ಲಾಕ್‌ಡೌನ್ ಸಮಯ ವಿಮಾನ ಟಿಕೆಟ್ ರದ್ದುಗೊಳಿಸಿದ್ದ ಹಣ ಮರುಪಾವತಿಗೆ ಸೂಚನೆ
ನವದೆಹಲಿ, ಏಪ್ರಿಲ್ 8: ಕಳೆದ ವರ್ಷ ವಿಮಾನ ಟಿಕೆಟ್ ಬುಕ್ ಮಾಡಿ, ಲಾಕ್‌ಡೌನ್ ಕಾರಣಕ್ಕೆ ರದ್ದು ಮಾಡಿದ್ದ ಹಣವನ್ನು ಪ್ರಯಾಣಿಕರಿಗೆ ಮರುಪಾವತಿ ಮಾಡುವಲ್ಲಿ ಸೋತಿರುವ ವಿಮಾನ ಯಾನ ಕಂಪನಿಗಳ ಬಗ್ಗೆ ನಾಗರೀಕ ವಿಮಾನಯಾನ ಸಚಿವಾಲಯ ಬುಧವಾರ ಅಸಮಾಧಾನ ವ್ಯಕ್ತಪಡಿಸಿದೆ.
ವಿಮಾನಯಾನ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಚಿವಾಲಯದ ಕಾರ್ಯದರ್ಶಿಗಳು ಬುಧವಾರ ಸಭೆ ನಡೆಸಿದ್ದು, ಪ್ರಯಾಣಿಕರ ಹಣವನ್ನು ಮರುಪಾವತಿ ಮಾಡುವ ಕುರಿತು ಚರ್ಚೆ ನಡೆಸಿದರು.
ಇಂಡಿಗೋದಿಂದ 14 ಹೊಸ ವಿಮಾನಗಳು; ಇಲ್ಲಿದೆ ವಿವರ...
ಈ ಮುನ್ನ ಮಾರ್ಚ್ 31ರ ಗಡುವಿನ ನಂತರ ಎಲ್ಲಾ ಕ್ರೆಡಿಟ್ ಶೆಲ್ ತೆರವುಗೊಳಿಸಲು ಹಾಗೂ ಪ್ರಯಾಣಿಕರಿಗೆ ಟಿಕೆಟ್ ರದ್ದು ಮಾಡಿದ ಹಣವನ್ನು ಮರುಪಾವತಿ ಮಾಡಲು ಸುಪ್ರೀಂ ಕೋರ್ಟ್ ಸಚಿವಾಲಯಕ್ಕೆ ಆದೇಶಿಸಿತ್ತು. ಮುಂದಿನ ವಿಮಾನ ಯಾನ ಬುಕ್ಕಿಂಗ್ ಸಮಯದಲ್ಲಿ ಮರುಪಾವತಿ ಹಣವನ್ನು ಬಳಸಿಕೊಳ್ಳಬಹುದು ಎಂದು ಸೂಚಿಸಲಾಗಿತ್ತು. ಕಳೆದ ವರ್ಷ ಮಾರ್ಚ್ 25 ರಿಂದ ಮೇ 24ರ ನಡುವೆ ರದ್ದಾದ ವಿಮಾನಗಳ ಟಿಕೆಟ್ ವೆಚ್ಚವನ್ನು ಪ್ರಯಾಣಿಕರಿಗೆ ಹಿಂದಿರುಗಿಸುವಂತೆ ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯಕ್ಕೆ (ಡಿಜಿಸಿಎ) ತಿಳಿಸಿತ್ತು. ಕ್ರೆಡಿಟ್ ಶೆಲ್ ಯೋಜನೆಗೆ ಈ ವರ್ಷದ ಮಾರ್ಚ್ 31ರವರೆಗೆ ಗಡುವು ನೀಡಲಾಗಿತ್ತು.
ಪ್ರಯಾಣಿಕರಿಗೆ ಹಣ ಮರುಪಾವತಿ ಸಂಬಂಧ ಸಚಿವಾಲಯ ಸುಪ್ರೀಂ ಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸಬೇಕಾಗಿದೆ. ರದ್ದಾದ ಟಿಕೆಟ್ ಗಳ ಹಣವನ್ನು ಮರುಪಾವತಿ ಮಾಡುವ ಕುರಿತು ಸಭೆಯಲ್ಲಿ ಚರ್ಚಿಸಲಾಗಿದ್ದು, ವಿಮಾನಯಾನ ಕಂಪನಿಗಳ ಪ್ರತಿಕ್ರಿಯೆ ಕುರಿತು ಸಚಿವಾಲಯದ ಕಾರ್ಯದರ್ಶಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ಗೋ ಏರ್ ಹಾಗೂ ಇಂಡಿಗೋ ಸಂಸ್ಥೆಗಳು ಮರುಪಾವತಿ ಮಾಡಿರುವುದಾಗಿ ತಿಳಿಸಿವೆ. ಇನ್ನಷ್ಟು ವಿಮಾನಯಾನ ಕಂಪನಿಗಳು ಮುಂದಿನ ದಿನಗಳಲ್ಲಿ ಮರುಪಾವತಿ ಮಾಡುವುದಾಗಿ ತಿಳಿಸಿವೆ. ಶೀಘ್ರವೇ ಮರುಪಾವತಿ ಮಾಡುವಂತೆ ಕಾರ್ಯದರ್ಶಿಗಳು ಸಂಸ್ಥೆಗಳಿಗೆ ಸೂಚಿಸಿದ್ದಾರೆ.