ಕೇಂದ್ರ ನೀತಿಗಳ ವಿರುದ್ಧ ರಾಮಲೀಲಾ ಮೈದಾನದಲ್ಲಿ ರೈತರು, ಕಾರ್ಮಿಕರ ಬೃಹತ್ ಪ್ರತಿಭಟನೆ
ನವದೆಹಲಿ, ಏಪ್ರಿಲ್. 05: ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ತಮ್ಮ ಮೂಲಭೂತ ಅಗತ್ಯಗಳನ್ನು ಕಡೆಗಣಿಸುತ್ತಿದೆ ಮತ್ತು ಜೀವನ ನಡೆಸಲು ಕಷ್ಟಪಡುವಂತಹ ಸ್ಥಿತಿಗೆ ತಳ್ಳಿದೆ ಎಂದು ಆರೋಪಿಸಿ ಸಾವಿರಾರು ಮಂದಿ ರೈತರು, ಕಾರ್ಮಿಕರು ಮತ್ತು ಎಡಪಂಥೀಯ ಕಾರ್ಮಿಕ ಸಂಘಟನೆಗಳು ದೆಹಲಿಯ ರಾಮಲೀಲಾ ಮೈದಾನದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಸೆಂಟರ್ ಆಫ್ ಟ್ರೇಡ್ ಯೂನಿಯನ್ಸ್ (ಸಿಐಟಿಯು), ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್), ಮತ್ತು ಅಖಿಲ ಭಾರತ ಕೃಷಿ ಕಾರ್ಮಿಕರ ಸಂಘ (ಎಐಎಡಬ್ಲ್ಯುಯು) ವತಿಯಿಂದ ಮಸ್ದೂರ್ - ಕಿಸಾನ್ ಸಂಘರ್ಷ್ ಆಂದೋಲನ ನಡೆಯಿತು. ಪ್ರತಿಭಟನೆಯಲ್ಲಿ ಮಾತನಾಡಿದ ನಾಯಕರು, ಈ ಪ್ರತಿಭಟನೆಯು ದೇಶದ ಕಾರ್ಮಿಕರಲ್ಲಿ ಹೆಚ್ಚುತ್ತಿರುವ ಅಸಮಾಧಾನದ ಸೂಚನೆಯಾಗಿದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಹರಿಯಾಣ, ಪಂಜಾಬ್, ರಾಜಸ್ಥಾನ, ಯುಪಿ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಕರ್ನಾಟಕ, ಅಸ್ಸಾಂ, ತ್ರಿಪುರ, ಮಣಿಪುರ, ಗುಜರಾತ್ ಸೇರಿದಂತೆ ರಾಷ್ಟ್ರದ ವಿವಿಧ ಭಾಗಗಳಿಂದ ಸಾವಿರಾರು ಕಾರ್ಮಿಕರು, ರೈತರು ಮತ್ತು ಕೃಷಿ ಕಾರ್ಮಿಕರು ರ‍್ಯಾಲಿಯಲ್ಲಿ ಭಾಗವಹಿಸಿದ್ದರು ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.
ಅಖಿಲ ಭಾರತ ಕಿಸಾನ್ ಸಭಾ, "ನಮ್ಮ ಪ್ರಶ್ನೆ ಕೇಂದ್ರ ಸರ್ಕಾರಕ್ಕೆ ಎರಡು ಕೋಟಿ ಜನರಿಗೆ ಉದ್ಯೋಗ ಭರವಸೆ ನೀಡಲಾಗಿತ್ತು, ಆದರೆ ಆ ಉದ್ಯೋಗಗಳು ಎಲ್ಲಿ ಹೋದವು ಎಂದು ನಾವು ಸರ್ಕಾರವನ್ನು ಪ್ರಶ್ನಿಸುತ್ತಿದ್ದೇವೆ. ಇಲ್ಲಿಯವರೆಗೆ ಎಷ್ಟು ಜನರಿಗೆ ಉದ್ಯೋಗ ನೀಡಲಾಗಿದೆ.? ಇಂದು ದಿನನಿತ್ಯದ ದೊಡ್ಡ ಸಮಸ್ಯೆಯೂ ಇದೆ" ಎಂದು ಆಕ್ರೋಶ ಹೊರಹಾಕಿದೆ.
ಇದರ ಜೊತೆಗೆ "ದೇಶದಲ್ಲಿ ಕೂಲಿ ಕಾರ್ಮಿಕರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಪ್ರತಿಭಟನಕಾರರು ಹಣದುಬ್ಬರದಿಂದ ಮುಕ್ತಿ ಹೊಂದಲು, ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯ ಕಾನೂನು ಖಾತರಿ ಮಾಡಬೇಕು. ಎಲ್ಲಾ ಕಾರ್ಮಿಕರಿಗೆ ತಿಂಗಳಿಗೆ 26,000 ರೂ.ಗೆ ಕನಿಷ್ಠ ವೇತನ ಮತ್ತು ತಿಂಗಳಿಗೆ ರೂ.10,000 ಪಿಂಚಣಿ ನೀಡಬೇಕು" ಎಂದು ಆಗ್ರಹಿಸಿದೆ.

ಇನ್ನು ಪ್ರತಿಭಟನೆಯ ಭಾಗವಾಗಿದ್ದ ಸಿಪಿಐ(ಎಂ) ಕೂಡ ಟ್ವಿಟರ್‌ನಲ್ಲಿ, "ತಿಂಗಳಿಗೆ ಕನಿಷ್ಠ 26,000 ರೂ. ವೇತನ ಮತ್ತು ಎಲ್ಲಾ ಕಾರ್ಮಿಕರಿಗೆ 10,000 ರೂ. ಪಿಂಚಣಿ ನೀಡಬೇಕು. ಒಪ್ಪಂದ ಮೇಲೆ ನಡೆಯುವ ಅಗ್ನಿಪಥ್ ಯೋಜನೆಯನ್ನು ಹಿಂಪಡೆಯಿರಿ" ಎಂದು ಒತ್ತಾಯಿಸಿದೆ. ಕಾರ್ಮಿಕರು ತಮ್ಮ ಮತ್ತು ತಮ್ಮ ಮಕ್ಕಳಿಗೆ ಶಿಕ್ಷಣ, ಆರೋಗ್ಯ ಮತ್ತು ಗೌರವಯುತ ಜೀವನ ನಡೆಸುವಂತಹ ನೀತಿಗಳನ್ನು ಸರ್ಕಾರ ಜಾರಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಸಿಐಟಿಯು ಕೂಡ, "ಆದಿವಾಸಿಗಳ ಅರಣ್ಯ ಮತ್ತು ಭೂಮಿಯ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ ಅದನ್ನು ಕಾರ್ಪೊರೇಟ್‌ಗಳಿಗೆ ನೀಡಲಾಗುತ್ತಿದೆ. ರೈತರು ತಾವು ಬೆಳೆದ ಬೆಳೆಗಳಿಗೆ ಲಾಭದಾಯಕ ಬೆಲೆಗಳು ಸಿಗುತ್ತಿಲ್ಲ. ಎಂಜಿಎನ್‌ಆರ್‌ಇಜಿಎ ಅಡಿಯಲ್ಲಿ ಕೆಲಸಕ್ಕಾಗಿ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿರುವಾಗ, ಸರ್ಕಾರವು ಅದಕ್ಕೆ ಮೀಸಲಿಡುವ ಅನುದಾನವನ್ನು ಮತ್ತಷ್ಟು ಕಡಿಮೆ ಮಾಡಿದೆ. ಕಳೆದ ಎರಡು ವರ್ಷಗಳಲ್ಲಿ 38,000 ಕೋಟಿ ರೂಪಾಯಿ ಅನುದಾನ ಕಡಿಮೆ ಮಾಡಿದೆ" ಎಂದು ಆರೋಪಿಸಿದೆ.
ಸರ್ಕಾರಿ ನೌಕರರ ಮೇಲಿನ ಸರ್ವಾಧಿಕಾರಿ ದಾಳಿಯನ್ನು ನಿಲ್ಲಿಸಬೇಕು ಎಂದು ಪಶ್ಚಿಮ ಬಂಗಾಳದಿಂದ ಬಂದಿದ್ದ ನೌಕರರು ತಮ್ಮ ಬೇಡಿಕೆಯಲ್ಲಿ ತಿಳಿಸಿದ್ದಾರೆ. ಅಸ್ಸಾಂ ಮತ್ತು ಪಂಜಾಬ್‌ನ ಆಶಾ ಕಾರ್ಯಕರ್ತರು ತಮ್ಮ ತಮ್ಮ ರಾಜ್ಯಗಳ ಸಮಸ್ಯೆಗಳನ್ನು ಚರ್ಚಿಸಿದರು.












Click it and Unblock the Notifications