Tirumala Laddu: ತಿರುಪತಿ ಲಡ್ಡು ತಯಾರಿಕೆ ಬಗ್ಗೆ ಅಪಪ್ರಚಾರ- ಟಿಟಿಡಿ ಎಚ್ಚರಿಕೆ!
ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಬಳಿಕ ಎಲ್ಲರಿಗೂ ನೆನಪಿಗೆ ಬರುವುದು ಲಡ್ಡು. ತಿರುಪತಿ ಲಡ್ಡು ಪ್ರಸಾದವನ್ನು ಶ್ರೀವಾರಿ ದರ್ಶನದಷ್ಟೇ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಆದರೆ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಲಡ್ಡು ತಯಾರಿಕೆ ಬಗ್ಗೆ ಸುಳ್ಳು ಸುದ್ದಿಯೊಂದು ಹರಿದಾಡುತ್ತಿದೆ. ಇದಕ್ಕೆ ತಿರುಮಲ ತಿರುಪತಿ ದೇವಸ್ಥಾನಂ (TTD) ವಿವರಣೆಯೊಂದಿಗೆ ಎಚ್ಚರಿಕೆಯನ್ನು ನೀಡಿದೆ.
ಹೌದು... ಕೆಲ ಕಿಡಿಗೇಡಿಗಳು ತಿರುಪತಿ ಲಡ್ಡು ಪ್ರಸಾದದ ಬಗ್ಗೆ ಸುಳ್ಳು ಸುದ್ದಿಯನ್ನು ವೈರಲ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ತಪ್ಪು ಸಂದೇಶದಿಂದಾಗಿ ಜನರಲ್ಲಿ ನಾನಾ ಪ್ರಶ್ನೆಗಳು ಮೂಡಿವೆ. ಇದಕ್ಕೆ ಟಿಟಿಡಿ ಸ್ವಷ್ಟಣೆ ನೀಡಿದ್ದು, ಗಾಳಿ ಸುದ್ದಿ ಹಬ್ಬಿಸುವವರಿಗೆ ಖಡಕ್ ಎಚ್ಚರಿಕೆಯನ್ನು ಕೊಟ್ಟಿದೆ.

ನಮಗೆ ತಿಳಿದಿರುವ ಯಾರಾದರೂ ತಿರುಮಲಕ್ಕೆ ಹೋಗುತ್ತಿದ್ದರೆ, ನಾವು ಅವರ ಬಳಿ ತಿರುಮಲ ಲಡ್ಡೂಗಳನ್ನು ತರಲು ಕೇಳುತ್ತೇವೆ ಮತ್ತು ತರಿಸಿಕೊಳ್ಳುತ್ತೇವೆ. ತಿರುಪತಿ ತಿಮ್ಮಪ್ಪನ ದರ್ಶನ ಪಡೆದವರು ಲಡ್ಡು ಪ್ರಸಾದ ಸ್ವೀಕರಿಸದೆ ಹಿಂದಿರುಗುವುದಿಲ್ಲ. ಅಲ್ಲದೆ ತಿರುಮಲಕ್ಕೆ ಹೋದವರು ಕೂಡ ನಾಲ್ಕು ಜನರಿಗೆ ಲಡ್ಡು ಪ್ರಸಾದವನ್ನು ಹಂಚುತ್ತಾರೆ. ಇದಕ್ಕೆ ಕಾರಣ ಶ್ರೀವಾರಿ ಲಡ್ಡು ಪ್ರಸಾದ ಸ್ವೀಕರಿಸಿದರೆ ಶ್ರೀಗಳ ದರ್ಶನ ಪಡೆದಷ್ಟೇ ಪುಣ್ಯ ಸಿಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.
ಆದರೆ ಸೋಷಿಯಲ್ ಮೀಡಿಯಾದಲ್ಲಿ ತಿರುಮಲ ಲಡ್ಡು ಪ್ರಸಾದ ಬಗ್ಗೆ ಆಗಾಗ ಗಾಳಿ ಸುದ್ದಿಗಳು ಹರಿದಾಡುತ್ತಿರುತ್ತವೆ. ಇತ್ತೀಚೆಗೆ ತಿರುಮಲ ಲಡ್ಡು ಬಗ್ಗೆ ಒಂದಷ್ಟು ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ಅದೇನೆಂದರೆ ಥಾಮಸ್ ಎಂಬ ಗುತ್ತಿಗೆದಾರರ ನೇತೃತ್ವದಲ್ಲಿ ಶ್ರೀವಾರಿ ಲಡ್ಡು ಪ್ರಸಾದಗಳು ತಯಾರಾಗುತ್ತಿವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡಲಾಗಿದೆ. ಈ ಗಾಳಿ ಸುದ್ದಿಗೆ ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್ ಸ್ಪಷ್ಟನೆ ನೀಡಿದೆ. ಜೊತೆಗೆ ಎಚ್ಚರಿಕೆಯನ್ನೂ ಕೊಟ್ಟಿದೆ.
ಅನಾದಿ ಕಾಲದಿಂದಲೂ ತಿರುಮಲ ಶ್ರೀವಾರಿ ಲಡ್ಡು ಪ್ರಸಾದವನ್ನು ಶ್ರೀ ವೈಷ್ಣವ ಬ್ರಾಹ್ಮಣರಿಂದ ತಯಾರಿಸಲಾಗುತ್ತಿದೆ. ತಿರುಮಲ ಶ್ರೀವಾರಿ ಲಡ್ಡು ಪ್ರಸಾದವನ್ನು ವೈಷ್ಣವ ಬ್ರಾಹ್ಮಣರು ಹಲವು ದಶಕಗಳಿಂದ ಸಂಪ್ರದಾಯದ ಪ್ರಕಾರ ತಯಾರಿಸುತ್ತಾರೆ ಎಂದು ಟಿಟಿಡಿ ವಿವರಿಸಿದೆ.

ಟಿಟಿಡಿ ಪ್ರಕಾರ, ತಿರುಮಲ ಶ್ರೀವಾರಿ ತಿರುಮಲದಲ್ಲಿ 980 ಹಿಂದೂ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. ಈ 980 ಸಿಬ್ಬಂದಿಗಳಲ್ಲಿ ಶ್ರೀ ವೈಷ್ಣವ ಬ್ರಾಹ್ಮಣರು ಲಡ್ಡು ತಯಾರಿಕೆ ಮತ್ತು ಕಚ್ಚಾ ಸಾಮಗ್ರಿಗಳನ್ನು ತರುವುದರಲ್ಲಿ ತೊಡಗಿಕೊಂಡಿದ್ದಾರೆ ಎಂದು ತಿರುಮಲ ತಿರುಪತಿ ದೇವಸ್ಥಾನಂ ತಿಳಿಸಿದೆ. ಲಡ್ಡುಗಳನ್ನು ಸ್ಥಳಾಂತರಿಸುವುದು, ಪ್ಯಾಕ್ ಮಾಡುವುದು, ಲಡ್ಡು ಕೌಂಟರ್ ಗಳಲ್ಲಿ ಮಾತ್ರ ಇತರೆ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಾರೆ ಎಂದು ಟಿಟಿಡಿ ಸ್ಪಷ್ಟಪಡಿಸಿದೆ.
ಹೀಗಾಗಿ ಶ್ರೀವಾರಿ ಲಡ್ಡು ತಯಾರಿಕೆಯಲ್ಲಿ ಯಾವುದೇ ತಪ್ಪು ಕಲ್ಪನೆ ಬೇಡ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಟಿಟಿಡಿ ಪ್ರಕಟಣೆಯಲ್ಲಿ ತಿಳಿಸಿದೆ. ಇಂತಹ ಸುಳ್ಳು ಪ್ರಚಾರಗಳನ್ನು ಭಕ್ತರು ನಂಬಬೇಡಿ ಎಂದು ಮನವಿ ಮಾಡಿದೆ.












Click it and Unblock the Notifications