PM Modi in NDA Meeting: ಎನ್‌ಡಿಎ ಶಕ್ತಿ ಪ್ರದರ್ಶನ; INDIA ಒಕ್ಕೂಟದ ಬಗ್ಗೆ ನರೇಂದ್ರ ಮೋದಿ ಹೇಳಿದ್ದೇನು?
ನವದೆಹಲಿ, ಜುಲೈ 18: ದೇಶದಲ್ಲಿ ಸ್ಥಿರವಾದ ಸರ್ಕಾರವಿದ್ದಾಗ ಮಾತ್ರ ಅಭಿವೃದ್ಧಿ ಸಾಧ್ಯ. ಈ ಮೈತ್ರಿಕೂಟ ಯಾರನ್ನೂ ಅಧಿಕಾರದಿಂದ ಹೊರಗಿಡಲು ಮಾಡಿದ್ದಲ್ಲ. ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ನಾವು ಪ್ರಯತ್ನ ಮಾಡಿದ್ದೇವೆ. ನಾವೆಲ್ಲರೂ ಒಂದು ಗುರಿ ಸಾಧಿಸಲು ಮುನ್ನುಗ್ಗುತ್ತಿದ್ದೇವೆ. ಆದರೆ, ಅಭಿವೃದ್ಧಿ ವಿಚಾರದಲ್ಲೂ ವಿಪಕ್ಷಗಳು ರಾಜಕಾರಣ ಮಾಡುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ.
ಮಂಗಳವಾರ ದೆಹಲಿಯಲ್ಲಿ ನಡೆದ ಎನ್‌ಡಿಎ ಮಿತ್ರಪಕ್ಷಗಳ ಸಭೆಯನ್ನ ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿ, ಎನ್‌ಡಿಎ ಮೈತ್ರಿಕೂಟವು ದೇಶದ ಎಲ್ಲಾ ಜನರ ವಿಶ್ವಾಸ ಗಳಿಸಿದೆ. ಇಡೀ ವಿಶ್ವವೇ ಭಾರತವನ್ನು ಅಭಿವೃದ್ಧಿ ದೃಷ್ಟಿಕೋನದಿಂದ ನೋಡುತ್ತಿದೆ. ಎನ್‌ಡಿಎ ಅಂದರೆ ನ್ಯೂ ಇಂಡಿಯಾ ಡೆವಲಪ್ಮೆಂಟ್ ಆಸ್ಪಿರೇಷನ್. ಈ ಮೈತ್ರಿಕೂಟ ಯಾರನ್ನೂ ಅಧಿಕಾರದಿಂದ ಹೊರಗಿಡಲು ಮಾಡಿದ್ದಲ್ಲ. ದೇಶದಲ್ಲಿ ಸ್ಥಿರವಾದ ಸರ್ಕಾರವಿದ್ದಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷವು ಮಹಾಮೈತ್ರಿಯನ್ನು ದುರ್ಬಳಕೆ ಮಾಡಿಕೊಂಡಿದೆ. ಆದರೆ, ಎನ್‌ಡಿಎ ಮೈತ್ರಿಕೂಟವು ಯಾರನ್ನೋ ಅಧಿಕಾರದಿಂದ ಇಳಿಸಲು ಮಾಡಿದ್ದಲ್ಲ ಎಂದು ಪ್ರಧಾನಿ ಮೋದಿ ಎನ್ ಡಿ ಎ ಸಭೆಯಲ್ಲಿ ಹೇಳಿದ್ದಾರೆ. ಇನ್ನೂ ಕೆಲ ರಾಜ್ಯಗಳು ಕೇಂದ್ರದ ಯೋಜನೆ ಜಾರಿ ಮಾಡಲು ಬಿಟ್ಟಿಲ್ಲ. ಇದಕ್ಕಾಗಿ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವ ಪರಿಸ್ಥಿತಿ ಬಂದಿದೆ. ವಿಪಕ್ಷಗಳು ಬಡವರ ಅಭಿವೃದ್ಧಿಯಲ್ಲೂ ರಾಜಕೀಯ ಲೆಕ್ಕಾಚಾರ ಹಾಕುತ್ತಾರೆ ಎಂದು ಪ್ರಧಾನಿ ಮೋದಿ ಟೀಕಿಸಿದರು.
ಇನ್ನೂ ಪ್ರತಿಪಕ್ಷಗಳು ಭಾಷೆ ದೇಶವನ್ನ ಒಡೆಯುವ ಸಾಧನ ಮಾಡಿಸಿಕೊಂಡರು. ನಾವು ದೇಶದ ಜನರನ್ನು ಒಗ್ಗೂಡಿಸುತ್ತಿದ್ದೇವೆ. ಅವರು ದೇಶದ ಜನರನ್ನು ವಿಭಜಿಸುತ್ತಿದ್ದಾರೆ. ಸಣ್ಣ ಸಣ್ಣ ಸ್ವಾರ್ಥಕ್ಕಾಗಿ ಎಲ್ಲರೂ ಒಂದಾಗಿದ್ದಾರೆ. ಕೇರಳದಲ್ಲಿ ಎಡಪಂಥೀಯರು ಹಾಗೂ ಕಾಂಗ್ರೆಸ್ ನಡುವಿನ ಸಂಭದ ಏನು ಎಂಬುದು ಎಲ್ಲರಿಗೂ ಗೊತ್ತು. ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಹಾಗೂ ಎಡಪಂಥೀಯರ ನಡುವಿನ ಸಂಬಂಧ ಏನೆಂಬುದು ಎಲ್ಲರಿಗೂ ತಿಳಿದ ವಿಚಾರ. ಮೋದಿಯನ್ನು ಹಣಿಯಲು ಈ ಒಕ್ಕೂಟ ಕೆಲಸ ಮಾಡುತ್ತಿದೆಯೇ ವಿನಃ ದೇಶದ ಜನರಿಗೆ ಒಳಿತು ಉಂಟುಮಾಡಲು ಅಲ್ಲ ಎಂದು ಹೇಳಿದರು.
ವಿಪಕ್ಷಗಳು ಅಭಿವೃದ್ದಿಯಲ್ಲಿ ರಾಜಕೀಯ ಮಾಡುತ್ತಿವೆ. ನಾವು ವಿರೋಧ ಪಕ್ಷದ ಸ್ಥಾನಲ್ಲಿದ್ದಾಗಲೂ ಸಕಾರಾತ್ಮಕ ರಾಜಕಾರಣ ಮಾಡಿದ್ದೇವೆ. ವಿರೋಧ ಪಕ್ಷದಲ್ಲಿ ನಾವು ಆಗಿನ ಸರ್ಕಾರದ ಹಗರಣಗಳನ್ನು ಹೊರತಂದಿದ್ದೇವೆ. ಆದರೆ ನಾವು ಯಾವತ್ತೂ ಜನಾದೇಶಕ್ಕೆ ಅವಮಾನ ಮಾಡಿಲ್ಲ. ಆಳುವ ಸರ್ಕಾರಗಳ ವಿರುದ್ಧ ನಾವು ಎಂದಿಗೂ ವಿದೇಶಿ ಶಕ್ತಿಗಳ ಸಹಾಯವನ್ನು ತೆಗೆದುಕೊಂಡಿಲ್ಲ. ದೇಶದ ಅಭಿವೃದ್ಧಿಗೆ ನಾವು ಎಂದಿಗೂ ಅಡೆತಡೆಗಳನ್ನು ಸೃಷ್ಟಿಸಿಲ್ಲ ಎಂದರು.
ಎನ್ ಡಿ ಎ ಎಂದರೇನು?
ಇನ್ನೂ ಎನ್‌ಡಿಎ ಅಂದರೆ ಏನು ಎಂಬ ಬಗ್ಗೆ ಸಭೆಯಲ್ಲಿ ಪ್ರಧಾನಿ ಮೋದಿ ವ್ಯಾಖ್ಯಾನಿಸಿದ್ದು, ಎನ್ - ನ್ಯೂ ಇಂಡಿಯಾ, ಡಿ - ಡೆವಲಪ್ಮೆಂಟ್ ಹಾಗೂ ಎ - ಆಸ್ಪಿರೇಷನ್ ಎಂದು ಮೋದಿ ತಿಳಿಸಿದ್ದಾರೆ.
ಇತ್ತ ದೇಶದ ಜನರ ಅಭಿವೃದ್ಧಿಯೇ ಎನ್‌ಡಿಎ ಮೈತ್ರಿಕೂಟದ ವಿಚಾರಧಾರೆ. ಬಡತನ ನಿರ್ಮೂಲನೆಯೇ ಎನ್‌ಡಿಎ ಮೈತ್ರಿಕೂಟ ಗುರಿಯನ್ನ ಹೊಂದಿದೆ, ನಾವು ಬಡತನವನ್ನು ಬಡವರ ಶಕ್ತಿಯಿಂದಲೇ ನಿರ್ಮೂಲನೆ ಮಾಡುತ್ತೇವೆ. ದೇಶದ ಬಡವರು, ಯುವಕರು, ದಲಿತರು, ಆದಿವಾಸಿಗಳು ಮಹಿಳೆಯರು ಎನ್‌ಡಿಎ ಒಕ್ಕೂಟದ ಜೊತೆ ಇದ್ದಾರೆ ಎಂದು ಪ್ರಧಾನಿ ಹೇಳಿದರು.
ಮೈತ್ರಿ ನಮ್ಮ ಅನಿವಾರ್ಯತೆ ಅಲ್ಲ, ನಮಗೆ ಅದು ಶಕ್ತಿ. ಎನ್‌ಡಿಎ ಮೈತ್ರಿಕೂಟದಲ್ಲಿ ಯಾವ ಪಕ್ಷವೂ ದೊಡ್ಡದಲ್ಲ, ಯಾವುದೂ ಸಣ್ಣದಲ್ಲ. ಲೋಕಸಭೆ ಚುನಾವಣೆಯಲ್ಲಿ 2 ಅವಧಿಯಲ್ಲೂ ಬಿಜೆಪಿಗೆ ಬಹುಮತ ಸಿಕ್ಕಿದೆ. ಆದರೂ ನಾವು ಎನ್‌ಡಿಎ ಒಕ್ಕೂಟದ ಸರ್ಕಾರ ರಚನೆ ಮಾಡಿದ್ದೇವೆ. ನಮಗೆ ದೇಶದ ಜನರ ಅಭಿವೃದ್ಧಿ ಮುಖ್ಯ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ನಮ್ಮ ಒಕ್ಕೂಟ ಮುಖ್ಯ ಉದ್ದೇಶವೇ ದೇಶ, ಅಭಿವೃದ್ಧಿ ಮೊದಲು. ಅಧಿಕಾರಕ್ಕೆ ಬಂದ ಮೇಲೆ ನಾವು ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಹೀಗಾಗಿ ಬಡವರು, ರೈತರು ಎನ್‌ಡಿಎ ಸರ್ಕಾರವನ್ನು ನಂಬಿದ್ದಾರೆ. ದೇಶದ ಬಡವರಿಗೆ ಒಂದು ಮನೆ ಬೇಕು, ಬ್ಯಾಂಕ್ ಸಾಲ ಬೇಕು. ಇದರಿಂದ ಅವರ ಕನಸುಗಳಿಗೆ ರೆಕ್ಕೆ ಬರಲಿದೆ. ನಾವು ಸಾಮಾಜಿಕ ನ್ಯಾಯ ಕೊಡುವ ಕೆಲಸ ಮಾಡಿದ್ದೇವೆ. ಇದು ಅಂಬೇಡ್ಕರ್, ಲೋಹಿಯಾ ಹೇಳಿದ ಸಾಮಾಜಿಕ ನ್ಯಾಯವಾಗಿದೆ ಎಂದು ಮೋದಿ ತಿಳಿಸಿದರು.












Click it and Unblock the Notifications