ಪರಿಕ್ಕರ್ ಕೊಟ್ಟ ಮಾತಿನಂತೆ ನಡೆಯಲಿ: ಮೃತ್ಯುಂಜಯ ಸ್ವಾಮೀಜಿ
ಕಾರವಾರ, ಅಕ್ಟೋಬರ್ 04: 'ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ ಅವರು 2014ರಲ್ಲಿ ಕನ್ನಡಿಗರಿಗೆ ಕೊಟ್ಟ ಮಾತಿನಂತೆ ಗೋವಾ ಸರ್ಕಾರದಿಂದ ಗೋವಾದಲ್ಲಿ ನೆಲೆಸಿರುವ ಕನ್ನಡಿಗರಿಗೆ ಭೂಮಿ ಕೊಡಬೇಕು. ಕರ್ನಾಟಕ ಸರ್ಕಾರ ಅದರಲ್ಲಿ ಅವರಿಗೆ ಮನೆ ನಿರ್ಮಿಸಿಕೊಡಬೇಕು' ಎಂದು ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಮಹಾಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದ್ದಾರೆ.
ಗೋವಾದ ಬೈನಾದಲ್ಲಿ ಕನ್ನಡಿಗರ ಮನೆಗಳನ್ನು ತೆರವುಗೊಳಿಸಿರುವ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿದ ಅವರು ಗೋವಾ ಸರ್ಕಾರದ ಅಮಾನವೀಯ ಕೃತ್ಯವನ್ನು ಖಂಡಿಸಿದ್ದಾರೆ.

ಕರ್ನಾಟಕ ಸರ್ಕಾರವು ಕೂಡಲೇ ಕೇಂದ್ರ ಗೃಹ ಮಂತ್ರಿಗಳಿಗೆ ಮಧ್ಯಪ್ರವೇಶಿಸುವಂತೆ ತಿಳಿಸಿ, ಸಮಸ್ಯೆ ಬಗೆಹರಿಸಲು ಒತ್ತಾಯ ಹೇರಬೇಕು. ಇಲ್ಲವಾದರೆ ಕರ್ನಾಟಕ ಸರ್ಕಾರವೇ ಮಾನವೀಯತೆ ಆಧಾರದ ಮೇಲೆ ಕನ್ನಡಿಗರಿಗೆ ಪುನರ್ವಸತಿ ಕಲ್ಪಿಸಿಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಕಳೆದ 40 ವರ್ಷಗಳಿಂದ ವಾಸವಾಗಿದ್ದ ಗೋವಾ ಕನ್ನಡಿಗರನ್ನು ಒಕ್ಕಲೆಬ್ಬಿಸಿ, ನಿರಾಶ್ರಿತರನ್ನಾಗಿಸಿರುವುದು ಅಮಾನವೀಯ ಕೃತ್ಯ. ಬಸವ ಭವನ ಸೇರಿದಂತೆ ಇನ್ನಿತರ ಧಾರ್ಮಿಕ ಸ್ಥಳಗಳನ್ನು ಯಾವುದೇ ನೋಟಿಸ್ ಇಲ್ಲದೇ ಧ್ವಂಸ ಮಾಡಿರುವುದು ಖಂಡನಾರ್ಹ. ಗೋವಾ ಹಾಗೂ ಕರ್ನಾಟಕ ಸರ್ಕಾರಗಳು ಕನ್ನಡಿಗರಿಗೆ ಶೀಘ್ರವೇ ಶಾಶ್ವತವಾಗಿ ಪುನರ್ವಸತಿ ಕಲ್ಪಿಸಿಕೊಡಬೇಕು ಎಂದು ಸ್ವಾಮೀಜಿ ಆಗ್ರಹಿಸಿದ್ದಾರೆ.












Click it and Unblock the Notifications