Delhi Weather: ಧೂಳಿನ ಬಿರುಗಾಳಿ; ವಿಮಾನ ಹಾರಾಟ ವ್ಯತ್ಯಯ ರೆಡ್ ಅಲರ್ಟ್ ಘೋಷಣೆ
ದೆಹಲಿ ನಗರದಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶುಕ್ರವಾರ ಸಂಜೆ ಬೀಸಿದ ಧೂಳಿನ ಬಿರುಗಾಳಿಯಿಂದ ಜನ ತತ್ತರಿಸಿದರು. ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ (ಐಜಿಐ) ನಿಲ್ದಾಣದಲ್ಲಿ 15 ಕ್ಕೂ ಹೆಚ್ಚು ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಯಿತು. ಶನಿವಾರ ಕೂಡ ನಗರದಲ್ಲಿ ಬಿರುಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
ಪ್ರತಿಕೂಲ ಹವಾಮಾನದಿಂದಾಗಿ ದೆಹಲಿ ವಿಮಾನ ನಿಲ್ದಾಣದ ಕೆಲವು ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿದೆ. "ಇತ್ತೀಚಿನ ವಿಮಾನಗಳ ಮಾಹಿತಿಗಾಗಿ ಪ್ರಯಾಣಿಕರು ತಮ್ಮ ವಿಮಾನಯಾನ ಸಂಸ್ಥೆಗಳನ್ನು ಸಂಪರ್ಕಿಸಲು ಸೂಚಿಸಲಾಗಿದೆ," ಎಂದು ವಿಮಾನ ನಿಲ್ದಾಣದ ನಿರ್ವಾಹಕ DIAL ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.

ದೆಹಲಿ ಮತ್ತು ಜೈಪುರದಲ್ಲಿ ಧೂಳಿನ ಬಿರುಗಾಳಿ ಬೀಸುತ್ತಿದ್ದು, ಇದು ಟೇಕ್‌ಆಫ್ ಮತ್ತು ಲ್ಯಾಂಡಿಂಗ್ ಮೇಲೆ ಪರಿಣಾಮ ಬೀರುತ್ತದೆ ಮತ್ತು ವಾಯು ಸಂಚಾರ ದಟ್ಟಣೆಗೆ ಕಾರಣವಾಗಬಹುದು ಎಂದು ಇಂಡಿಗೋ ಹೇಳಿದೆ. ಇದರಿಂದ ವಿಮಾನಗಳ ಆಗಮನ ಮತ್ತು ನಿರ್ಗಮನ ವಿಳಂಬ ಅಥವಾ ತಿರುವುಗಳಿಗೆ ಕಾರಣವಾಗಬಹುದು ಎಂದು ಮಾಹಿತಿ ನೀಡಿದೆ.
ಭಾರತೀಯ ಹವಾಮಾನ ಇಲಾಖೆ (IMD) ದೆಹಲಿ ಮತ್ತು ಪಕ್ಕದ ಎನ್‌ಸಿಆರ್ ಪ್ರದೇಶಕ್ಕೆ ರೆಡ್ ಅಲರ್ಟ್ ನೀಡಿದ್ದು, ಮುಂದಿನ ಕೆಲವು ಗಂಟೆಗಳ ಕಾಲ ಪ್ರತಿಕೂಲ ಹವಾಮಾನ ಪರಿಸ್ಥಿತಿ ಇರಲಿದೆ ಎಂದು ಎಚ್ಚರಿಕೆ ಕೊಟ್ಟಿದೆ.
ಭಾರೀ ಗುಡುಗು ಸಹಿತ ಮಳೆ ಮತ್ತು ಬಿರುಗಾಳಿಯು ಉತ್ತರ ಭಾರತದ ಕೆಲವು ಭಾಗಗಳಲ್ಲಿ ವಿಮಾನ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರಿದೆ ಎಂದು ಏರ್ ಇಂಡಿಯಾ ತನ್ನ ಪ್ರಯಾಣಿಕರಿಗೆ ಮಾಹಿತಿ ನೀಡಿದೆ. ದೆಹಲಿಗೆ ಆಗಮಿಸುವ ಏರ್ ಇಂಡಿಯಾ ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದೆ ಅಥವಾ ಆಗಮನ ಸಮಯವನ್ನು ವಿಳಂಬಗೊಳಿಸಲಾಗಿದೆ ಎಂದು ಹೇಳಿದೆ.
ಎರಡನೇ ದಿನವೂ ಧೂಳಿನ ಬಿರುಗಾಳಿ
ದೆಹಲಿ ಮತ್ತು ಅದರ ಪಕ್ಕದ ಪ್ರದೇಶಗಳಾದ ನೋಯ್ಡಾ, ಗಾಜಿಯಾಬಾದ್ ಮತ್ತು ಗುರುಗ್ರಾಮ್ ಈ ವಾರ ಎರಡನೇ ಬಾರಿಗೆ ಧೂಳಿನ ಬಿರುಗಾಳಿಗೆ ಸಾಕ್ಷಿಯಾಗಿವೆ. ಬಿರುಗಾಳಿಯಿಂದಾಗಿ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಕಡಿತಗೊಂಡಿದೆ. ಆದರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವರದಿಗಳು ತಿಳಿಸಿದೆ.
ನಗರದಲ್ಲಿ ಬಿಸಿಲಿನ ಅಲೆ ಅಪ್ಪಳಿಸಿದ ನಂತರ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದಂತೆ ಗುಡುಗು ಸಹಿತ ಕೆಲವು ಪ್ರದೇಶಗಳಲ್ಲಿ ಹಗುರ ಮಳೆಯಾಗಿದೆ. ಧೂಳಿನ ಬಿರುಗಾಳಿಯಿಂದಾಗಿ ದೆಹಲಿಯ ಗಾಳಿಯ ಗುಣಮಟ್ಟ ಹಗಲಿನಲ್ಲಿ ಕಳಪೆ ಮಟ್ಟಕ್ಕೆ ತಲುಪಿದ್ದರೆ ಸಂಜೆ ವೇಳೆಗೆ ಮಧ್ಯಮವಾಗಿತ್ತು, ಸಿಪಿಸಿಬಿಯ ರೋಹಿಣಿ ಕೇಂದ್ರದಲ್ಲಿ ರಾತ್ರಿ 8 ಗಂಟೆಗೆ ಎಕ್ಯೂಐ 150 ದಾಖಲಾಗಿದೆ. ಏಪ್ರಿಲ್ 12 ರಂದು ದೆಹಲಿಯಲ್ಲಿ ಮೋಡ ಕವಿದ ವಾತಾವರಣದೊಂದಿಗೆ ನಗರದಲ್ಲಿ ಹಗುರ ಮಳೆಯಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.












Click it and Unblock the Notifications