ಮೇವು ಹಗರಣ:ಲಾಲೂ ನಂತರದ ಸರದಿ ನಿತೀಶ್ ಕುಮಾರ್!
ಪಾಟ್ನಾ, ಅ 1: ಮೇವು ಹಗರಣ ಭ್ರಷ್ಟಾಚಾರ ಪ್ರಕರಣದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಬಂಧನದ ನಂತರ ಪ್ರತಿಕ್ರಿಯಿಸಿರುವ ಬಿಜೆಪಿ, ಬಿಹಾರದ ಇನ್ನೊಬ್ಬ ಮುಖ್ಯಮಂತ್ರಿಯೂ ಕಂಬಿ ಎಣಿಸುವ ದಿನ ಸದ್ಯದಲ್ಲೇ ಬರಲಿದೆ ಎಂದು ವ್ಯಾಖ್ಯಾನಿಸಿದೆ.
ಬಿಹಾರದ ಇಬ್ಬರು ಮಾಜಿ ಮುಖ್ಯಮಂತ್ರಿಗಳಾದ ಜಗನ್ನಾಥ್ ಮಿಶ್ರಾ ಅವರ ಮೇಲೆ ದೋಷಾರೋಪಣೆ ಪಟ್ಟಿ ಸಲ್ಲಿಕೆಯಾಗಿದೆ ಮತ್ತು ಲಾಲೂ ಪ್ರಸಾದ್ ಜೈಲು ಸೇರಿದ್ದಾಯಿತು, ಇನ್ನು ಮುಂದಿನ ಸರದಿ ಹಾಲಿ ಸಿಎಂ ನಿತೀಶ್ ಕುಮಾರ್ ಅವರದ್ದು ಎಂದು ಬಿಜೆಪಿ ವಕ್ತಾರ ರಾಜೀವ್ ಪ್ರತಾಪ್ ರೂಢಿ ಹೇಳಿದ್ದಾರೆ.

900 ಕೋಟಿ ರೂಪಾಯಿಯ ಮೇವು ಹಗರಣದಲ್ಲಿ ತಮ್ಮವರಿಗೆ ಲಾಭ ಮಾಡಿಕೊಟ್ಟಿದ್ದಕ್ಕಾಗಿ ನಿತೀಶ್ ಕುಮಾರ್ ಮೇಲೂ ಜಾರ್ಖಂಡ್ ನ್ಯಾಯಾಲಯದಲ್ಲಿ ಮಿಥಿಲೇಶ್ ಸಿಂಗ್ ಎನ್ನುವವರ ದೂರು ದಾಖಲಾಗಿದೆ.
ನವೆಂಬರ್ 22ರೊಳಗೆ ಅಫಿಡವಿಟ್ ಸಲ್ಲಿಸುವಂತೆ ಕೋರ್ಟ್ ಸಿಬಿಐಗೆ ಸೂಚಿಸಿದೆ. ಹೀಗಾಗಿ ಬಿಹಾರದ ಮೂರನೇ ಮುಖ್ಯಮಂತ್ರಿಯೂ ಜೈಲು ಪಾಲಾಗುವ ದಿನ ದೂರವಿಲ್ಲ ಎಂದು ರಾಜೀವ್ ಪ್ರತಾಪ್ ಹೇಳಿದ್ದಾರೆ.
ಸಿಬಿಐ ಅಫಿಡವಿಟ್ ಸಲ್ಲಿಸುವುದೆಂದರೆ ಕಾಂಗ್ರೆಸ್ ಪಕ್ಷದ ನಿರ್ದೇಶನದಂತೆ ನಡೆಯುತ್ತದೆ. ಹಾಗಾಗಿ ಒಂದು ರೀತಿಯಲ್ಲಿ ನಿತೀಶ್ ಕುಮಾರ್ ಭವಿಷ್ಯ ಸೋನಿಯಾ ಗಾಂಧಿ ಕೈಯಲ್ಲಿದೆ ಎನ್ನಬಹುದು ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಲಾಲೂ ಬಂಧನದ ನಂತರ ನಿತೀಶ್ ಕುಮಾರ್ ಇದುವರೆಗೆ ಏನೂ ಹೇಳಿಕೆ ನೀಡಿಲ್ಲ. ಈ ಭ್ರಷ್ಟಾಚಾರ ಪ್ರಕರಣದಿಂದ ಬಿಹಾರ ರಾಜ್ಯಕ್ಕೆ ಕೆಟ್ಟ ಹೆಸರು ಬಂದಿದೆ ಎಂದು ಬಿಜೆಪಿ ವಕ್ತಾರರು ಹೇಳಿದ್ದಾರೆ.












Click it and Unblock the Notifications