ವಾಹನ ಸವಾರರೇ ಗಮನಿಸಿ: ಜನವರಿ 31ರೊಳಗೆ ಈ ಕೆಲಸ ಮಾಡದಿದ್ರೆ ಹಣ ಇದ್ದರೂ ಫಾಸ್ಟ್ಯಾಗ್ ನಿಷ್ಕ್ರಿಯ
ಬೆಂಗಳೂರು, ಜನವರಿ, 16: ರಾಷ್ಟ್ರೀಯ ಹೆದ್ದಾರಿ ಪ್ರಧಿಕಾರ ತೆಗೆಕೊಂಡಿರುವ ಈ ನಿರ್ಧಾರವನ್ನು ವಾಹನ ಸವಾರರು ಗಮನಿಸಲೇಬೇಕಾಗಿದೆ. ಏನದು ನಿರ್ಧಾರ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆಯ ದಕ್ಷತೆಯನ್ನು ಹೆಚ್ಚಿಸಲು ಮತ್ತು ಟೋಲ್ ಪ್ಲಾಜಾಗಳಲ್ಲಿ ತಡೆರಹಿತ ಚಲನೆಯನ್ನು ಒದಗಿಸಲು, ಹೆದ್ದಾರಿ ಪ್ರಾಧಿಕಾರ ಒಂದು ವಾಹನ, ಒಂದು ಫಾಸ್ಟ್ಯಾಗ್' ಎಂಬ ನಿಯಮವನ್ನು ಜಾರಿಗೆ ತಂದಿದೆ. ಬ್ಯಾಲೆನ್ಸ್ ಹೊಂದಿರುವ ಆದರೆ, ಮಾಲೀಕರು ಬ್ಯಾಂಕ್‌ಗಳೊಂದಿಗೆ KYC ಅನ್ನು ಪೂರ್ಣಗೊಳಿಸದ ಫಾಸ್ಟ್ಯಾಗ್‌ಗಳನ್ನು ಜನವರಿ 31ರ ನಂತರ ನಿಷ್ಕ್ರಿಯಗೊಳಿಸಲಾಗುವುದು ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.

ಫಾಸ್ಟ್ಟ್ಯಾಗ್ ಬಳಕೆದಾರರು 'ಒಂದು ವಾಹನ, ಒಂದು ಫಾಸ್ಟ್ಯಾಗ್' ಅನ್ನು ಅನುಸರಿಸಬೇಕು ಮತ್ತು ಈ ಹಿಂದೆ ನೀಡಲಾದ ಎಲ್ಲಾ ಫಾಸ್ಟ್ಯಾಗ್‌ಗಳನ್ನು ಆಯಾ ಬ್ಯಾಂಕ್‌ಗಳ ಮೂಲಕ ತ್ಯಜಿಸಬೇಕು. 2024ರ ಜನವರಿ 31ರ ನಂತರ ಹಿಂದಿನ ಟ್ಯಾಗ್‌ಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ ಅಥವಾ ಕಪ್ಪುಪಟ್ಟಿಗೆ ಸೇರಿಸಲಾಗುವುದರಿಂದ ಇತ್ತೀಚಿನ ಫಾಸ್ಟ್ಟ್ಯಾಗ್ ಖಾತೆ ಮಾತ್ರ ಸಕ್ರಿಯ ಆಗಿರುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಆರ್‌ಬಿಐ ಆದೇಶವನ್ನು ಉಲ್ಲಂಘಿಸಿ ನಿರ್ದಿಷ್ಟ ವಾಹನಕ್ಕೆ ಬಹು ಫಾಸ್ಟ್ಯಾಗ್‌ಗಳನ್ನು ನೀಡಲಾಗಿದೆ ಮತ್ತು ಕೆವೈಸಿ ಇಲ್ಲದೆ ಫಾಸ್ಟ್ಯಾಗ್‌ಗಳನ್ನು ನೀಡಲಾಗಿದೆ ಎಂಬ ಇತ್ತೀಚಿನ ವರದಿಗಳ ನಂತರ ಎನ್‌ಎಚ್‌ಎಐ ಈ ಕ್ರಮ ಕೈಗೊಂಡಿದೆ.
ಎಂಟ್ರಿ, ಎಕ್ಸಿಟ್ ಟೋಲ್
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಆರಂಭವಾದಾಗಿನಿಂದಲೂ ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಲ್ಲಿರುತ್ತಿತ್ತು. ಇದೀಗ ಈ ಎಕ್ಸ್‌ಪ್ರೆಸ್ ವೇನಲ್ಲಿ ಇನ್ಮುಂದೆ ಪ್ರಯಾಣಿಕರು ಸಂಚರಿಸಿದ ದೂರಕ್ಕಷ್ಟೇ ಟೋಲ್ ಪಾವತಿಸುವ ವ್ಯವಸ್ಥೆ ಜಾರಿಗೆ ತರಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದ್ದು, ಎಂಟ್ರಿ ಎಕ್ಸಿಟ್‌ಗಳಿಗೆ ಪ್ರತ್ಯೇಕ ಟೋಲ್‌ಬೂತ್ ಅಳವಡಿಸಲು ನಿರ್ಧಾರ ಮಾಡಿದೆ. ಹಾಗಾದರೆ ಇದರಿಂದ ಏನೆಲ್ಲಾ ಪ್ರಯೋಜನೆಗಳಾಗಲಿವೆ ಎಂದು ಇಲ್ಲಿ ತಿಳಿಯಿರಿ.
ಈ ಹೊಸ ಟೋಲ್ ನಿಯಮ ಜಾರಿ ಆದರೆ ಪ್ರಯಾಣಿಕರು ರಸ್ತೆಯಲ್ಲಿ ಪ್ರಯಾಣಿಸಿದಷ್ಟು ದೂರ ಮಾತ್ರ ಟೋಲ್ ಶುಲ್ಕ ಪಾವತಿಸಬಹುದು. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಸುರಕ್ಷತಾ ಕಾಮಗಾರಿಗಳನ್ನು ಕೈಗೊಳ್ಳಲು ಪ್ರಾಧಿಕಾರ 688 ಕೋಟಿ ರೂಪಾಯಿನಲ್ಲಿ ವಿವಿಧ ಕಾಮಗಾರಿಗಳಿಗೆ ಟೆಂಡರ್ ಕರೆದಿದೆ.
ಎಂಟ್ರಿ ಎಕ್ಸಿಟ್‌ಗಳನ್ನು ಕ್ಲೋಸ್ಡ್ ಟೋಲ್‌ಗಳಾಗಿ ಪರಿವರ್ತಿಸುವ ಕಾಮಗಾರಿಯೂ ಈ ಟೆಂಡರ್‌ನಲ್ಲಿ ಒಳಗೊಂಡಿದೆ ಎಂದು ಪ್ರಧಿಕಾರದ ಮೂಲಗಳು ತಿಳಿಸಿವೆ. ಇದು ಜಾರಿಯಾದರೆ ಸ್ವಲ್ಪ ದೂರ ಪ್ರಯಾಣಿಸಿದರೂ ಪೂರ್ಣ ಟೋಲ್ ಪಾವತಿಸುವುದು ತಪ್ಪಲಿದೆ.
ಬೆಂಗಳೂರು-ಮೈಸೂರು ನಡುವಿನ ದಶಪಥ ರಸ್ತೆಯ ಪೈಕಿ 6 ಪಥಗಳ ಆಯಕ್ಸೆಸ್ ಕಂಟ್ರೋಲ್ ಹೈವೇ ನೀಲನಕ್ಷೆ ತಯಾರಿಸುವ ಸಮಯದಲ್ಲಿ ಎನ್‌ಎಚ್‌ಎಐ ಅಧಿಕಾರಿಗಳು ರಸ್ತೆ ಹಾದು ಹೋಗುವ ಪ್ರಮುಖ ನಗರಗಳಿಗೆ ಎಂಟ್ರಿ ಮತ್ತು ಎಕ್ಸಿಟ್ ಪಾಯಿಂಟ್‌ಗಳನ್ನು ಗುರುತಿಸಿಲ್ಲ.
ಪ್ರಮುಖ ಪಟ್ಟಣಗಳಿಗೆ ತಾತ್ಕಾಲಿಕ ಎಂಟ್ರಿ, ಎಕ್ಸಿಟ್ ನಿರ್ಮಿಸಿದ್ದರೂ ಅವೈಜ್ಞಾನಿಕ ಆಗಿದೆ. ಇದರಿಂದ ಸಾಕಷ್ಟು ಅಪಘಾತಗಳು ಆಗುತ್ತಿವೆ. ಆದ್ದರಿಂದ ಹೊಸದಾಗಿ ಎಂಟ್ರಿ ಮತ್ತು ಎಕ್ಸಿಟ್‌ಗಳನ್ನು ನಿರ್ಮಾಣ ಮಾಡುವ ಕಾಮಗಾರಿ ಕೈಗೊಳ್ಳಲಿದೆ.
ಪ್ರಾಧಿಕಾರದಲ್ಲಿ ಎಂಟ್ರಿ ಮತ್ತು ಎಕ್ಸಿಟ್ ಅನ್ನು ಇದೀಗ ನೀಡಿರುವಂತೆ ನೇರವಾಗಿ ನೀಡಲು ಸಾಧ್ಯ ಇಲ್ಲ. ಐಆರ್‌ಸಿ ನಿಯಮಾವಳಿಯ ಪ್ರಕಾರ, ಆಯಕ್ಸೆಸ್ ಕಂಟ್ರೋಲ್ ಹೈವೇಗೆ ಎಂಟ್ರಿ ಪಡೆಯುವ ವಾಹನಗಳು ಹೆದ್ದಾರಿಯಲ್ಲಿ ವೇಗವಾಗಿ ಸಂಚರಿಸುತ್ತಿರುವ ವಾಹನಗಳಿಗೆ ಅಡಚಣೆ ಆಗಬಾರದು.
ಸುರಕ್ಷಿತವಾಗಿ ಹೆದ್ದಾರಿಗೆ ಎಂಟ್ರಿ ಪಡೆಯಬೇಕು. ಇದಕ್ಕೆ ವರ್ತುಲ ಆಕಾರದ ಎಂಟ್ರಿ ಮತ್ತು ಎಕ್ಸಿಟ್‌ಗಳನ್ನು ನಿರ್ಮಿಸಬೇಕು. ಇದಕ್ಕೆ ಹೊಸ ಕಾಮಗಾರಿಯನ್ನು ಆರಂಭಿಸುವುದರ ಜೊತೆಗೆ ಭೂಸ್ವಾಧೀನ ಪ್ರಕ್ರಿಯೆಯನ್ನೂ ಕೈಗೊಳ್ಳಬೇಕಿದೆ. ಇದಕ್ಕಾಗಿ ಹೆದ್ದಾರಿ ಪ್ರಾಧಿಕಾರ ನೀಲನಕ್ಷೆ ಸಿದ್ಧಪಡಿಸಿದೆ. ಕಾಮಗಾರಿಗೆ ಇದೀಗ ಟೆಂಡರ್ ಕರೆಯಲಾಗಿದೆ.
ಎಕ್ಸ್‌ಪ್ರೆಸ್‌ನಲ್ಲಿ 118 ಕಿಲೋ ಮೀಟರ್ ದೂರ 90 ನಿಮಿಷಗಳಲ್ಲಿ ಕ್ರಮಿಸುವ ವಾಹನಗಳು, ಬೆಂಗಳೂರು ನೈಸ್ ರಸ್ತೆ ಜಂಕ್ಷನ್ ಹಾಗೂ ಮೈಸೂರಿನ ಮಣಿಪಾಲ್ ಆಸ್ಪತ್ರೆ ವೃತ್ತದಲ್ಲಿ ಗಂಟೆಗಟ್ಟಲೆ ಕಾಯಬೇಕಾಗುತ್ತದೆ. ಇದಕ್ಕೆ ಕಾರಣ ರಸ್ತೆ ಕಿರಿದಾಗಿರುವುದು. ಆದ್ದರಿಂದ ನೂತನ ಕಾಮಗಾರಿಯಲ್ಲಿ ಎರಡೂ ಕಡೆ ರಸ್ತೆ ಅಗಲೀಕರಣ ಮಾಡಲು ಕ್ರಮಕೈಗೊಳ್ಳಲಾಗುತ್ತಿದೆ.
ಎಕ್ಸ್‌ಪ್ರೆಸ್‌ವೇನ ಎಂಟ್ರಿ ಎಕ್ಸಿಟ್‌ಗಳ ಬಳಿಕ ಟೋಲ್ ಪ್ಲಾಜಾ ನಿರ್ಮಾಣ ಹಾಗೂ ರಸ್ತೆ ಅಗಲೀಕರಣಕ್ಕೆ ಬೇಕಿರುವ ಅಗತ್ಯ ಇರುವ ಭೂಮಿ ಗುರುತಿಸಿ ನೀಲನಕ್ಷೆ ಸಿದ್ಧಪಡಿಸಿರುವ ಎನ್‌ಎಚ್‌ಎಐ 500 ಕೋಟಿ ರೂಪಾಯಿ ಹಣ ನಿಗದಿಪಡಿಸಿದೆ.
ರಾಷ್ಟ್ರೀಯ ಹೆದ್ದಾರಿ 275 ಬೆಂಗಳೂರಿನಿಂದ ಮೈಸೂರಿನವರೆಗೆ 118 ಕಿಲೋ ಮೀಟರ್‌ನಷ್ಟು 6 ಪಥಗಳ ಎಕ್ಸ್‌ಪ್ರೆಸ್‌ವೇಗೆ ಟೋಲ್ ಶುಲ್ಕವನ್ನು ವಸೂಲಿ ಮಾಡಲಾಗುತ್ತಿದೆ.
ಬೆಂಗಳೂರಿನ ಪಂಚಮುಖಿ ಗಣಪತಿ ದೇವಾಲಯದಿಂದ ನಿಡಘಟ್ಟದವರೆಗೆ ಮೊದಲ ಹಂತದ ಎಕ್ಸ್‌ಪ್ರೆಸ್ ವೇ 56 ಕಿಲೋ ಮೀಟರ್ ದೂರ ಇದ್ದು, ಈ ರಸ್ತೆಗೆ ವಾಹನದ ಮಾದರಿಯನ್ನು ಆಧರಿಸಿ 165-1,080 ರೂಪಾಯಿವರೆಗೆ ಶುಲ್ಕ ಸಂಗ್ರಹಿಸಲಾಗುತ್ತಿದೆ.
ಬೆಂಗಳೂರಿನಿಂದ ಮೈಸೂರು ಕಡೆ ಹೋಗುವವರು ಕಣಮಿಣಕಿ ಬಳಿ ಬೆಂಗಳೂರಿಗೆ ಹೋಗುವವರು ಬಿಡದಿಯ ಶೇಷಗಿರಿ ಹಳ್ಳಿ ಬಳಿ ಟೋಲ್ ಶುಲ್ಕ ಪಾವತಿಸಬೇಕು. ಬೆಂಗಳೂರಿನಿಂದ ಹೊರಟವರು, ಬಿಡದಿ, ನಿಡಘಟ್ಟಕ್ಕೆ ಪ್ರಯಾಣಿಸಲು 165-1,080 ರೂಪಾಯಿವರೆಗೆ ಶುಲ್ಕವನ್ನು ಪಾವತಿ ಮಾಡಬೇಕು.
ಇನ್ನು ನಿಡಘಟ್ಟದಿಂದ ಮೈಸೂರು ವರೆಗೆ 62 ಕಿ.ಮೀ. ಉದ್ದ ರಸ್ತೆ ಇದ್ದು, ಇಲ್ಲಿಗೆ ಶ್ರೀರಂಗಪಟ್ಟಣದ ಗಣಂಗೂರು ಬಳಿ ಟೋಲ್ ಪ್ಲಾಜಾದಲ್ಲಿ ಟೋಲ್ ಶುಲ್ಕವನ್ನು ಪಾವತಿಸಬೇಕಿದೆ. ಇಲ್ಲಿ ಟೋಲ್ ಶುಲ್ಕ 155-1,005 ರೂಪಾಯಿವರೆಗೆ ಇದೆ. ಈಗ ಹೊಸದಾಗಿ ಎಂಟ್ರಿ ಎಕ್ಸಿಟ್‌ಗಳಲ್ಲಿ ಟೋಲ್ ಬೂತ್‌ಗಳನ್ನು ಅಳವಡಿಸುವುದರಿಂದ ಪ್ರಯಾಣಿಕರು ಯಾವ ಟೋಲ್‌ನಿಂದ ಯಾವ ಟೋಲ್‌ಗೆ ಸಂಚರಿಸುತ್ತಾರೆಯೋ ಅಷ್ಟು ಮಾತ್ರ ಹಣ ಪಾವತಿ ಮಾಡಬೇಕು.
ಫಾಸ್ಟ್ ಟ್ಯಾಗ್ ಮೂಲಕ ಟೋಲ್ ಬಳಿ ಸ್ಕ್ಯಾನ್ ಆಗಿ, ಸಂಚರಿಸಿದಷ್ಟು ದೂರಕ್ಕೆ ಮಾತ್ರ ಶುಲ್ಕ ಕಡಿತ ಆಗುತ್ತದೆ. ಇನ್ನು ಫಾಸ್ಟ್ ಟ್ಯಾಗ್ ಇಲ್ಲದ ವಾಹನಗಳು ಟೋಲ್ ಪ್ಲಾಜಾದಲ್ಲಿ ಎಂಟ್ರಿ ಪಡೆಯುವಾಗಲೇ ಶುಲ್ಕ ಪಾವತಿ ಮಾಡಿ ಪ್ರವೇಶಿಸಬೇಕಾಗುತ್ತದೆ.
ಯಾವಾಗ ಕಾಮಗಾರಿ ಆರಂಭ: ಹೆದ್ದಾರಿ ಪ್ರಾಧಿಕಾರ ಹೊಸ ಕಾಮಗಾರಿಗಳಿಗೆ ಕರೆದಿರುವ ಟೆಂಡರ್ ಫೆಬ್ರವರಿ 19ಕ್ಕೆ ಮುಗಿಯಲಿದೆ. ಟೆಂಡರ್ ಪ್ರಕ್ರಿಯೆ ಮುಗಿದ ಬಳಿಕ 6 ತಿಂಗಳೊಳಗೆ ಕಾಮಗಾರಿ ಆರಂಭವಾಗಿ ಪೂರ್ಣ ಆಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications