಣಾ ಆಯೋಗ ನೀಡಿರುವ ಅಂಕಿಅಂಶಗಳು
ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ತಾಪಿ ಜಿಲ್ಲೆಯಲ್ಲಿ ಸಂಜೆ 5 ಗಂಟೆ ವರೆಗೆ ಶೇ 72.32 ರಷ್ಟು ಮತದಾನವಾಗಿದೆ. ನರ್ಮದಾ ಜಿಲ್ಲೆಯಲ್ಲಿ ಶೇ 68.09 ಮತ್ತು ಡ್ಯಾಂಗ್ಸ್ ಜಿಲ್ಲೆಯಲ್ಲಿ ಶೇ 64.84 ರಷ್ಟು ಮತದಾನವಾಗಿದೆ.
ಮಧ್ಯಾಹ್ನ 3 ಗಂಟೆ ವರೆಗೆ ಶೇ.50.89 ರಷ್ಟು ಮತದಾನವಾಗಿದ್ದ ಗಿರ್ ಸೋಮನಾಥ್ ಕ್ಷೇತ್ರದಲ್ಲಿ ಶೇ.60ಕ್ಕೂ ಹೆಚ್ಚು ಮತದಾನವಾಗಿದೆ. ಮೊರ್ಬಿಯಲ್ಲಿ ಶೇ.56ಕ್ಕೂ ಅಧಿಕ ಮತದಾನವಾಗಿದೆ.
ದೇವಭೂಮಿ ದ್ವಾರಕಾದಲ್ಲಿ ಶೇ 59.11 ಕ್ಕಿಂತ ಹೆಚ್ಚು ಮತದಾನವಾಗಿದೆ. ಅಮ್ರೇಲಿಯಲ್ಲಿ ಶೇಕಡವಾರು (52.73), ಭರೂಚ್ (59.36), ಭಾವನಗರ (51.34), ಭಾವನಗರ (51.34), ಬೊಟಾಡ್ (51.64), ಜಾಮ್‌ನಗರ (53.98), ಜುನಾಗಢ್ (52.04), ಕಚ್ಚ್ (54.52), ನವಸಾರಿ (65), Porband9191. (53.84), ರಾಜ್‌ಕೋಟ್ (51.66), ಸೂರತ್ (57.16), ಸುರೇಂದ್ರನಗರ (58.14), ಮತ್ತು ವಲ್ಸಾದ್ (62.46) ರಷ್ಟು ಮತದಾನವಾಗಿದೆ.
ಒಟ್ಟು ಮತದಾರರಲ್ಲಿ 1,24,33,362 ಪುರುಷರು ಮತ್ತು 1,1,5,42,811 ಮಹಿಳೆಯರು ಇದ್ದಾರೆ. ಡಿಸೆಂಬರ್ 5 ರಂದು ಎರಡನೇ ಹಂತದ ಮತದಾನ ನಡೆಯಲಿದ್ದು, ಹಿಮಾಚಲ ಪ್ರದೇಶ ಚುನಾವಣೆಯೊಂದಿಗೆ ಡಿಸೆಂಬರ್ 8 ರಂದು ಫಲಿತಾಂಶ ಪ್ರಕಟವಾಗಲಿದೆ.

ಕಡಿಮೆ ಮತದಾನದಿಂದ ಯಾವ ಪಕ್ಷಕ್ಕೆ ನಷ್ಟ?
ಕಳೆದ ಎರಡು ದಶಕಗಳಿಗಿಂತಲೂ ಅಧಿಕವಾಗಿ ಬಿಜೆಪ ನೇತೃತ್ವದ ಸರ್ಕಾರ ಗುಜರಾತ್‌ನಲ್ಲಿ ಆಡಳಿತ ನಡೆಸುತ್ತಿದೆ. ಇದು ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ತವರು ರಾಜ್ಯವೂ ಹೌದು. ಆ ಹಿನ್ನೆಲೆಯಲ್ಲಿ ಬಿಜೆಪಿಗೆ ಇದು ಪ್ರತಿಷ್ಠೆಯ ಚುನಾವಣೆ ಎಂದೇ ಹೇಳಬಹುದು. ಗುಜರಾತ್‌ನ ಅಧಿಕ ಮಂದಿ ಬಿಜೆಪಿ ಪರ ಒಲವು ಹೊಂದಿದ್ದಾರೆ ಎಂದು ಸಮೀಕ್ಷೆಗಳು ಹೇಳುತ್ತಿದ್ದವು. ಆದರೆ, ಇಂದು ನಡೆದ ಮತದಾನದ ಅಂಕಿಅಂಶಗಳನ್ನು ನೋಡಿದರೆ, ಕಡಿಮೆ ಮತದಾನವಾಗಿರುವುದು ಬಿಜೆಪಿಗೆ ನಷ್ಟ ಮಾಡಬಹುದೆಂದು ರಾಜಕೀಯ ವಿಶ್ಲೇಷಕರ ವಾದವಾಗಿದೆ. ಗುಜರಾತ್‌ನ ನಗರ ಪ್ರದೇಶಗಳ ಜನರು ಬಿಜೆಪಿ ಒಲವು ಹೊಂದಿದ್ದರು. ಅವರಲ್ಲಿ ಕೆಲವರು ಎಎಪಿ ಪರ ಮತ ಚಲಾಯಿಸಿದರೆ. ಇನ್ನು ಕೆಲವರು ಚುನಾವಣೆ ಪ್ರಕ್ರಿಯೆಯಲ್ಲಿ ನಿರಾಸಕ್ತಿ ಹೊಂದಿರುವುದು ಕಂಡುಬಂದಿದೆ. ಇದು ಸಹಜವಾಗಿಯೇ ಬಿಜೆಪಿಯನ್ನು ಆತಂಕಕ್ಕೆ ಈಡು ಮಾಡುವ ಬೆಳವಣಿಗೆಯಾಗಿದೆ.

ಗುಜರಾತ್‌ನಲ್ಲಿ ಮುನ್ನೆಲೆಗೆ ಬಂದ ಎಎಪಿ
ಕಳೆದ ಹಲವು ವರ್ಷಗಳಿಂದ ಅಧಿಕಾರ ಅನುಭವಿಸುತ್ತಿದ್ದ ಬಿಜೆಪಿಗೆ ಎಎಪಿ ಕಂಟಕವಾಗಿ ಪರಿಣಮಿಸಿದೆ. ಕೇಜ್ರಿವಾಲ್ ನೇತೃತ್ವದ ಎಎಪಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಪೈಪೋಟಿ ನೀಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಗುಜರಾತ್‌ನಲ್ಲಿ ಆಡಳಿತ ವಿರೋಧಿ ಅಲೆ ಬೂದಿ ಮುಚ್ಚಿದ ಕೆಂಡದಂತಿದೆ. ಇನ್ನು ಹಳ್ಳಿಗಳಲ್ಲಿ ತನ್ನ ಬೇರುಗಳನ್ನು ಗಟ್ಟಿಯಾಗಿಯೇ ಇರಿಸಿಕೊಂಡಿರುವ ಕಾಂಗ್ರೆಸ್ ಮಾತ್ರ ಮೌನ ಪ್ರಚಾರಕ್ಕೆ ಮಣೆ ಹಾಕಿದ್ದು, ಬಿಜೆಪಿ ನಾಯಕರಿಗೆ ತಲೆ ನೋವು ತರಿಸಿದೆ.

ಗುಜರಾತ್ ಚುನಾವಣೆಯಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ
ದೇಶದಲ್ಲಿ ಕುತೂಹಲಕ್ಕೆ ಕಾರಣವಾಗಿರುವ ಗುಜರಾತ್ ಚುನಾವಣೆ ಈ ಬಾರಿ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಿದೆ. ಈ ಹಿಂದಿನ ವರ್ಷಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಪೈಪೋಟಿ ಇತ್ತು. ಈ ಬಾರಿ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವೂ ಗುಜರಾತ್‌ನ ಅಖಾಡಕ್ಕೆ ಇಳಿದಿದೆ. ದೆಹಲಿ ಹಾಗೂ ಪಂಜಾಬ್‌ನಲ್ಲಿ ಪೂರ್ಣ ಬಹುಮತದಿಂದ ಗೆದ್ದು ಬೀಗುತ್ತಿರುವ ಎಎಪಿಗೆ ಈ ಬಾರಿ ಗುಜರಾತ್‌ನಲ್ಲಿ ಯಾವ ಫಲಿತಾಂಶ ಸಿಗಬಹುದು ಎಂಬುದನ್ನು ಕಾದು ನೋಡಬೇಕಿದೆ.