Parkash Singh Badal: 20ನೇ ವಯಸ್ಸಿಗೆ ರಾಜಕೀಯ, 5 ಬಾರಿ ಸಿಎಂ!
ಚಂಡೀಗಢ, ಪಂಜಾಬ್: 5 ಬಾರಿ ಪಂಜಾಬ್ ಆಳಿದ್ದ, ಶಿರೋಮಣಿ ಅಕಾಲಿದಳದ ಸಂಸ್ಥಾಪಕ ಎಸ್. ಪ್ರಕಾಶ್ ಸಿಂಗ್ ಬಾದಲ್ 95ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ. ಪಂಜಾಬ್ ಅಭಿವೃದ್ಧಿಗೆ ತಮ್ಮದೇ ಕೊಡುಗೆ ನೀಡಿದ್ದ ಪ್ರಕಾಶ್ ಸಿಂಗ್ ಬಾದಲ್ (Prakash Singh Badal) ಅವರ ರಾಜಕೀಯ ಸಾಧನೆಗಳು ಹಾಗೂ ವೈಯಕ್ತಿ ಜೀವನದ ಮಾಹಿತಿಯನ್ನ ನಾವು ಇಲ್ಲಿ ತಿಳಿಯೋಣ.
ಅದು 1927 ರ ಡಿಸೆಂಬರ್ 8, ಪ್ರಕಾಶ್ ಸಿಂಗ್ ಬಾದಲ್ ಅವರು ಪಂಜಾಬ್ ಪ್ರಾಂತ್ಯದ ಅಬುಲ್ ಖುರಾನಾದಲ್ಲಿ ಜನಿಸಿದ್ದರು. ಬಾಲ್ಯದಿಂದಲೇ ನಾಯಕತ್ವದ ಗುಣಗಳನ್ನ ರೂಢಿಸಿಕೊಂಡಿದ್ದರು. 20ನೇ ವಯಸ್ಸಿಗೆ ರಾಜಕೀಯ ಪ್ರವೇಶ ಮಾಡಿದ್ದ ಪ್ರಕಾಶ್ ಸಿಂಗ್ ಬಾದಲ್ ಪಂಜಾಬ್ ರಾಜಕೀಯದಲ್ಲಿ ಅಚ್ಚಳಿಯದೇ ಉಳಿಯುವ ಹೆಸರು. 1947ರಲ್ಲಿ ಬಾದಲ್ ಗ್ರಾಮದ ಸರಪಂಚರಾಗಿ ರಾಜಕೀಯ ಜೀವನ ಆರಂಭಿಸಿದ್ದರು ಪ್ರಕಾಶ್ ಸಿಂಗ್ ಬಾದಲ್. ಪಂಜಾಬ್ ಸಿಎಂ ಆಗುವ ಜೊತೆಗೆ ಕೇಂದ್ರದ ಮಂತ್ರಿಯೂ ಆಗಿ ಕಾರ್ಯನಿರ್ವಹಿಸಿದ್ದರು ಪ್ರಕಾಶ್ ಸಿಂಗ್ ಬಾದಲ್. ಅವರ ಸಂಪೂರ್ಣ ರಾಜಕೀಯ ಜೀವನದ ಮಾಹಿತಿ ಮುಂದೆ ತಿಳಿಯೋಣ.

5 ಬಾರಿ ಮುಖ್ಯಮಂತ್ರಿ ಪಟ್ಟ
ಒಂದಲ್ಲ ಎರಡಲ್ಲ ಒಟ್ಟು 5 ಬಾರಿ ಪಂಜಾಬ್‌ನ ಮುಖ್ಯಮಂತ್ರಿ ಪಟ್ಟಕ್ಕೇರಿದ್ದರು ಪ್ರಕಾಶ್ ಸಿಂಗ್ ಬಾದಲ್. 20ನೇ ವಯಸ್ಸಿಗೆ ಬಾದಲ್ ಗ್ರಾಮದ ಸರಪಂಚರಾಗಿ ನೇಮಕವಾದ ನಂತರ ಕೆಲವೇ ವರ್ಷದಲ್ಲಿ ಲಂಬಿ ಗ್ರಾಮದ ಬ್ಲಾಕ್ ಕಮಿಟಿ ಚೇರ್‌ಮನ್ ಆಗಿ ಕೂಡ ಆಯ್ಕೆಯಾಗಿದ್ದರು. ಇಷ್ಟೆಲ್ಲದರ ನಡುವೆ ಪಂಜಾಬ್ ವಿಧಾನಸಭೆ ಪ್ರವೇಶಕ್ಕೂ ಅವರಿಗೆ ಅವಕಾಶ ಒದಗಿ ಬಂದಿತ್ತು. 1957ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ್ದರು. 1969ರಲ್ಲಿ ಮರು ಆಯ್ಕೆಯಾಗಿ, ಸಚಿವ ಸ್ಥಾನವನ್ನೂ ಅಲಂಕರಿಸಿದ್ದರು. ಇದೇ ಮುಂದೆ ಅವರಿಗೆ ಮುಖ್ಯಮಂತ್ರಿ ಸ್ಥಾನ ಅಲಂಕರಿಸಲು ಸಹಾಯವಾಗಿತ್ತು.
ಇತಿಹಾಸದ ಪುಟದಲ್ಲಿ ಬಾದಲ್
ಸಮಾಜ-ಕಲ್ಯಾಣ, ಪಂಚಾಯ್ತಿರಾಜ್, ಪಶುಸಂಗೋಪನೆ ಸೇರಿದಂತೆ ಹಲವು ಇಲಾಖೆಗಳ ಸಚಿವರಾಗಿ ಕೆಲಸ ಮಾಡಿದ ಅನುಭವ ಪ್ರಕಾಶ್ ಸಿಂಗ್ ಬಾದಲ್ ಅವರಿಗೆ ಅಪಾರ ಜ್ಞಾನ ತಂದುಕೊಟ್ಟಿತ್ತು. ಮೊರಾರ್ಜಿ ದೇಸಾಯಿ ಸಂಪುಟದಲ್ಲಿ ಕೃಷಿ ಮತ್ತು ನೀರಾವರಿ ಸಚಿವರಾಗಿಯೂ ಸೇವೆ ಸಲ್ಲಿಸಿದ ಅನುಭವ ಪ್ರಕಾಶ್ ಸಿಂಗ್ ಬಾದಲ್ ಅವರಿಗೆ ಇತ್ತು. ಮುಂದೆ 1970 ರಿಂದ 71, 1977 ರಿಂದ 80, 1997 ರಿಂದ 2002 ಹಾಗೂ 2007 ರಿಂದ 2012 ಮತ್ತು 2012 ರಿಂದ 2017 ರವರೆಗೆ 5 ಬಾರಿ ಪಂಜಾಬ್ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದರು. ಹೀಗೆ ಪಂಜಾಬ್ ಇತಿಹಾಸದಲ್ಲಿ ಅವರ ಹೆಸರು ಅಚ್ಚಳಿಯದೆ ಉಳಿಯಲಿದೆ.
10 ಬಾರಿ ಶಾಸಕರಾದ ಸಾಧನೆ
ಈಗೆಲ್ಲಾ ಒಂದೆರಡು ಬಾರಿ ಶಾಸಕರಾದರೆ ಸಾಕು ಸಚಿವ ಸ್ಥಾನಕ್ಕೆ ಫೈಟಿಂಗ್ ಶುರುವಾಗುತ್ತದೆ. ಆದರೆ ಪ್ರಕಾಶ್ ಸಿಂಗ್ ಬಾದಲ್ 10 ಬಾರಿ ಶಾಸಕರಾಗಿ ಸಾಧನೆ ಮಾಡಿದ್ದರು. 5 ಬಾರಿ ಪಂಜಾಬ್ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುವ ಜೊತೆಗೆ 3 ಬಾರಿ ಪಂಜಾಬ್ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿಯೂ ಕಾರ್ಯನಿರ್ವಹಿಸಿದ್ದರು. 1972, 1980 ಮತ್ತು 2002ರಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು ಪ್ರಕಾಶ್ ಸಿಂಗ್ ಬಾದಲ್. 1995ರಿಂದ 2008ರವರೆಗೆ ಶಿರೋಮಣಿ ಅಕಾಲಿದಳದ ಅಧ್ಯಕ್ಷರೂ ಆಗಿ ಕಾರ್ಯನಿರ್ವಹಿಸಿದ ಅನುಭವ ಅವರಿಗಿತ್ತು.

ಒಟ್ನಲ್ಲಿ ಪ್ರಕಾಶ್ ಸಿಂಗ್ ಬಾದಲ್ ಅವರ ನಿರ್ಗಮನ ಪಂಜಾಬ್ ರಾಜಕೀಯಕ್ಕೆ ಮಾತ್ರವಲ್ಲ, ಇಡೀ ದೇಶಕ್ಕೇ ತುಂಬಲಾಗದ ನಷ್ಟ. ಬಾದಲ್ ಅವರ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದಾರೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಏಪ್ರಿಲ್ 21 ರಂದು ಮೊಹಾಲಿ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಇಹಲೋಕ ತ್ಯಜಿಸಿದ್ದಾರೆ.












Click it and Unblock the Notifications