ಪಂಚರಾಜ್ಯ ಫಲಿತಾಂಶ: ವಿಜಯ್-ಬಿಜೆಪಿ ಬಲವರ್ಧನೆ, ರಾಜಕಾರಣದ ಹೊಸ ದಿಕ್ಕಿನಲ್ಲಿ ಕರ್ನಾಟಕ, ದಕ್ಷಿಣ ಭಾರತಕ್ಕೆ ಹತ್ತಾರು ಸವಾಲು
Five-State Verdict: ದೇಶದ ರಾಜಕೀಯ ಇತಿಹಾಸದಲ್ಲೇ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯ ಫಲಿತಾಂಶವು ಹೊಸ ಭಾಷ್ಯ ಬರೆದಿದೆ. ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳಂ, ಅಸ್ಸಾಂ ಹಾಗೂ ಪುದುಚೇರಿ ವಿಧಾನಸಭೆ ಚುನಾವಣೆಗಳ ಮತಎಣಿಕೆ ಮುಕ್ತಾಯವಾಗಿದ್ದು, ಮೇ 4ರ ಸೋಮವಾರ ಫಲಿತಾಂಶ ಪ್ರಕಟವಾಗಿದೆ. ಈ ಬಾರಿಯ ಫಲಿತಾಂಶವು ಹಲವು ಕಾರಣಗಳಿಗೆ ಮಹತ್ವ ಪಡೆದುಕೊಂಡಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮೊದಲ ಬಾರಿಗೆ ಅಧಿಕಾರಕ್ಕೇರಿದೆ. ತಮಿಳುನಾಡಿನಲ್ಲಿ ನಟ - ರಾಜಕಾರಣಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಳಂ ಪಕ್ಷವು ಅಭೂತಪೂರ್ವ ಸಾಧನೆ ಮಾಡಿದೆ. ಮೊಟ್ಟ ಮೊದಲ ಬಾರಿ ತಮಿಳುನಾಡಿನಲ್ಲಿ ಅಧಿಕಾರಕ್ಕೇರುವುದಕ್ಕೆ ವಿಜಯ್‌ಗೆ ಇನ್ನು ಒಂದೇ ಒಂದು ಹೆಜ್ಜೆ ಮಾತ್ರ ಬಾಕಿ ಇದೆ.
ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಕರ್ನಾಟಕ - ಭಾರತದ ರಾಜಕೀಯದ ಮೇಲೆ ಹೇಗೆ ಪರಿಣಾಮ ಬೀರಲಿದೆ ಎನ್ನುವುದು ಈಗ ಎದುರಾಗಿರುವ ಕುತೂಹಲ. ಇದಕ್ಕೆ ಮುಖ್ಯ ಕಾರಣ ಈ ಬಾರಿ ಹಲವು ಅಚ್ಚರಿಯ ಫಲಿತಾಂಶಗಳನ್ನು ಈ ಬಾರಿಯ ಚುನಾವಣೆ ಫಲಿತಾಂಶ ತಂದಿದೆ. ಈ ಐದು ವಿಧಾನಸಭೆಗಳ ಚುನಾವಣೆಯು ಕರ್ನಾಟಕದ ಮೇಲೆ, ದಕ್ಷಿಣ ಭಾರತದ ಮೇಲೆ, ಉತ್ತರ - ಈಶಾನ್ಯ ಭಾರತದಲ್ಲಿ ಮತ್ತು ಬಿಜೆಪಿ - ಕಾಂಗ್ರೆಸ್ ಪಕ್ಷಗಳ ಮೇಲೆ ಯಾವ ರೀತಿ ಪ್ರಭಾವ ಬೀರಲಿದೆ ಎನ್ನುವ ಸಂಪೂರ್ಣ ವಿಶ್ಲೇಷಣೆ ಇಲ್ಲಿದೆ.

ದಕ್ಷಿಣ ಭಾರತದ ಮೇಲೆ ಏನು ಪ್ರಭಾವ?
ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದಲ್ಲಿ ಆಡಳಿತರೂಢ ಪಕ್ಷಗಳ ಸೋಲು ದಕ್ಷಿಣ ಭಾರತಕ್ಕೆ ಮೈನಸ್ ಎಂದೇ ಪರಿಣಗಣಿಸಲಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಈಚೆಗೆ ಎನ್‌ಡಿಎ ಕೇಂದ್ರದಲ್ಲಿ ಮಹಿಳಾ ಮೀಸಲಾತಿ ಆಧಾರದ ಮೇಲೆ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆಗೆ ಮುಂದಾಗಿತ್ತು. ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆಯಿಂದಾಗಿ ಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣ ಭಾರತಕ್ಕೆ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಕಡಿಮೆಯಾಗಲಿದೆ. ಇದನ್ನು ಉಗ್ರವಾಗಿ ವಿರೋಧಿಸಿದ್ದ ಎರಡು ಪಕ್ಷಗಳೆಂದರೆ ಡಿಎಂಕೆ ಹಾಗೂ ಟಿಎಂಸಿ.
ಆದರೆ, ಇದೀಗ ಆಯಾ ರಾಜ್ಯಗಳಲ್ಲಿ ಈ ಎರಡೂ ಪಕ್ಷಗಳು ಸೋಲು ಅನುಭವಿಸಿರುವುದರಿಂದ ರಾಷ್ಟ್ರ ಮಟ್ಟದಲ್ಲಿನ ಹೋರಾಟಕ್ಕೆ ಹಿನ್ನಡೆಯಾಗಿದೆ. ಲೋಕಸಭೆಯ ಹಾಲಿ ಸ್ಥಾನಗಳ ಮೇಲೆ ಇದು ಪ್ರಭಾವ ಬೀರುವುದಿಲ್ಲವಾದರೂ, ಬಿಜೆಪಿಗೆ ಬಲ ಹೆಚ್ಚಾಗಲಿದೆ. ಬಿಜೆಪಿಯ ನಿರ್ಧಾರಗಳನ್ನು ವಿರೋಧಿಸುವ ಧ್ವನಿಯು ಕ್ಷೀಣವಾಗಲಿದೆ.
ಕರ್ನಾಟಕಕ್ಕೆ ಸಾಧಕ-ಬಾಧಕ
ತಮಿಳುನಾಡಿನಲ್ಲಿ ವಿಜಯ್ ಅವರ ಗೆಲುವು ಕರ್ನಾಟಕದ ಮೇಲೆ ಎರಡು ಮಾದರಿಯಲ್ಲಿ ಪ್ರಭಾವ ಬೀರುವ ಸಾಧ್ಯತೆ ಇದೆ. ಮೊದಲನೆಯದು ತಮಿಳುನಾಡಿನಲ್ಲಿ ಯಾರು ಅಧಿಕಾರಕ್ಕೆ ಬರಲಿದ್ದಾರೆ ಎನ್ನುವ ಆಧಾರದ ಮೇಲೆ ಕರ್ನಾಟಕದ ಕಾವೇರಿ ನದಿ ನೀರು ಹಂಚಿಕೆ ವಿವಾದ ಹಾಗೂ ಮೇಕೆದಾಟು ಯೋಜನೆಗಳ ವಿಚಾರದ ಸಾಧಕ - ಬಾಧಕ ನಿರ್ಧಾರವಾಗುತ್ತದೆ. ಟಿವಿಕೆ ಪಕ್ಷವು ಇಲ್ಲಿಯವರೆಗೆ ಮುಕ್ತವಾಗಿ ಕರ್ನಾಟಕ ಮತ್ತು ತಮಿಳುನಾಡಿನ ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿಲ್ಲ. ಅಲ್ಲದೆ ಟಿವಿಕೆ ಪಕ್ಷಕ್ಕೆ ಪೂರ್ಣ ಬಹುಮತ ಸಿಕ್ಕಿಲ್ಲ. ಹೀಗಾಗಿ, ಟಿವಿಕೆ ಯಾವ ಪಕ್ಷದ ಬೆಂಬಲ ಪಡೆಯಲಿದೆ ಹಾಗೂ ಆ ರಾಜ್ಯದ ಆಡಳಿತ ಯಾವ ರೀತಿ ಇರಲಿದೆ ಎನ್ನುವುದು ಕರ್ನಾಟಕಕ್ಕೂ ಮುಖ್ಯವಾಗುತ್ತದೆ. ಈ ಬಾರಿ ಮಳೆ ಕೊರತೆಯೂ ಇರುವುದರಿಂದ ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಕಾವೇರಿ ನದಿ ನೀರಿನ ಹಂಚಿಕೆ ವಿಚಾರವು ಗಂಭೀರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ.
ಉತ್ತರ - ಈಶಾನ್ಯ ಭಾರತದಲ್ಲಿ
ಇನ್ನು ಉತ್ತರ ಮತ್ತು ಈಶಾನ್ಯ ಭಾರತದಲ್ಲಿ ಬಿಜೆಪಿಯ ಬಲವು ಹೆಚ್ಚಾಗುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಇದೇ ಮೊದಲ ಬಾರಿ ಬಿಜೆಪಿ ಪಕ್ಷವು ಅಧಿಕಾರಕ್ಕೆ ಬಂದಿದೆ. ಪಶ್ಚಿಮ ಬಂಗಾಳದಲ್ಲಿ ಸುದೀರ್ಘ 15 ವರ್ಷಗಳ ಮಮತಾ ಬ್ಯಾನರ್ಜಿ ಆಡಳಿತ ಅಂತ್ಯವಾಗಿದೆ. ಇದಕ್ಕೂ ಮೊದಲು ಈ ರಾಜ್ಯದಲ್ಲಿ 34 ವರ್ಷಗಳ ಕಾಲ ಕಮ್ಯುನಿಸ್ಟ್ ಪಕ್ಷ ಆಡಳಿತದಲ್ಲಿತ್ತು. ಸುದೀರ್ಘ ಸವಾಲುಗಳನ್ನು ದಾಟಿಕೊಂಡು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಅಸ್ಸಾಂನಲ್ಲಿಯೂ ಮತ್ತೊಮ್ಮೆ ಬಿಜೆಪಿಯದ್ದೇ ಕಾರುಬಾರು.
ಉತ್ತರ ಭಾರತ ಹಾಗೂ ಈಶಾನ್ಯ ಭಾರತದ ರಾಜ್ಯಗಳಲ್ಲಿ ಬಿಜೆಪಿ ತನ್ನ ಹಿಡಿತ ಬಿಗಿಗೊಳಿಸುತ್ತಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿಗೆ ಇದು ವರದಾನವಾಗುವ ಎಲ್ಲಾ ಸಾಧ್ಯತೆಗಳು ಸಹ ಇದೆ. 2029ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಲಾಭವಾಗುವ ಅಥವಾ ಬಿಜೆಪಿ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸುವುದಕ್ಕೆ ನೆರವಾಗಲಿದೆ.
2027ರಲ್ಲಿ ಗೋವಾ, ಮಣಿಪುರ, ಪಂಜಾಬ್, ಉತ್ತರಾಖಂಡ್, ಉತ್ತರ ಪ್ರದೇಶ, ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು. ಈ ರಾಜ್ಯಗಳಲ್ಲೂ ಬಿಜೆಪಿ ಗೆಲುವಿನ ನಾಗಾಲೋಟ ಮುಂದುವರಿಸುವ ಸಾಧ್ಯತೆ ಇದೆ.
ಬಿಜೆಪಿ - ಕಾಂಗ್ರೆಸ್ ಪಕ್ಷಗಳ ಮೇಲೇನು ಪ್ರಭಾವ?
ಈ ಬಾರಿಯ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಕೇರಳಂನಲ್ಲಿಯೂ ಕಳೆದ ಬಾರಿಗಿಂತ ಬಿಜೆಪಿ ಉತ್ತಮ ಸಾಧನೆ ಮಾಡಿದೆ. ಕೇರಳಂನಲ್ಲಿ ಯುಡಿಎಫ್ - ಕಾಂಗ್ರೆಸ್ ಪಕ್ಷವು ಗೆದ್ದಿದೆಯಾದರೂ, ಅದಕ್ಕೆ ಮುಖ್ಯ ಕಾರಣವಾಗಿರುವುದು ಕಳೆದ 10 ವರ್ಷಗಳಿಂದ ಈ ರಾಜ್ಯದಲ್ಲಿ ಆಡಳಿತದಲ್ಲಿದ್ದ ಎಲ್‌ಡಿಎಫ್‌ನ ಆಡಳಿತ ವಿರೋಧಿ ಅಲೆ. ಸಾಮಾನ್ಯವಾಗಿ ತಮಿಳುನಾಡಿನಂತೆಯೇ ಕೇರಳಂನಲ್ಲೂ ಪ್ರತಿ ಐದು ವರ್ಷಗಳಿಗೊಮ್ಮೆ ಜನ ಬೇರೆ ಬೇರೆ ಪಕ್ಷಗಳಿಗೆ ಅಧಿಕಾರ ನೀಡುತ್ತಾರೆ. ಆದರೆ ಕೋವಿಡ್ ನಿರ್ವಹಣೆಯ ಕಾರಣಕ್ಕೆ ಎಲ್‌ಡಿಎಫ್ ಎರಡನೇ ಬಾರಿ ಅಧಿಕಾರಕ್ಕೇರಿತ್ತು. ಆದರೆ ಕಳೆದ ಐದು ವರ್ಷಗಳಲ್ಲಿ ಈ ರಾಜ್ಯದಲ್ಲಿ ಎಲ್‌ಡಿಎಫ್‌ನ ಆಡಳಿತದಲ್ಲಿ ಹಲವು ಸಮಸ್ಯೆಗಳಿದ್ದವು. ಅದರ ಪರಿಣಾಮವೇ ಇಂದಿನ ಕೇರಳಂ ವಿಧಾನಸಭೆ ಚುನಾವಣೆಯ ಫಲಿತಾಂಶ.
ಗ್ಯಾರಂಟಿ ಯೋಜನೆಗಳ ದರ್ಬಾರ್
ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಹೆಚ್ಚು ಸದ್ದು ಮಾಡಿದ್ದು ಗ್ಯಾರಂಟಿ ಯೋಜನೆಗಳ ವಿಷಯ. ತಮಿಳುನಾಡಿನಲ್ಲಿ ಎರಡೂವರೆ ವರ್ಷಗಳ ಹಿಂದೆ ಉದಯಿಸಿದ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ ಪಕ್ಷವೂ ಸೇರಿದಂತೆ ಬಿಜೆಪಿ - ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷಗಳು ಸಹ ಈ ಬಾರಿಯ ವಿಧಾನಸಭೆ ಚುನಾವಣೆಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿವೆ. ಆದರೆ ಅದರ ಅನುಷ್ಠಾನ ಅಂದುಕೊಂಡಷ್ಟು ಸುಲಭವಲ್ಲ. ಈಗಾಗಲೇ ಗ್ಯಾರಂಟಿ ಯೋಜನೆಗಳನ್ನು ನಿಭಾಯಿಸಲು ಸಾಧ್ಯವಾಗದೆ ತೆಲಂಗಾಣ ಸರ್ಕಾರ ಹಾಗೂ ಹಿಮಾಚಲ ಪ್ರದೇಶ ಸರ್ಕಾರವು ಹೈರಾಣಾಗಿದೆ. ಕೇರಳಂ ಈಗಾಗಲೇ ಆರ್ಥಿಕ ಸಂಕಷ್ಟವನ್ನು ಅನುಭವಿಸುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಗ್ಯಾರಂಟಿ ಯೋಜನೆಗಳು ಹೇಗೆ ನಿಭಾಯಿಸಲು ಸಾಧ್ಯ ಎನ್ನುವ ವಿಚಾರವೂ ಸಹ ಹೆಚ್ಚು ಚರ್ಚೆ ಆಗುತ್ತಿದೆ.
ಒಟ್ಟಾರೆ ಇದೆಲ್ಲವನ್ನು ನೋಡಿದರೆ, ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷದ ಪುನಶ್ಚೇತನ ಸಾಧ್ಯವಾಗುತ್ತಿಲ್ಲ. ಬಿಜೆಪಿ ಪುಟಿದೇಳುತ್ತಲ್ಲೇ ಇದೆ ಎನ್ನುವ ಅಭಿಪ್ರಾಯ ಮೂಡಿದೆ.














Click it and Unblock the Notifications