ಇನ್ನೂ 6 ತಿಂಗಳು ಕಟ್ಟೆಚ್ಚರ ವಹಿಸುವಂತೆ WHO ವಿಜ್ಞಾನಿ ಎಚ್ಚರಿಕೆ
ನವದೆಹಲಿ, ಆಗಸ್ಟ್ 06: ಕೊರೊನಾ ಮೂರನೇ ಅಲೆ ಆತಂಕ ಎದುರಾಗಿರುವ ಈ ಸಮಯದಲ್ಲಿ ಜನರು ಯಾವುದೇ ಕಾರಣಕ್ಕೂ ಕೊರೊನಾ ನಿಯಮಗಳನ್ನು ಪಾಲನೆ ಮಾಡುವುದರಲ್ಲಿ ನಿರ್ಲಕ್ಷ್ಯ ತೋರಬೇಡಿ ಎಂದು ವಿಶ್ವ ಆರೋಗ್ಯ ಸಂಸ್ಥೆ ವಿಜ್ಞಾನಿ ಡಾ. ಸೌಮ್ಯಾ ಸ್ವಾಮಿನಾಥನ್ ಶುಕ್ರವಾರ ಎಚ್ಚರಿಕೆ ನೀಡಿದ್ದಾರೆ.
ಇನ್ನೂ ಆರು ತಿಂಗಳ ಕಾಲ ಕೊರೊನಾ ನಿಯಮಗಳನ್ನು ಕಠಿಣವಾಗಿ ಪಾಲಿಸಿ ಎಂದು ಜನರಲ್ಲಿ ಮನವಿ ಮಾಡಿದ್ದಾರೆ.
ಇನ್ನೂ ಆರು ತಿಂಗಳ ಕಾಲ ಕಠಿಣವಾಗಿರುತ್ತದೆ. ಅಲ್ಲಿಯವರೆಗೂ ಜನರು ಎಚ್ಚರ ತಪ್ಪಬಾರದು. ಆರು ತಿಂಗಳ ನಂತರ ಹೆಚ್ಚಿನ ಜನಸಂಖ್ಯೆಗೆ ಲಸಿಕೆ ನೀಡಿ ಪೂರೈಸಲಾಗಿರುತ್ತದೆ. ಹೀಗಾಗಿ ಪರಿಸ್ಥಿತಿ ಸುಧಾರಿಸಬಹುದು. ಅಲ್ಲಿಯವರೆಗೂ ಕೊರೊನಾ ನಿಯಮಗಳ ಪಾಲನೆಯೆಡೆಗೆ ನಿರ್ಲಕ್ಷ್ಯ ತೋರಬೇಡಿ ಎಂದು ಮನವಿ ಮಾಡಿದ್ದಾರೆ. ಮುಂದೆ ಓದಿ...

ನಿಮ್ಮ ರಕ್ಷಣೆಗೆ ಏನು ಅವಶ್ಯಕವೋ ಅದನ್ನು ಪಾಲಿಸಿ
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಅವಶ್ಯಕವಿದ್ದರೆ ಮಾತ್ರ ಪ್ರಯಾಣ ಮಾಡಿ. ಫೇಸ್ ಮಾಸ್ಕ್ ಧರಿಸುವುದನ್ನು ಬಿಡಬೇಡಿ. ನಿಮ್ಮ ರಕ್ಷಣೆಗೆ ಏನು ಅವಶ್ಯಕವೋ ಅದನ್ನು ಮರೆಯಬೇಡಿ ಎಂದಿದ್ದಾರೆ. ಕೊರೊನಾ ಮೂರನೇ ಅಲೆ ಆತಂಕ ಎದುರಾಗಿರುವುದರಿಂದ ಜಾಗೃತರಾಗಿರುವುದು ಒಳಿತು ಎಂದು ಎಚ್ಚರಿಸಿದ್ದಾರೆ. ಇದೇ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ವೇಳೆಗೆ ಭಾರತದಲ್ಲಿ ಕೊರೊನಾ ಮೂರನೇ ಅಲೆ ಉತ್ತುಂಗಕ್ಕೇರುವುದಾಗಿ ಹಲವು ಆರೋಗ್ಯ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಎಲ್ಲೆಡೆ ಜನರಿಂದ ತುಂಬಿ ತುಳುಕುವ ಮಾರುಕಟ್ಟೆಗಳು
ಕೊರೊನಾ ಎರಡನೇ ಅಲೆಯ ತೀವ್ರತೆ ತಗ್ಗಿದ ನಂತರ ದೇಶದ ಹಲವು ರಾಜ್ಯಗಳಲ್ಲಿ ತಿಂಗಳ ಹಿಂದೆ ಲಾಕ್‌ಡೌನ್ ತೆರವುಗೊಳಿಸಲಾಯಿತು. ನಂತರ ವ್ಯಾಪಾರ ವಹಿವಾಟನ್ನು ಆರಂಭಿಸಲಾಗಿದ್ದು, ಎಲ್ಲಾ ರೀತಿಯ ಮಾರುಕಟ್ಟೆಗಳನ್ನೂ ತೆರೆಯಲಾಗಿದೆ. ಜನರು ದಂಡು ದಂಡಾಗಿ ಹೋಗಲು ಆರಂಭಿಸಿದ್ದಾರೆ. ಪ್ರವಾಸಿ ತಾಣಗಳನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಸ್ವಾಮಿನಾಥನ್ ಈ ಎಚ್ಚರಿಕೆ ರವಾನಿಸಿದ್ದಾರೆ.

ಕೇರಳದಲ್ಲಿ ಮುಂದುವರೆದ ಕೊರೊನಾ ಆರ್ಭಟ
ಕೇರಳದಲ್ಲಿ ಕೊರೊನಾ ಆರ್ಭಟ ಮುಂದುವರೆದಿದೆ. ರಾಜ್ಯದ ಕೊರೊನಾ ಪ್ರಕರಣ ದಿನೇ ದಿನೇ ಹೆಚ್ಚಾಗುತ್ತಿದೆ. ಜೊತೆಗೆ ಸಾವಿನ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ. ಕೇರಳದಲ್ಲಿ ಕೊರೊನಾ ಸೋಂಕಿನಿಂದಾದ ಸಾವಿನ ಅನುಪಾತ (ಸಿಎಫ್‌ಆರ್) ಮೇ 15 ರಂದು 0.3% ಮತ್ತು ಜುಲೈ 31ರ ವೇಳೆಗೆ 0.49% ಕ್ಕೆ ಏರಿಕೆಯಾಗಿದೆ ಎಂದು ಸಾರ್ವಜನಿಕ ಆರೋಗ್ಯ ತಜ್ಞ ಡಾ. ಪದ್ಮನಾಭ ಶೆಣೈ ಹೇಳಿದ್ದಾರೆ. ಕೇರಳ ಒಳಗೊಂಟು ಎಂಟು ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಿವೆ. ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಲಕ್ಷದ್ವೀಪ, ತಮಿಳುನಾಡು, ಮಿಜೋರಾಂ, ಕರ್ನಾಟಕ, ಪುದುಚೇರಿ ಹಾಗೂ ಕೇರಳದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದಾಗಿ ಕೇಂದ್ರ ಮಾಹಿತಿ ನೀಡಿದೆ.

ಭಾರತದಲ್ಲಿ ಶುಕ್ರವಾರ ಎಷ್ಟಿದೆ ಕೊರೊನಾ ಪ್ರಕರಣ
ಭಾರತದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಶುಕ್ರವಾರ 44643 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಕಳೆದ 24 ಗಂಟೆಗಳಲ್ಲಿ 41,096 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದು, ಇದೇ ಅವಧಿಯಲ್ಲಿ 464 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ 4,26,756 ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಈ ಮೂಲಕ ಭಾರತದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 3,18,56,757ಕ್ಕೆ ಏರಿಕೆಯಾಗಿದೆ. ಈವರೆಗೂ 3,10,15,844 ಸೋಂಕಿತರು ಗುಣಮುಖರಾಗಿದ್ದಾರೆ. ಇದರ ಹೊರತಾಗಿ 4,14,159 ಸಕ್ರಿಯ ಪ್ರಕರಣಗಳಿವೆ.












Click it and Unblock the Notifications