ಶ್ರೀರಾಮ ಚುನಾವಣೆಗೆ ನಿಂತರೂ ಹಣ ಖರ್ಚು ಮಾಡಬೇಕು: RSS ಮಾಜಿ ಮುಖಂಡ
ಪಣಜಿ, ಸೆಪ್ಟೆಂಬರ್ 27: "ಪ್ರಸ್ತುತ ಸನ್ನಿವೇಶದಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮ ಚುನಾವಣೆಗೆ ನಿಂತರೂ ಹಣ ಖರ್ಚು ಮಾಡಲೇಬೇಕು. ಇಲ್ಲವೆಂದರೆ ಆತನೂ ಗೆಲ್ಲುವುದಕ್ಕೆ ಸಾಧ್ಯವಿಲ್ಲ" ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಗೋವಾ ಘಟಕದ ಮಾಜಿ ಮುಖ್ಯಸ್ಥ ಸುಭಾಷ್ ವೆಲಿಂಗ್ಕರ್ ಅಭಿಪ್ರಾಯಪಟ್ಟರು.
ಗೋವಾ ರಾಜಧಾನಿ ಪಣಜಿಯಲ್ಲಿ ಗೋವಾ ಸುರಕ್ಷಾ ಮಂಚ್ (ಜಿಎಸ್ ಎಂ)ನಡೆಸಿದ ಸಭೆಯೊಂದರಲ್ಲಿ ಮಾತನಾಡುತ್ತಿದ್ದ ಜಿಎಸ್ ಎಂ ಸಂಸ್ಥಾಪಕ ವೆಲಿಂಗ್ಕರ್, 'ಚುನಾವಣೆಯ ಸಮಯದಲ್ಲಿ ರಾಜಕಾರಣಿಗಳು, ಯುವಕರು ಮತ್ತು ಮಹಿಳೆಯರನ್ನು ಮತ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಾರೆ' ಎಂದು ಆರೋಪಿಸಿದರು.
'ಯವಕರಿಗೆ ಮತ್ತು ಮಹಿಳೆಯರಿಗೆ ಉಡುಗೊರೆಗಳನ್ನು ಕೊಟ್ಟು, ಹಣವನ್ನು ಕೊಟ್ಟು ಮತ ಪಡೆಯುತ್ತಾರೆ. ಚುನಾವಣೆಯ ಸಮಯದಲ್ಲಿ ಹಣವನ್ನು ನೀರಿನಂತೆ ಖರ್ಚು ಮಾಡುವುದು ಈ ದಿನಗಳಲ್ಲಿ ಸಾಮಾನ್ಯವಾಗಿದೆ. ಈ ಕಾಲದಲ್ಲಿ ಮರ್ಯಾದಾ ಪುರುಷೋತ್ತಮ ರಾಮ ಚುನಾವಣೆಗೆ ನಿಂತರೂ, ಹಣ ಖರ್ಚು ಮಾಡದೆ ಆತ ಗೆಲ್ಲುವುದಕ್ಕೆ ಸಾಧ್ಯವೇ ಇಲ್ಲ' ಎಂದು ಅವರು ಹೇಳಿದರು.

'ಬಿಜೆಪಿ ಸಹ ನೈತಿಕತೆಯನ್ನು ಕಳೆದುಕೊಂಡಿದೆ. ಚುನಾವಣೆಯನ್ನು ಗೆಲ್ಲುವುದಕ್ಕೆ ಇತರ ಪಕ್ಷಗಳು ಯಾವೆಲ್ಲ ದಾರಿ ತುಳಿಯುತ್ತಾರೋ ಅದೇ ಹಾದಿಯನ್ನು ಬಿಜೆಪಿಯೂ ತುಳಿಯುತ್ತಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣಕ್ಕೆ ಗೋವಾದ ಇಬ್ಬರು ಸಚಿವರನ್ನು ಸಚಿವ ಸಂಪುಟದಿಂದ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಕೈಬಿಟ್ಟಿದ್ದನ್ನು ಅವರು ಟೀಕಿಸಿದರು. ತಾವೇ ಸ್ವತಃ ಅನಾರೋಗ್ಯಕ್ಕೆ ತುತ್ತಾಗಿದ್ದರೂ, ಅನಾರೋಗ್ಯದ ಕಾರಣಕ್ಕಾಗಿ ಇಬ್ಬರು ಸಚಿವರನ್ನು ಕೈಬಿಟ್ಟಿದ್ದು ಸರಿಯೇ ಎಂದು ಅವರು ಪ್ರಶ್ನಿಸಿದರು.
ಇತ್ತೀಚೆಗಷ್ಟೇ, ಸಚಿವ ಫ್ರಾನ್ಸಿಸ್ ಡಿ ಸೋಜಾ ಮತ್ತು ಪಾಂಡುರಂಗ ಮಡೈಕರ್ ಅವರನ್ನು ಗೋವಾ ಮುಖ್ಯಮಂತ್ರಿ ಪರಿಕ್ಕರ್ ಸಚಿವ ಸ್ಥಾನದಿಂದ ಕೈಬಿಟ್ಟಿದ್ದರು.












Click it and Unblock the Notifications