
Gujarat Election 2022: ನಿಗದಿಯಾಗಿದ್ದ ಮದುವೆ ಸಮಯವನ್ನೇ ಬದಲಿಸಿಕೊಂಡು ಮತದಾನ ಮಾಡಿದ ವ್ಯಕ್ತಿ
ಗಾಂಧಿನಗರ, ನವೆಂಬರ್ 12: ದೇಶದಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಗುಜರಾತ್ ವಿಧಾನಸಭೆ ಚುನಾವಣೆಗೆ ಮೊದಲ ಹಂತದ ಮತದಾನ ಇಂದು ನಡೆಯುತ್ತಿದೆ. ಆ ಹಿನ್ನೆಲೆಯಲ್ಲಿ ಮದುವೆ ಉಡುಪನ್ನು ಧರಿಸಿದ ವ್ಯಕ್ತಿಯೊಬ್ಬರು ಮತದಾನ ಮಾಡಲು ಬಂದಿರುವುದು ಚುನಾವಣಾ ಅಧಿಕಾರಿಗಳ ಅಚ್ಚರಿಗೆ ಕಾರಣವಾಗಿದೆ.
ಮತದಾರರಾದ ಪ್ರಫುಲ್ ಭಾಯ್ ಮೋರೆ ಅವರು ಮತ ಚಲಾಯಿಸಲು ತಮ್ಮ ಮದುವೆ ಸಮಯವನ್ನೇ ಮರು ನಿಗದಿಪಡಿಸಿರುವುದಾಗಿ ಹೇಳಿಕೊಂಡಿದ್ದಾರೆ.
ಗುಜರಾತ್‌ನಲ್ಲಿ 750 ಕೋಟಿ ನಗದು, ಚಿನ್ನ, ಡ್ರಗ್ಸ್ ವಶ: ಚುನಾವಣಾ ಆಯೋಗ
ಮತದಾನ ನಡೆಯುತ್ತಿರುವ ರಾಜ್ಯದ 19 ಜಿಲ್ಲೆಗಳಲ್ಲಿ ಒಂದಾದ ಗುಜರಾತ್‌ನ ತಾಪಿಯಲ್ಲಿ ಮೋರೆ ಅವರು ಮತದಾನ ಮಾಡಿದರು. ಅವರ ಫೋಟೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿವೆ. ಅವರು ಭಾರತೀಯ ವಿವಾಹಗಳಲ್ಲಿ ಧರಿಸುವ ಅರಿಶಿನವನ್ನು ಹೊದಿಸಿದ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿದ್ದರು. ಕುರ್ತಾ-ಪೈಜಾಮಾವನ್ನು ಧರಿಸಿ ಮತದಾನಕ್ಕೆ ಬಂದಿದ್ದರು. ಏಕೆಂದರೆ, ಅವರು ಇಂದು ಸಂಜೆ ವಿವಾಹವಾಗಲು ಮಹಾರಾಷ್ಟ್ರಕ್ಕೆ ತೆರಳಬೇಕಿದೆ ಎಂದು ಹೇಳಿಕೊಂಡಿದ್ದಾರೆ.

ಮತದಾನದ ಕುರಿತು ಮೋರೆ ಹೇಳಿದ್ದೇನು?
'ಪ್ರತಿಯೊಬ್ಬರಿಗೂ ಮತದಾನ ಮಾಡಲು ನಾನು ಒತ್ತಾಯಿಸುತ್ತೇನೆ. ನೀವು ಅದನ್ನು ವ್ಯರ್ಥ ಮಾಡಬಾರದು. ನನ್ನ ಮದುವೆಯನ್ನು ಬೆಳಿಗ್ಗೆ ನಿಗದಿಪಡಿಸಲಾಗಿತ್ತು. ಆದರೆ, ನಾನು ಅದನ್ನು ಸಂಜೆಗೆ ಮರು ನಿಗದಿಪಡಿಸಿದೆ. ಅದಕ್ಕಾಗಿ ನಾವು ಮಹಾರಾಷ್ಟ್ರಕ್ಕೆ ಹೋಗಬೇಕಾಗಿದೆ' ಎಂದು ಅವರು ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.

2 ಕೋಟಿಗೂ ಅಧಿಕ ಜನರು ಮತದಾನ ಮಾಡುವ ನಿರೀಕ್ಷೆ
ಇಂದಿನ ಮತದಾನ ಮುಗಿಯುವ ವೇಳೆಗೆ 2 ಕೋಟಿಗೂ ಹೆಚ್ಚು ಮತದಾರರು ಮತಗಟ್ಟೆಗಳಲ್ಲಿ ಮತ ಚಲಾಯಿಸುವ ನಿರೀಕ್ಷೆಯಿದೆ. ಮೊದಲ ಹಂತದ ಚುನಾವಣೆಯು ಗುಜರಾತ್‌ನ 89 ಕ್ಷೇತ್ರಗಳಲ್ಲಿ ನಡೆಯಲಿದೆ. ಎರಡನೇ ಹಂತದ ಮತದಾನವು ಡಿಸೆಂಬರ್ 5 ರಂದು ನಡೆಯಲಿದೆ. ಅಂದು 93 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ನವೆಂಬರ್ 12 ರಂದು ಚುನಾವಣೆ ನಡೆದ ಹಿಮಾಚಲ ಪ್ರದೇಶದೊಂದಿಗೆ ಡಿಸೆಂಬರ್ 8 ರಂದು ಗುಜರಾತ್ ಚುನಾವಣಾ ಫಲಿತಾಂಶವನ್ನು ಪ್ರಕಟಿಸಲಾಗುವುದು. ಎರಡೂ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ.

ಮತ್ತೆ ಅಧಿಕಾರದ ಗದ್ದುಗೆ ಏರಲಿದೆಯೇ ಬಿಜೆಪಿ?
ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಮತ್ತೊಂದು ಸಮೀಕ್ಷೆ ಭವಿಷ್ಯ ನುಡಿದಿದೆ.
ರಿಪಬ್ಲಿಕ್ ಟಿವಿ-ಪಿ-ಮಾರ್ಕ್ ಸಮೀಕ್ಷೆ ಪ್ರಕಾರ, ಗುಜರಾತ್‌ನಲ್ಲಿ ಬಿಜೆಪಿಗೆ ಮೂರನೇ ಎರಡರಷ್ಟು ಗೆಲುವು ಸಿಗಲಿದೆ.
ಗುಜರಾತ್‌ನ ಒಟ್ಟು 182 ವಿಧಾನಸಭಾ ಕ್ಷೇತ್ರಗಳಲ್ಲಿ 127 ರಿಂದ 140 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ದಾಖಲಿಸಲಿದೆ. ಶೇ. 46.2 ಮತಗಳು ಬಿಜೆಪಿಯ ಪಾಲಾಗಲಿವೆ ಎಂದು ಸಮೀಕ್ಷೆ ಹೇಳಿದೆ. ಕಳೆದ ಸಾರಿ ಗುಜರಾತ್‌ನಲ್ಲಿ ಬಿಜೆಪಿಗೆ 99 ಸ್ಥಾನಗಳು ಸಿಕ್ಕಿದ್ದವು.
ಕಾಂಗ್ರೆಸ್‌ಗೆ 37 ರಿಂದ 45 ಸ್ಥಾನಗಳು ಸಿಗಲಿವೆ. ಶೇ.28.4ರಷ್ಟು ಮತಗಳನ್ನು ಕಾಂಗ್ರೆಸ್ ತನ್ನದಾಗಿಸಿಕೊಳ್ಳಲಿದೆ. ಎಎಪಿ ಶೇ 20.6 ರಷ್ಟು ಮತಗಳೊಂದಿಗೆ 9 ರಿಂದ 21 ಸ್ಥಾನಗಳಲ್ಲಿ ಜಯ ಸಾಧಿಸಲಿದೆ.

ಗುಜರಾತ್ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ನಿರೀಕ್ಷೆ
ಪ್ರಧಾನಿ ನರೇಂದ್ರ ಮೋದಿ ತವರು ರಾಜ್ಯವಾದ ಗುಜರಾತ್ ಪ್ರತಿಷ್ಠೆಯ ಕಣವಾಗಿದೆ. ಕಳೆದ ಸಾರಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಮಧ್ಯೆ ಪೈಪೋಟಿ ಏರ್ಪಟ್ಟಿತ್ತು. ಈ ಸಾರಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಪೈಪೋಟಿ ನೀಡಿದೆ. ಎಎಪಿ ನಾಯಕರ ಪ್ರಕಾರ, ಆಮ್ ಆದ್ಮಿ ಪಕ್ಷವು 40 ರಿಂದ 50 ಸ್ಥಾನಗಳನ್ನು ಗೆಲ್ಲಲಿದೆ.