ಮಣಿಪುರದಲ್ಲಿ ಬಿಜೆಪಿಗೆ ಬಹುಮತ ನೀಡಿ: ಜನರಲ್ಲಿ ಸ್ಪೀಕರ್ ಮನವಿ
ಇಂಫಾಲ, ಡಿಸೆಂಬರ್ 17: ವಿಧಾನಸಭೆ ಚುನಾವಣೆಗೆ ಪಂಚ ರಾಜ್ಯಗಳಲ್ಲಿ ಸಿದ್ಧತೆ ನಡೆಯುತ್ತಿದೆ. ಈ ನಡುವೆ ಮಣಿಪುರ ಸ್ಪೀಕರ್ ಬಿಜೆಪಿಗೆ ಮತ ನೀಡಿ ಎಂದು ಜನರಲ್ಲಿ ಮನವಿ ಮಾಡಿದ್ದಾರೆ. "ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ನೀಡಿ, ಈ ಮೂಲಕ ಬಿಜೆಪಿಗೆ ಜನಸೇವೆ ಮಾಡಲು ಸಹಕಾರ ನೀಡಿ," ಎಂದು ಮಣಿಪುರ ಸ್ಪೀಕರ್ ಯುಮ್ನಮ್ ಖೇಮ್‌ಚಂದ್ ಜನರಲ್ಲಿ ಮನವಿ ಮಾಡಿದ್ದಾರೆ.
ಸಿಂಗ್‌ಜಮೈ ಪ್ರದೇಶದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಧ್ವಜಾರೋಹಣ ಮಾಡಿದ ಬಳಿಕ ಮಾತನಾಡಿದ ಮಣಿಪುರ ಸ್ಪೀಕರ್ ಯುಮ್ನಮ್ ಖೇಮ್‌ಚಂದ್, "ನೀವು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿ, ಬಿಜೆಪಿ ಪಕ್ಷವು ಬಹುಮತದೊಂದಿಗೆ ಗೆಲ್ಲುವಂತೆ ಮಾಡಿ. ಈ ಮೂಲಕ ಮಣಿಪುರದಲ್ಲಿ ಬಿಜೆಪಿ ತನ್ನದೇ ಆದ ಸರ್ಕಾರವನ್ನು ರಚಿಸಲು ಸಹಾಯ ಮಾಡಿ. ಹಾಗೆಯೇ ಭ್ರಷ್ಟಾಚಾರ ಮುಕ್ತ ಸರ್ಕಾರವನ್ನು ರಚನೆ ಮಾಡಲು ಬಿಜೆಪಿಗೆ ಸಹಕಾರ ನೀಡಿ," ಎಂದು ಜನರಲ್ಲಿ ವಿನಂತಿ ಮಾಡಿದ್ದಾರೆ.
ಪಂಜಾಬ್, ಗೋವಾ, ಉತ್ತರಾಖಂಡ, ಮಣಿಪುರ, ಉತ್ತರ ಪ್ರದೇಶದಲ್ಲಿ 2022 ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ನಿಟ್ಟಿನಲ್ಲಿ ಎಲ್ಲಾ ಪಕ್ಷಗಳು ಪ್ರಚಾರ ಕಾರ್ಯ ನಡೆಸುತ್ತಿದೆ. ಮಣಿಪುರದಲ್ಲೂ ಎಲ್ಲಾ ಪಕ್ಷಗಳು ಚುನಾವಣಾ ಪ್ರಚಾರವನ್ನು ಆರಂಭ ಮಾಡಿದೆ. ಬಿಜೆಪಿಯು ಮುಂದಿನ ವರ್ಷ ಸಂಪೂರ್ಣ ಬಹುಮತದೊಂದಿಗೆ ಸರ್ಕಾರವನ್ನು ರಚನೆ ಮಾಡುವ ನಿಟ್ಟಿನಲ್ಲಿ ಎಲ್ಲಾ ಕಾರ್ಯತಂತ್ರವನ್ನು ರೂಪಿಸುತ್ತಿದೆ. ಬಿಜೆಪಿಯು "ಮೈಹೋಮ್, ಬಿಜೆಪಿ ಹೋಮ್" ಎಂಬ ಅಭಿಯಾನವನ್ನು ನಡೆಸುವ ಮೂಲಕ ಚುನಾವಣಾ ಪ್ರಚಾರದಲ್ಲಿ ತೊಡಗಿದೆ.

"ಕಳೆದ ಚುನಾವಣೆಯಲ್ಲಿ ಬಿಜೆಪಿಯು 60 ವಿಧಾನಸಭಾ ಕ್ಷೇತ್ರಗಳ ಪೈಕಿ 21 ವಿಧಾನಸಭೆ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಅದರಿಂದಾಗಿ ಬಿಜೆಪಿ ಪಕ್ಷವು ಬೇರೆ ಪಕ್ಷದೊಂದಿಗೆ ಸೇರಿ ಸರ್ಕಾರವನ್ನು ರಚನೆ ಮಾಡಬೇಕಾಯಿತು. ಸರ್ಕಾರವನ್ನು ರಚನೆ ಮಾಡುವ ಸಂದರ್ಭದಲ್ಲಿ ಬಿಜೆಪಿಯು ತನ್ನ ಪಕ್ಷದ ಶಿಸ್ತನ್ನು ಹಾಗೂ ಸಿದ್ಧಾಂತವನ್ನು ಬದಿಗೊತ್ತಬೇಕಾದ ಪರಿಸ್ಥಿತಿಯೂ ಉಂಟಾಗಿದೆ. ಆದರೆ ಈ ಬಾರಿ ಜನರು ಬಿಜೆಪಿಗೆ ಬಹುಮತ ನೀಡಿ ಸಂಪೂರ್ಣ ಸ್ವತಂತ್ರವಾಗಿ ಸರ್ಕಾರ ರಚನೆ ಮಾಡಲು ಅವಕಾಶ ನೀಡಬೇಕು," ಎಂದಿದ್ದಾರೆ. ಇನ್ನು ಈ ಸಂದರ್ಭದಲ್ಲೇ ಬಿಜೆಪಿ ಪಕ್ಷ 40 ಸೀಟುಗಳಲ್ಲಿ ಗೆಲುವು ಸಾಧಿಸಲಿದೆ ಎಂಬ ಪಕ್ಷದ ಅಧ್ಯಕ್ಷರು ಎ ಶಾರ್ದಾರ ಹೇಳಿಕೆಯನ್ನು ಕೂಡಾ ಹೊಗಳಿದ್ದಾರೆ. ಸದ್ಯ ಬಿಜೆಪಿಯು ನಾಗಾ ಪೀಪಲ್ಸ್ ಫ್ರಂಟ್ (ಎನ್‌ಪಿಎಫ್) ಮತ್ತು ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಜೊತೆ ಸೇರಿ ಸರ್ಕಾರವನ್ನು ನಡೆಸುತ್ತಿದೆ.
ಕನಿಷ್ಠ ಎಂಟು ಕ್ಷೇತ್ರಗಳಲ್ಲಿ ಗೆಲುವು: ಎನ್‌ಪಿಎಫ್
ಪ್ರಸ್ತುತ ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಇರುವ ನಾಗಾ ಪೀಪಲ್ಸ್ ಫ್ರಂಟ್ (ಎನ್‌ಪಿಎಫ್) ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 60 ವಿಧಾನಸಭಾ ಕ್ಷೇತ್ರಗಳ ಪೈಕಿ 8 ಕ್ಕೂ ಅಧಿಕ ವಿಧಾನಸಭೆ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಭರವಸೆಯನ್ನು ವ್ಯಕ್ತಪಡಿಸಿದೆ. "ಕಳೆದ ಚುನಾವಣೆಯಲ್ಲಿ ನಾವು ನಾಲ್ಕು ವಿಧಾನಸಭೆ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದೇವೆ. ಆದರೆ ಈ ಬಾರಿ ನಾವು ಕನಿಷ್ಠ 8-10 ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಭರವಸೆಯನ್ನ ಹೊಂದಿದ್ದೇವೆ," ಎಂದು ಎನ್‌ಪಿಎಫ್ ಮಣಿಪುರದ ಪ್ರಧಾನ ಕಾರ್ಯದರ್ಶಿ ಹುನ್ರೆಖುಯ್ ಕಶುಂಗ್ ಬುಧವಾರ ಹೇಳಿದ್ದಾರೆ. ಇನ್ನು ಮುಂದಿನ ಚುನಾವಣೆಯಲ್ಲಿ 11 ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಎನ್‌ಪಿಎಫ್ ಮುಂದಾಗಿದೆ. ಇನ್ನು "ಎನ್‌ಪಿಎಫ್ ಚುನಾವಣೆಗೂ ಮುನ್ನ ಯಾವುದೇ ಮೈತ್ರಿ ಮಾಡಿಕೊಳ್ಳುವುದಿಲ್ಲ," ಎಂದು ಕೂಡಾ ಹುನ್ರೆಖುಯ್ ಕಶುಂಗ್ ತಿಳಿಸಿದ್ದಾರೆ. "ನಮ್ಮದು ಸ್ಥಳೀಯ ಪಕ್ಷವಾಗಿದೆ. ಹಾಗಾಗಿ ಚುನಾವಣೆಯ ಬಳಿಕ ನಾವು ಯಾವುದೇ ನಿರ್ಧಾರವನ್ನು ಮಾಡುತ್ತೇವೆ. ಯಾವ ಪಕ್ಷ ಸರ್ಕಾರವನ್ನು ರಚನೆ ಮಾಡುತ್ತದೆಯೋ ಆ ಪಕ್ಷಕ್ಕೆ ನಾವು ಬೆಂಬಲವನ್ನು ನೀಡುತ್ತೇವೆ," ಎಂದು ತಿಳಿಸಿದ್ದಾರೆ. (ಒನ್‌ಇಂಡಿಯಾ ಸುದ್ದಿ)











Click it and Unblock the Notifications