ಜಗನ್ ಕಾರಿಗೆ ಸಿಲುಕಿ ಜೀವಬಿಟ್ಟ ಅಭಿಮಾನಿ, ಅರೆಸ್ಟ್ ಆಗ್ತಾರಾ ಮಾಜಿ ಸಿಎಂ?
ಆಂಧ್ರಪ್ರದೇಶದ ಮಾಜಿ ಸಿಎಂ ವೈ.ಎಸ್.ಜಗನ್ ಮೋಹನ್ ರೆಡ್ಡಿಗೆ ಸಂಕಷ್ಟ ಎದುರಾಗಿದೆ. ಜಗನ್ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ದೊಡ್ಡ ದುರಂತವೇ ನಡೆದು ಹೋಗಿದೆ. ಕಾರ್ಯಕ್ರಮದ ವೇಳೆ ಜಗನ್ ಪ್ರಯಾಣಿಸುತ್ತಿದ್ದ ಕಾರಿಗೆ ಸಿಲುಕಿ ಅಭಿಮಾನಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ತಮ್ಮ ಅಭಿಮಾನ ತೋರಿಸಲು ಜಗನ್ ಮೇಲೆ ಹೂವು ಸುರಿಯಲು ವ್ಯಕ್ತಿಯೊಬ್ಬರು ಬಂದಾಗ ಕಾರು ಅವರಿಗೆ ಡಿಕ್ಕಿ ಹೊಡೆದಿತ್ತು. ನಂತರ ವಾಹನದ ಕೆಳಗೆ ಸಿಲುಕಿ ಆ ವ್ಯಕ್ತಿ ಕೊನೆಯುಸಿರೆಳೆದಿದ್ದಾನೆ.
ಜಗನ್ ಮೋಹನ್ ರೆಡ್ಡಿ ಗುಂಟೂರಿನ ಸತ್ತೇನಪಲ್ಲಿ ಮಂಡಲದ ರೆಂಟಪಲ್ಲಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಅಲ್ಲಿ ನಾಯಕ ಪ್ರತಿಮೆಯನ್ನು ಅನಾವರಣಗೊಳಿಸಲು ನಿರ್ಧರಿಸಿದ್ದರು. ಬೆಂಗಾವಲು ಪಡೆ ಹಾದುಹೋಗುತ್ತಿದ್ದಂತೆ 54 ವರ್ಷದ ಚೀಲಿ ಸಿಂಗಯ್ಯ ಚೀಲಿ ಸಿಂಗಯ್ಯ ಎಂಬ ವ್ಯಕ್ತಿ ಮಾಜಿ ಸಿಎಂ ಮೇಲೆ ಹೂವುಗಳನ್ನು ಸುರಿಯಲು ಪ್ರಯತ್ನಿಸಿದರು. ಈ ವೇಳೆ ಜಗನ್ ಪ್ರಯಾಣಿಸುತ್ತಿದ್ದ ವಾಹನ ಅವರಿಗೆ ಡಿಕ್ಕಿ ಹೊಡೆದಿದೆ. ನಂತರ ಅವರು ವಾಹನದ ಕೆಳಗೆ ಸಿಲುಕಿದ್ದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ವಿಡಿಯೋ ವೈರಲ್ ಆದ ಬಳಿಕ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೃತ ಸಿಂಗಯ್ಯ ಅವರು ವೆಂಗಲಾಯಪಲೆಂ ಗ್ರಾಮದ ನಿವಾಸಿ ಮತ್ತು ವೈಎಸ್‌ಆರ್‌ಸಿಪಿ ಬೆಂಬಲಿಗ ಎನ್ನಲಾಗಿದೆ. ಸತ್ತೇನಪಲ್ಲಿ ಮಂಡಲದ ರೆಂಟಪಲ್ಲಿ ಗ್ರಾಮಕ್ಕೆ ಜಗನ್ ಮೋಹನ್ ರೆಡ್ಡಿ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರ ವಾಹನ ಅವರಿಗೆ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ.
ಜಗನ್ ವಾಹನದ ಬಳಿ ಸಿಂಗಯ್ಯ ಬೀಳುವ ದೃಶ್ಯಗಳು ವೀಡಿಯೋದಲ್ಲಿ ಸೆರೆಯಾಗಿದ್ದು, ವ್ಯಕ್ತಿ ಕಾರಿನ ಕೆಳಗೆ ಬಿದ್ದರೂ ಮುಂದಕ್ಕೆ ಚಲಿಸಿರುವುದು ಕಂಡುಬಂದಿದೆ. ಕಾರಿನ ಚಕ್ರಗಳು ಸ್ಪಷ್ಟವಾಗಿ ಆ ವ್ಯಕ್ತಿಯ ಕುತ್ತಿಗೆಯ ಮೇಲೆ ಹರಿದಿದ್ದು, ಪ್ರತ್ಯಕ್ಷದರ್ಶಿಗಳು ತಕ್ಷಣವೇ ಸಹಾಯಕ್ಕೆ ಧಾವಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಸಿಂಗಯ್ಯ ಅವರನ್ನ ಗುಂಟೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಕೊನೆಗೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಸಾವನ್ನಪ್ಪಿದರು ಎನ್ನಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ ಕೇವಲ ಮೂರು ವಾಹನಗಳಿಗೆ ಮಾತ್ರ ಅಧಿಕೃತವಾಗಿ ಈ ರೋಡ್‌ಶೋಗೆ ಕಾರ್ಯಕ್ರಮ ನೀಡಲಾಗಿತ್ತು. ಆದರೆ ಸುಮಾರು 30ರಿಂದ 35 ವಾಹನಗಳು ಬೆಂಗಾವಲು ಪಡೆಯಲ್ಲಿದ್ದವು. ಅನಧಿಕೃತ ವಾಹನಗಳು ಕೂಡ ಬೆಂಗಾವಲು ಪಡೆಯೊಂದಿಗೆ ಹೇಗೆ ಸೇರಿಕೊಂಡಿದ್ದವು ಎಂದು ತಿಳಿದುಬಂದಿದ್ದು, ಸಂಪೂರ್ಣ ವಿಚಾರಣೆಯ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ನಾಯ್ಡು ಸರ್ಕಾರಕ್ಕೆ ಅಸ್ತ್ರ?
ಆಂಧ್ರಪ್ರದೇಶವು ಅಕ್ಷರಶಃ ಸೇಡಿನ ರಾಜಕಾರಣಕ್ಕೆ ಹೆಸರುವಾಸಿಯಾಗಿದೆ. ಜಗನ್ ಮೋಹನ್ ರೆಡ್ಡಿ ವಿರುದ್ಧ ತೊಡೆ ತಟ್ಟಿದ್ದ ತೆಲುಗು ದೇಶಂ ಪಾರ್ಟಿಯ ಚಂದ್ರಬಾಬು ನಾಯ್ಡು ಹಾಗೂ ಜನಸೇನಾ ಪಕ್ಷದ ನಟ ಪವನ್ ಕಲ್ಯಾಣ್, ಕಳೆದ ಚುನಾವಣೆಯಲ್ಲಿ ಜಗನ್‌ಗೆ ಮಣ್ಣುಮುಕ್ಕಿಸಿ ಅಧಿಕಾರದಿಂದ ಕೆಳಗಿಳಿಸಿದ್ದರು. ಇವರಿಬ್ಬರ ನಡುವೆ ವಾಗ್ವಾದಗಳು ನಡೆಯುತ್ತಲೇ ಇದ್ದು, ಇದೀಗ ಈ ಘಟನೆ ಕೂಡ ಸಿಎಂ ಚಂದ್ರಬಾಬು ನಾಯ್ಡು ಹಾಗೂ ಡಿಸಿಎಂ ಪವನ್ ಕಲ್ಯಾಣ್ ಅವರಿಗೆ ದೊಡ್ಡ ಅಸ್ತ್ರವಾಗಬಹುದು ಎಂದು ಹೇಳಲಾಗುತ್ತಿದೆ. ಇದೇ ಕೇಸ್‌ನಲ್ಲಿ ಜಗನ್ ಮೋಹನ್ ರೆಡ್ಡಿ ಅವರನ್ನು ಬಂಧಿಸಿ ಜೈಲಿಗಟ್ಟಿದರೂ ಅಚ್ಚರಿಯಿಲ್ಲ ಎಂದು ಹೇಳಲಾಗುತ್ತಿದೆ












Click it and Unblock the Notifications