ಗುಜರಾತ್ ವಿಧಾನಸಭಾ ಚುನಾವಣೆ; ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಆರಂಭ
ಅಹಮದಾಬಾದ್, ಅ. 27: ಮುಂಬರುವ ವಿಧಾನಸಭಾ ಚುನಾವಣೆಗಾಗಿ ಗುಜರಾತ್‌ನಲ್ಲಿ ಈಗಾಗಲೇ ಬಿಜೆಪಿ ಪ್ರಚಾರ ಆರಂಭಿಸಿದೆ. ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಪ್ರಾರಂಭಿಸಿದೆ.
ರಾಜ್ಯ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗಾಗಿ ಗುಜರಾತ್‌ನ ಸ್ಥಳೀಯ ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರಿಂದ ಪ್ರತಿಕ್ರಿಯೆ ಸಂಗ್ರಹಿಸುವ ಪ್ರಕ್ರಿಯೆಯನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ) ಗುರುವಾರ ಪ್ರಾರಂಭಿಸಿದೆ.
182 ಸದಸ್ಯ ಬಲದ ಗುಜರಾತ್ ವಿಧಾನಸಭೆಗೆ ಡಿಸೆಂಬರ್‌ನಲ್ಲಿ ಚುನಾವಣೆ ನಡೆಯಲಿದ್ದು, ಈ ಬಾರಿ ಬಿಜೆಪಿ, ಪ್ರತಿಪಕ್ಷ ಕಾಂಗ್ರೆಸ್ ಮತ್ತು ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ (ಎಎಪಿ) ನಡುವೆ ರಾಜ್ಯವು ತ್ರಿಕೋನ ಹೋರಾಟಕ್ಕೆ ಸಾಕ್ಷಿಯಾಗುವ ಸಾಧ್ಯತೆಯಿದೆ.
ಗುರುವಾರದಿಂದ, ಗುಜರಾತ್‌ನ ಪ್ರತಿ 33 ಜಿಲ್ಲೆಗಳು ಮತ್ತು ಐದು ಪ್ರಮುಖ ನಗರಗಳಿಗೆ ಬಿಜೆಪಿ ನೇಮಿಸಿದ ವೀಕ್ಷಕರ ಮೂರು ಸದಸ್ಯರ ತಂಡವು ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಲು ಪ್ರಾರಂಭಿಸಿದೆ. ಮೂರು ದಿನಗಳ ಕಾಲ ಈ ಪ್ರಕ್ರಿಯೆ ನಡೆಯಲಿದ್ದು, ಪ್ರತಿ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಗಳ ಅಭಿಪ್ರಾಯಗಳನ್ನು ತಂಡಗಳು ಗಣನೆಗೆ ತೆಗೆದುಕೊಳ್ಳಲಿವೆ ಎಂದು ಪಕ್ಷದ ಸದಸ್ಯರು ತಿಳಿಸಿದ್ದಾರೆ.

ಸ್ಥಳೀಯ ಮಟ್ಟದ ಕಾರ್ಯಕರ್ತರಿಂದ ಪ್ರತಿಕ್ರಿಯೆ ಸಂಗ್ರಹ
ಅಭ್ಯರ್ಥಿಗಳ ಆಯ್ಕೆಗಾಗಿ ನಡೆಯುತ್ತಿರುವ ಪ್ರಕ್ರಿಯೆಯ ಭಾಗವಾಗಿ, ಕಾರ್ಯಕರ್ತರ ಪ್ರತಿಕ್ರಿಯೆ ಆಧಾರದ ಮೇಲೆ ವೀಕ್ಷಕರು ವರದಿಯನ್ನು ಸಿದ್ಧಪಡಿಸುತ್ತಾರೆ. ಈ ವರದಿಯನ್ನು ರಾಜ್ಯ ಬಿಜೆಪಿಗೆ ಸಲ್ಲಿಸಲಾಗುತ್ತದೆ. ಮುಂಬರುವ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗೆ ಇದು ಆಧಾರವಾಗಲಿದೆ ಎಂದು ಪಕ್ಷದ ಮುಖಂಡರು ಹೇಳಿದ್ದಾರೆ.
ಹಾಲಿ ಮತ್ತು ಮಾಜಿ ಸಚಿವರು, ಸಂಸದರು, ರಾಷ್ಟ್ರ, ರಾಜ್ಯ ಮತ್ತು ಜಿಲ್ಲಾ ಮಟ್ಟದ ಹಿರಿಯ ಪದಾಧಿಕಾರಿಗಳು ಸೇರಿದಂತೆ ಒಟ್ಟು 38 ತಂಡಗಳನ್ನು ಈ ಉದ್ದೇಶಕ್ಕಾಗಿ ರಚಿಸಲಾಗಿದೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.

ಪ್ರತಿ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿ ಅಭ್ಯರ್ಥಿ ಆಯ್ಕೆ!
"ಇಂದಿನಿಂದ, ರಾಜ್ಯ ಬಿಜೆಪಿ ಟಿಕೆಟ್ ಹಂಚಿಕೆಗಾಗಿ ಆಹ್ವಾನಿಸಲಾದ ಪಕ್ಷದ ಕಾರ್ಯಕರ್ತರೊಂದಿಗೆ ಸಂವಾದ ನಡೆಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿತು. ಅಹಮದಾಬಾದ್ ಜಿಲ್ಲೆಯ ಧೋಲ್ಕಾ, ಧಂಧೂಕಾ ಮತ್ತು ದಸ್ಕ್ರೋಯ್ ವಿಧಾನಸಭಾ ಸ್ಥಾನಗಳಿಗೆ ತಮ್ಮ ಅಭಿಪ್ರಾಯವನ್ನು ನೀಡಲು ಕಾರ್ಯಕರ್ತರು ಗುರುವಾರ ಜಮಾಯಿಸಿದ್ದರು.
ರಾಜ್ಯ ಬಿಜೆಪಿ ನೇಮಿಸಿರುವ ವೀಕ್ಷಕರು ತಮ್ಮ ಸರದಿ ಬಂದಂತೆ ಒಬ್ಬೊಬ್ಬ ಕಾರ್ಯಕರ್ತರ ಮಾತನ್ನು ಆಲಿಸಲಿದ್ದಾರೆ ಎಂದು ಬಿಜೆಪಿಯ ಅಹಮದಾಬಾದ್ ಜಿಲ್ಲಾಧ್ಯಕ್ಷ ಹರ್ಷದ್ ಗಿರಿ ಸುದ್ದಿಗಾರರಿಗೆ ತಿಳಿಸಿದರು.
ಕಳೆದ ಚುನಾವಣೆಯಂತೆ ಜಾಮ್‌ನಗರದ ಎರಡೂ ಸ್ಥಾನಗಳನ್ನು ಬಿಜೆಪಿ ಮೈಕ್ರೋ ಪ್ಲಾನಿಂಗ್ ಮೂಲಕ ಗೆಲ್ಲಲಿದೆ ಎಂದು ಜಾಮನಗರ ನಗರ ಬಿಜೆಪಿ ಅಧ್ಯಕ್ಷ ವಿಮಲ್ ಕಾಗಠಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರತಿಕ್ರಿಯೆ ಸಂಗ್ರಹ ಪ್ರಜಾಸತ್ತಾತ್ಮಕ ಪ್ರಕ್ರಿಯೆ ಎಂದ ಬಿಜೆಪಿ ನಾಯಕರು
ವೀಕ್ಷಕರನ್ನು ಭೇಟಿ ಮಾಡಲು ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದು, ಕೆಲವರು ಚುನಾವಣೆಗೆ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ವೀಕ್ಷಕರ ಪ್ರತಿಕ್ರಿಯೆ ಸಂಗ್ರಹವು ಬಿಜೆಪಿ ನಡೆಸುತ್ತಿರುವ ಸುಗಮ ಪ್ರಜಾಸತ್ತಾತ್ಮಕ ಪ್ರಕ್ರಿಯೆಯಾಗಿದೆ ಎಂದು ವಡೋದರಾ ಮೇಯರ್ ಕೆಯೂರ್ ರೊಕಾಡಿಯಾ ಹೇಳಿದ್ದಾರೆ.
"ಪ್ರತಿಕ್ರಿಯೆ ಪಡೆಯುವ ಭಾಗವಾಗಿ ಮೂವರು ವೀಕ್ಷಕರು ವಡೋದರಾಗೆ ಭೇಟಿ ನೀಡುತ್ತಿದ್ದಾರೆ. ಅವರು ವಿವಿಧ ವಿಧಾನಸಭಾ ಕ್ಷೇತ್ರಗಳ ಪಕ್ಷದ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿ, ಅಭಿಪ್ರಾಯಗಳನ್ನು ಸಂಗ್ರಹಿಸುತ್ತಾರೆ. ಅವರು ವಾರ್ಡ್ ಮಟ್ಟದ ರಾಜಕೀಯ ಪರಿಸ್ಥಿತಿಯನ್ನು ಸಹ ಅರ್ಥಮಾಡಿಕೊಳ್ಳುತ್ತಾರೆ" ಎಂದು ಮೇಯರ್ ಕೆಯೂರ್ ರೊಕಾಡಿಯಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

ರಾಜ್ಯ ನಾಯಕತ್ವಕ್ಕೆ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಸಲ್ಲಿಸಲಿರುವ 38 ತಂಡಗಳು
ಅಂಕಿಅಂಶಗಳನ್ನು ಸಂಗ್ರಹಿಸಿದ ನಂತರ, ಈ 38 ತಂಡಗಳು ಪಕ್ಷದ ರಾಜ್ಯ ನಾಯಕತ್ವಕ್ಕೆ ಟಿಕೆಟ್ ಆಕಾಂಕ್ಷಿಗಳ ಹೆಸರನ್ನು ಸಲ್ಲಿಸುತ್ತವೆ. ನಂತರ ಅವರು ಶಾರ್ಟ್‌ಲಿಸ್ಟ್ ಮಾಡಿ ಮತ್ತು ಪ್ರತಿ ಸ್ಥಾನಕ್ಕೆ ತಲಾ ಮೂರು ಹೆಸರನ್ನು ಫೈನಲ್ ಮಾಡುತ್ತಾರೆ.
ಈ ಮೂರು ಹೆಸರುಗಳನ್ನು ಪಕ್ಷದ ಕೇಂದ್ರ ಸಂಸದೀಯ ಮಂಡಳಿಗೆ ಕಳುಹಿಸುತ್ತಾರೆ. ನಂತರ ಸಂಸದೀಯ ಮಂಡಳಿ ಹೆಸರುಗಳ ಬಗ್ಗೆ ಚರ್ಚಿಸಿ ಅಭ್ಯರ್ಥಿಯನ್ನು ನಿರ್ಧರಿಸಲಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
2017ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 99 ಸ್ಥಾನಗಳನ್ನು ಗೆದ್ದಿದ್ದರೆ, ಕಾಂಗ್ರೆಸ್ 77 ಸ್ಥಾನಗಳನ್ನು ಗಳಿಸಿತ್ತು.












Click it and Unblock the Notifications