Sashikanth Senthil: ಅತ್ತ ಅಣ್ಣಾಮಲೈ ಸೋಲು.. ಇತ್ತ ದಕ್ಷಿಣ ಕನ್ನಡ ಮಾಜಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಐತಿಹಾಸಿಕ ದಾಖಲೆ
ಚೆನ್ನೈ, ಜೂನ್. 05: ಮಾಜಿ ಐಎಎಸ್ ಅಧಿಕಾರಿ ಮತ್ತು ತಿರುವಳ್ಳೂರ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸಸಿಕಾಂತ್ ಸೆಂಥಿಲ್ ಅವರು ತಮಿಳುನಾಡು ಲೋಕಸಭೆ ಚುನಾವಣೆಯಲ್ಲಿ 2024 ರಲ್ಲಿ ಅತಿದೊಡ್ಡ ಗೆಲುವು ದಾಖಲಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಅವರು ತಮಿಳುನಾಡಿನಲ್ಲಿ ಹೊಸ ಇತಿಹಾಸ ಬರೆದಿದ್ದಾರೆ.
ಅತಿ ಹೆಚ್ಚು ಮತಗಳನ್ನು ಮತ್ತು ಹೆಚ್ಚು ಅಂತರದಿಂದ ಗೆಲುವು ಸಾಧಿಸಿ ದಾಖಲೆ ಬರೆದಿದ್ದಾರೆ. ಆದರೆ, ಚಿಕ್ಕಮಗಳೂರು ಮತ್ತು ಉಡುಪಿಯ ಮಾಜಿ ಎಸ್‌ಪಿ ಅಧಿಕಾರಿಯಾಗಿದ್ದ ಮತ್ತು ಬಿಜೆಪಿ ತಮಿಳುನಾಡು ರಾಜ್ಯಾಧ್ಯಕ್ಷ ಅಣ್ಣಾಮಲೈ ಕೊಯಮತ್ತೂರು ಕ್ಷೇತ್ರದಲ್ಲಿ ಹೀನಾಯ ಸೋಲು ಅನುಭವಿಸಿದ್ದಾರೆ.

ಐದು ಲಕ್ಷಕ್ಕೂ ಹೆಚ್ಚು ಅಂತರದಿಂದ ಗೆಲುವು ಕಂಡ ಸಸಿಕಾಂತ್ ಸೆಂಥಿಲ್
ತಿರುವಳ್ಳೂರ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸಸಿಕಾಂತ್ ಸೆಂಥಿಲ್ ಅತಿ ಹೆಚ್ಚು ಮತಗಳು ಅಂದರೆ 7,96,956 ಮತಗಳನ್ನು ಪಡೆದು 5,72,155 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ತಿರುವಳ್ಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪೊನ್ ಬಾಲ ಗಣಪತಿ ಅವರನ್ನು 5,72, 155 ಮತಗಳ ಅಂತರದಿಂದ ಸೋಲಿಸಿ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಪೊನ್ ಬಾಲಗಣಪತಿ 2,24,801, ಡಿಎಂಡಿಕೆ ಅಭ್ಯರ್ಥಿ ನಲ್ಲತಂಬಿ 2,23,904 ಮತ್ತು ನಾಮ್ ತಮಿಳ್ ಪಕ್ಷದ ಅಭ್ಯರ್ಥಿ 1,20,838 ಮತಗಳನ್ನು ಪಡೆದಿದ್ದಾರೆ. ಸಸಿಕಾಂತ್ ಸೆಂಥಿಲ್ ಮತ ಎಣಿಕೆಯ ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡಿದ್ದರು. ಕೊನೆಗೆ ಗೆಲುವು ಅವರದ್ದಾಗಿದೆ.
ಇತ್ತ, ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲೇಬೇಕೆಂಬ ಹಂಬಲದಲ್ಲಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಅವರು ಡಿಎಂಕೆ ಅಭ್ಯರ್ಥಿ ಗಣಪತಿ ರಾಜ್ ಕುಮಾರ್ ವಿರುದ್ಧ 17,366 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ. ಕರ್ನಾಟಕದ ಚಿಕ್ಕಮಗಳೂರು ಮತ್ತು ಉಡುಪಿಯ ಮಾಜಿ ಎಸ್‌ಪಿಯಾಗಿದ್ದರು ಅಣ್ಣಾಮಲೈ. ಬಳಿಕ ಬಿಜೆಪಿಗೆ ಸೇರ್ಪಡೆಗೊಂಡು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾರೆ.












Click it and Unblock the Notifications