ದೇವರಿಗೆ ದಂಡ: ಭಜರಂಗ ಬಲಿಗೆ ನೋಟಿಸ್ ನೀಡಿದ ರೈಲ್ವೇ ಇಲಾಖೆ!
ದೇವಸ್ಥಾನದ ಅರ್ಚಕನಿಗೆ ನೋಟಿಸ್ ನೀಡುವ ಬದಲಿಗೆ ದೇವಸ್ಥಾನದಲ್ಲಿರುವ ದೇವರಿಗೆ ನೋಟಿಸ್ ಜಾರಿ ಮಾಡುವ ಮೂಲಕ ರೈಲ್ವೆ ಇಲಾಖೆ ಎಡವಟ್ಟು ಮಾಡಿದೆ.
ಇತ್ತೀಚಿಗೆ ನಡೆದ ಘಟನೆಯಿಂದಾಗಿ ಮಧ್ಯಪ್ರದೇಶದಾದ್ಯಂತ ಬಹಳಷ್ಟು ಭಜರಂಗ ಬಲಿ ಭಕ್ತರು ಕೋಪಗೊಂಡು ಆಕ್ರೋಶ ಹೊರಹಾಕಿದ್ದಾರೆ. ಭಾರತೀಯ ರೈಲ್ವೆಯು ದೇವಸ್ಥಾನದ ಅರ್ಚಕನಿಗೆ ನೋಟಿಸ್ ನೀಡುವ ಬದಲಿಗೆ ದೇವಸ್ಥಾನದಲ್ಲಿರುವ ಭಜರಂಗ ಬಲಿಗೆ ನೋಟಿಸ್ ನೀಡಿ ಎಡವಟ್ಟು ಮಾಡಿದೆ.
ಮೊರೆನಾ ಜಿಲ್ಲೆಯ ಸಬಲ್ಗಢ್ ಪಟ್ಟಣದಲ್ಲಿರುವ ರೈಲ್ವೇ ಭೂಮಿಯನ್ನು ಅತಿಕ್ರಮಣ ಮಾಡಿರುವ ಬಗ್ಗೆ ಭಾರತೀಯ ರೈಲ್ವೆ ಇಲಾಖೆಯು ಮಧ್ಯಪ್ರದೇಶದ ಭಜರಂಗ್ ಬಲಿಗೆ ನೋಟಿಸ್ ನೀಡಿದೆ. ಇದರಿಂದ ತೀವ್ರ ಆಕ್ರೋಶ ವ್ಯಕ್ತವಾದ ನಂತರ ನೋಟಿಸ್ ಅನ್ನು ತ್ವರಿತವಾಗಿ ಹಿಂಪಡೆಯಲಾಗಿದೆ.
ಮಾಧ್ಯಮ ವರದಿಗಳ ಪ್ರಕಾರ, ಭಾರತೀಯ ರೈಲ್ವೇಯು ಫೆಬ್ರವರಿ 8 ರಂದು ಭಜರಂಗ ಬಲಿಯನ್ನು ಉದ್ದೇಶಿಸಿ ಅತಿಕ್ರಮಣ ನೋಟಿಸ್ ನೀಡಿದ್ದು, ಏಳು ದಿನಗಳಲ್ಲಿ ರೈಲ್ವೆ ಭೂಮಿಯ ಮೇಲಿನ ಅತಿಕ್ರಮಣವನ್ನು ತೆಗೆದುಹಾಕದಿದ್ದರೆ ದೇವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ. ಹಿಂದೂ ದೇವರಿಗೆ ನೀಡಿದ ನೋಟಿಸ್ ರೈಲ್ವೇ ವಿರುದ್ಧ ಆಕ್ರೋಶದ ಅಲೆಯನ್ನು ಎಬ್ಬಿಸಿದೆ.

ಭಗವಾನ್ ಹನುಮಾನ್ ಜಿ ಹೆಸರಿನಲ್ಲಿ ನೋಟಿಸ್ ಜಾರಿಯಾಗಿರುವ ಮಾಹಿತಿಯು ಇಡೀ ಮೊರೆನಾ ಜಿಲ್ಲೆಗೆ ವೇಗವಾಗಿ ಹರಡಿದೆ. ಇದಕ್ಕೆ ಸ್ಥಳೀಯರು ಮತ್ತು ಹಿಂದುತ್ವ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ರೈಲ್ವೇ ನಿರ್ಲಕ್ಷ್ಯದ ವಿರುದ್ಧ ಸ್ಥಳೀಯ ಜನರೂ ಧ್ವನಿ ಎತ್ತಿದ್ದಾರೆ.
ರೈಲ್ವೇ ನೋಟಿಸ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಂಸ್ಥೆ ಮಾಡಿದ ತಪ್ಪಿಗೆ ನೆಟಿಜನ್‌ಗಳು ದಿಗ್ಭ್ರಮೆಗೊಂಡಿದ್ದಾರೆ. ಭಾರತೀಯ ರೈಲ್ವೇ ಇಂತಹ ತಪ್ಪನ್ನು ಮಾಡಿದೆ ಎಂದು ಹಲವರು ವ್ಯಂಗ್ಯವಾಗಿದ್ದಾರೆ. ನಂತರ ಸಂಸ್ಥೆಯು ನೋಟಿಸ್ ಅನ್ನು ಹಿಂತೆಗೆದುಕೊಂಡಿತು.
ಝಾನ್ಸಿ ರೈಲ್ವೇ ವಿಭಾಗದ PRO ಆರಂಭಿಕ ಸೂಚನೆಯನ್ನು ತಪ್ಪಾಗಿ ನೀಡಲಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಈಗ ದೇವಸ್ಥಾನದ ಅರ್ಚಕರಿಗೆ ಹೊಸ ನೋಟಿಸ್ ನೀಡಲಾಗಿದೆ ಎಂದು ಪಿಆರ್‌ಒ ತಿಳಿಸಿದ್ದಾರೆ.

ರಾಯಗಢದಲ್ಲಿ ದೇವರಿಗೆ ನೋಟಿಸ್
ಕಳೆದ ವರ್ಷ ಇಂತಹದ್ದೇ ಘಟನೆ ರಾಯಗಢ್‌ನಲ್ಲಿ ನಡೆದಿತ್ತು. ರಾಯಗಢ್ ಮುನ್ಸಿಪಲ್ ಕಾರ್ಪೋರೇಷನ್ ವಾಟರ್ ಬಿಲ್ ಕಟ್ಟಲು ದೇವರಿಗೆ ನೋಟಿಸ್ ನೀಡಿತ್ತು. ನೀರಿನ ಬಿಲ್ ಪಾವತಿಸುವಂತೆ ಮಹಾನಗರ ಪಾಲಿಕೆ ಕಚೇರಿ 'ಬಜರಂಗಬಲಿ'ಗೆ ನೋಟಿಸ್ ಕಳುಹಿಸಿತ್ತು. ಛತ್ತೀಸ್‌ಗಢದ ರಾಯಗಢ ನಗರದ ಪುರಸಭೆ ಆಡಳಿತವು ವಾರ್ಡ್ ನಲ್ಲಿರುವ ಹನುಮಾನ್ ದೇವಸ್ಥಾನಕ್ಕೆ ನೋಟಿಸ್ ಜಾರಿ ಮಾಡಿತ್ತು. ದೇವಸ್ಥಾನದ ಆಡಳಿತಕ್ಕೆ ಸಂಬಂಧಿಸಿದ ಕೆಲವರ ಹೆಸರಲ್ಲಿ ಈ ನೋಟಿಸ್ ಜಾರಿಯಾಗಬೇಕಿತ್ತು. ಆದರೆ ಅಧಿಕಾರಿಗಳು, ನೌಕರರು ಆತುರ ತೋರಿ ಹನುಮಂತ ದೇವರ ಹೆಸರಲ್ಲಿ ನೋಟಿಸ್ ಮಾಡಿದ್ದರು.












Click it and Unblock the Notifications