ಯುಟರ್ನ ಹೊಡೆದ ಆಯೋಗ:ಸಮೀಕ್ಷೆಗೆ ಗ್ರೀನ್ ಸಿಗ್ನಲ್
ನವದೆಹಲಿ, ಮೇ 10: ಹದಿನಾರನೇ ಲೋಕಸಭಾ ಚುನಾವಣೆಯ ಮತದಾನದ ಪ್ರಕ್ರಿಯೆ ಸೋಮವಾರಕ್ಕೆ (ಮೇ 12) ಮುಕ್ತಾಯಗೊಳ್ಳಲಿದೆ. ಮೇ12ರ ಸಂಜೆ 6.30ರ ನಂತರ 'ಮತಗಟ್ಟೆ ಸಮೀಕ್ಷೆ' ನಡೆಸಬಹುದು ಎಂದು ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ.
ಶನಿವಾರ (ಮೇ 10) ಬೆಳಗ್ಗೆಯಷ್ಟೇ, ಮತಎಣಿಕೆಯ ದಿನವಾದ ಮೇ 16ರ ತನಕ ಎಕ್ಸಿಟ್ ಪೋಲಿಗೆ ಚುನಾವಣಾ ಆಯೋಗ ನಿಷೇಧ ಹೇರಿ ಆದೇಶ ಹೊರಡಿಸಿತ್ತು. ಈಗ ತನ್ನ ನಿರ್ಧಾರದಿಂದ ಯುಟರ್ನ್ ಹೊಡೆದಿರುವ ಆಯೋಗ ನಿಷೇಧ ಪ್ರಸಾರಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. (ವಾರಣಾಸಿ: ಮೋದಿ ಸಮಾವೇಶಕ್ಕೆ ಬ್ರೇಕ್)

ಮೇ ಹನ್ನೆರಡರ ಸಂಜೆ ಆರು ಗಂಟೆಗೆ ಮತದಾನ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ. ಇದಾದ ಮೂವತ್ತು ನಿಮಿಷದ ನಂತರ ಮತಗಟ್ಟೆ ಸಮೀಕ್ಷೆ ಪ್ರಸಾರ ಮಾಡಬಹುದು ಎಂದು ಆಯೊಗ ಸ್ಪಷ್ಟ ಪಡಿಸಿದೆ.
ಚುನಾವಣಾ ಫಲಿತಾಂಶ ಬರುವ ತನಕ ಮತಗಟ್ಟೆ ಸಮೀಕ್ಷೆ ಎಂದು ಮಾಧ್ಯಮದವರ ಬಾಯಿ ತೆಗೆಯಲು ಆಯೋಗ ಬಿಡುವುದಿಲ್ಲ. ಫಲಿತಾಂಶ ಬಂದ ಮೇಲೆ ಮತಗಟ್ಟೆ ಪ್ರಸಾರ ಮಾಡಿಯೆಂದು ಆಯೋಗದ ಕಮಿಷನರ್ ಎಚ್ ಎಸ್ ಬ್ರಹ್ಮ ಶನಿವಾರ ಬೆಳಗ್ಗೆ ಖಡಕ್ಕಾಗಿ ಹೇಳಿದ್ದರು.
ಕೆಲವೊಂದು ಕಡೆ ಮರುಮತದಾನ ಆಗುವ ಸಾಧ್ಯತೆಯಿದೆ. ಹಾಗಾಗಿ, ನಾವು ಸಮೀಕ್ಷೆಗೆ ಫಲಿತಾಂಶ ಪ್ರಕಟವಾಗುವ ತನಕ ಅನುಮತಿ ನೀಡುವುದಿಲ್ಲ ಎಂದು ಬ್ರಹ್ಮ ಮಾಧ್ಯಮದವರ ಮುಂದೆ ಹೇಳಿದ್ದರು.
ಕಮಿಷನರ್ ಅವರು ಬಾಯಿತಪ್ಪಿ ಈ ಹೇಳಿಕೆ ನೀಡಿದ್ದಾರೆಂದು ಆಯೋಗ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.











Click it and Unblock the Notifications