ವಾಯುಪಡೆ ವಿಮಾನಕ್ಕೆ ಲ್ಯಾಂಡ್ ಆಗಲು ಸಿಕ್ಕಿಲ್ಲ ಅನುಮತಿ
ನವದೆಹಲಿ, ಆಗಸ್ಟ್ 18; ಅಫ್ಘಾನಿಸ್ತಾನ ಸಂಪೂರ್ಣವಾಗಿ ತಾಲಿಬಾನ್ ವಶವಾಗಿದೆ. ಕಾಬೂಲ್ ಸೇರಿದಂತೆ ವಿವಿಧ ಪ್ರದೇಶದಲ್ಲಿ ಹಲವಾರು ಭಾರತೀಯರು ಇನ್ನೂ ಸಿಲುಕಿದ್ದಾರೆ. ಭಾರತೀಯ ವಾಯುಪಡೆ ಕಾಬೂಲ್‌ನಲ್ಲಿ ವಿಮಾನವನ್ನು ಇಳಿಸಲು ಆದೇಶಕ್ಕಾಗಿ ಕಾಯುತ್ತಿದೆ.
ಭಾರತೀಯ ವಾಯುಪಡೆ ಇದುವರೆಗೂ ಅಫ್ಘಾನಿಸ್ತಾನದಿಂದ 180 ಭಾರತೀಯರನ್ನು ರಕ್ಷಣೆ ಮಾಡಿದೆ. ವಾಯುಪಡೆ ಮತ್ತು ವಾಣಿಜ್ಯ ವಿಮಾನಗಳನ್ನು ರಕ್ಷಣಾ ಕಾರ್ಯಾಚರಣೆಗಾಗಿ ಸಿದ್ಧಗೊಳಿಸಿ ಇಡಲಾಗಿದೆ.
ಕಾಬೂಲ್ ವಿಮಾನ ನಿಲ್ದಾಣದಲ್ಲಿ ಇನ್ನೂ ಹಲವು ಭಾರತೀಯರು ಇದ್ದಾರೆ. ಅವರನ್ನು ರಕ್ಷಣೆ ಮಾಡಲು ವಾಯುಪಡೆ ವಿಮಾನ ಸಿದ್ಧವಾಗಿದೆ. ಆದರೆ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಲು ಆದೇಶ ಸಿಕ್ಕಿಲ್ಲ.

ಪ್ರಧಾನಿ ನರೇಂದ್ರ ಮೋದಿ ನಿವಾಸದಲ್ಲಿ ನಡೆದ ಸಂಪುಟ ಭದ್ರತಾ ಸಮಿತಿ ಸಭೆಯಲ್ಲಿ ಅಫ್ಘಾನಿಸ್ತಾನ ಪ್ರಸ್ತುತ ಪರಿಸ್ಥಿತಿ ಮತ್ತು ಭಾರತೀಯರ ರಕ್ಷಣೆ ಬಗ್ಗೆ ವಿವರವಾದ ಚರ್ಚೆಗಳು ನಡೆದಿವೆ. ವಿದೇಶಾಂಗ ಇಲಾಖೆಯ ಕೆಲವು ಅಧಿಕಾರಿಗಳು ಮತ್ತು ಹಲವು ಭಾರತೀಯರನ್ನು ಮಂಗಳವಾರ ಭಾರತಕ್ಕೆ ಕರೆತರಲಾಗಿದೆ.
Recommended Video
ಪ್ರಧಾನಿ ನರೇಂದ್ರ ಮೋದಿ ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಪ್ರತಿಯೊಬ್ಬ ಪ್ರಜೆಯ ರಕ್ಷಣೆ, ಸುರಕ್ಷತೆ ಬಗ್ಗೆ ಗಮನಹರಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರೆಸಲು ವಿಮಾನಗಳನ್ನು ಸಿದ್ಧವಾಗಿ ಇಟ್ಟುಕೊಳ್ಳಲಾಗಿದೆ.
120 ಜನರ ರಕ್ಷಣೆ; ಭಾರತೀಯ ವಾಯುಪಡೆಯ ಸಿ-17 ವಿಮಾನ ಮಂಗಳವಾರ ಕಾಬೂಲ್‌ನಿಂದ ಗುಜರಾತ್‌ಗೆ ಆಗಮಿಸಿದೆ. ವಿದೇಶಾಂಗ ಇಲಾಖೆಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ ಅಧಿಕಾರಿಗಳ ಕೊನೆಯ ತಂಡ ಈ ವಿಮಾನದಲ್ಲಿ ಭಾರತಕ್ಕೆ ವಾಪಸ್ ಆಗಿದ್ದಾರೆ.
120 ಜನರ ತಂಡದಲ್ಲಿ ವಿದೇಶಾಂಗ ಇಲಾಖೆ ಸಿಬ್ಬಂದಿ, ಐಟಿಬಿಪಿ ಸಿಬ್ಬಂದಿಗಳು, ನಾಲ್ವರು ಪತ್ರಕರ್ತರು ಕಾಬೂಲ್‌ನಿಂದ ಭಾರತಕ್ಕೆ ವಾಪಸ್ ಆಗಿದ್ದಾರೆ. ಬುಧವಾರ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಭಾರತದ ವಿಮಾನ ಲ್ಯಾಂಡ್ ಆಗಲು ಅನುಮತಿ ಸಿಕ್ಕಿಲ್ಲ. ವಿಮಾನ ನಿಲ್ದಾಣದಲ್ಲಿ ಭಾರತೀಯರು ಇದ್ದು, ಅವರ ರಕ್ಷಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಸೋಮವಾರ ಕಾಬೂಲ್ ವಿಮಾನ ನಿಲ್ದಾಣದಿಂದ 46 ಭಾರತೀಯರನ್ನು ವಾಪಸ್ ಕರೆತರಲಾಗಿತ್ತು. ಮಂಗಳವಾರ ಭಾರತೀಯ ರಾಯಭಾರ ಕಚೇರಿಯಿಂದ ವಿಮಾನ ನಿಲ್ದಾಣಕ್ಕೆ ಸಿಬ್ಬಂದಿಗಳು ತೆರಳಲು ತಾಲಿಬಾನ್ ಉಗ್ರರು ಸಹಕಾರ ನೀಡಿದ್ದಾರೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಮಾಧ್ಯಮಗಳ ಜೊತೆ ಮಾತನಾಡಿದರು. ರಾಜ್ಯದ 200 ಜನರು ಅಫ್ಘಾನಿಸ್ತಾನದಲ್ಲಿ ಸಿಲುಕಿದ್ದಾರೆ. ಅವರನ್ನು ಸುರಕ್ಷಿತವಾಗಿ ವಾಪಸ್ ಕರೆತರಲು ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತಕತೆ ನಡೆಸಲಾಗಿದೆ ಎಂದು ಹೇಳಿದರು.
ಕನ್ನಡಿಗರು ಇದ್ದಾರೆ; ಅಫ್ಘಾನಿಸ್ತಾನದಲ್ಲಿ ಸಿಲುಕಿರುವವರಲ್ಲಿ ಕನ್ನಡಿಗರು ಸಹ ಇದ್ದಾರೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ದೊಡ್ಡಮನೆ ಕೇರಿ ವಾಸಿಯಾಗಿರುವ ಫಾದರ್ ರಾಬರ್ಟ್ ಬಾಮಿಯಾನ್ ಎಂಬಲ್ಲಿ ಚರ್ಚ್‌ನಲ್ಲಿದ್ದು, ಅದೇ ಪ್ರಾಂತ್ಯದಲ್ಲಿ ಸಿಲುಕಿದ್ದಾರೆ.
ಫಾದರ್ ರಾಬರ್ಟ್ ಸಿಲುಕಿರುವ ಕುರಿತು ಮಂಗಳೂರು ಮೂಲದ ಫಾದರ್ ಜೆರೋಮ್ ಸಿಕ್ವೇರಾ ಭಾರತದಲ್ಲಿರುವ ತಮ್ಮ ಸಹವರ್ತಿಗಳಿಗೆ ಇ-ಮೇಲ್ ಕಳಿಸಿದ್ದಾರೆ. ಫಾದರ್ ರಾಬರ್ಟ್ ತಮ್ಮ ಚರ್ಚ್‌ನಿಂದ ಬಾಮಿಯಾನ್ ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ. ಆದರೆ ನಿಲ್ದಾಣದ ಸಿಬ್ಬಂದಿಗಳು ಪರಾರಿಯಾಗಿದ್ದಾರೆ.
ಬಾಮಿಯಾನ್‌ನಿಂದ ಕಾಬುಲ್‌ಗೆ ಕೇವಲ 25 ನಿಮಿಷಗಳ ಪ್ರಯಾಣ. ಆದರೆ ಪ್ರಸ್ತುತ ಸಂಚಾರಕ್ಕೆ ಅವಕಾಶವಿಲ್ಲ. ಇದರಿಂದಾಗಿ ಫಾದರ್ ರಾಬರ್ಟ್ ನೆರವಿನ ನಿರೀಕ್ಷೆಯಲ್ಲಿದ್ದಾರೆ. ತಾಲಿಬಾನ್ ಉಗ್ರರು ವಿಮಾನ ಲ್ಯಾಂಡ್ ಮಾಡಲು ಯಾವಾಗ ಅವಕಾಶ ನೀಡಲಿದ್ದಾರೆ? ಎಂದು ಕಾದು ನೋಡಬೇಕಿದೆ.
ಕರ್ನಾಟಕ ಸರ್ಕಾರ ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರುವ ಸಲುವಾಗಿ ಕೇಂದ್ರ ಸರ್ಕಾರದೊಂದಿಗೆ ಸಮನ್ವಯ ಸಾಧಿಸಲು ಸಿಐಡಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಉಮೇಶ್ ಕುಮಾರ್‌ರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿದೆ. ·
ಜನರ ನೆರವಿಗಾಗಿ ಕಂಟ್ರೋಲ್ ರೂಮ್ ಸಹ ಸ್ಥಾಪಿಸಲಾಗಿದೆ. ಜನರು ನೆರವಿಗೆ 080-22094498, 080-22942628, 9480800187 ನಂಬರ್‌ಗೆ ಕರೆ ಮಾಡಬಹುದು ಅಥವ [email protected]
ವಿಳಾಸಕ್ಕೆ ಇ-ಮೇಲ್ ಕಳಿಸಬಹುದಾಗಿದೆ.












Click it and Unblock the Notifications