Maharashtra: ನನ್ನನ್ನು ಹಗುರವಾಗಿ ತೆಗೆದುಕೊಳ್ಳಬೇಡಿ; ಎಚ್ಚರಿಕೆ ಕೊಟ್ಟ ಏಕನಾಥ್ ಶಿಂಧೆ
ಮಹಾರಾಷ್ಟ್ರದಲ್ಲಿ ಆಡಳಿತ ನಡೆಸುತ್ತಿರುವ ಮಹಾಯುತಿ ಸರ್ಕಾರಕ್ಕೆ ದೊಡ್ಡ ತಲೆನೋವು ಎದುರಾಗಿದೆ. ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ಇದೀಗ ಆಡಳಿತಾರೂಢ ಸರ್ಕಾರಕ್ಕೆ ಮಗ್ಗುಲ ಮುಳ್ಳಾಗಿದ್ದಾರೆ. ಆಡಳಿತ ಮೈತ್ರಿಕೂಟದಲ್ಲಿ ಬಿರುಕು ಮೂಡಿದೆ ಎನ್ನುವ ವದಂತಿಗಳ ನಡುವೆ ಏಕನಾಥ್ ಶಿಂಧೆ ನೀಡುತ್ತಿರುವ ಹೇಳಿಕೆಗಳು ಈಗ ಸಾಕಷ್ಟು ಕುತೂಹಲ ಕೆರಳಿಸುತ್ತಿವೆ.
ಶುಕ್ರವಾರ ಕೂಡ ತಮ್ಮ ವಿರೋಧಿಗಳಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ. ನನ್ನನ್ನು ಹಗುರವಾಗಿ ಪರಿಗಣಿಸಬೇಡಿ ಎಂದಿರುವ ಅವರು, 2022ರಲ್ಲಿ ಶಿವಸೇನೆಯನ್ನು ಎರಡು ಭಾಗ ಮಾಡಿ ರಾಜ್ಯ ಸರ್ಕಾರವನ್ನೇ ಉರುಳಿಸಿದ್ದೇನೆ ಎಂದಿದ್ದಾರೆ.

"ನನ್ನನ್ನು ಹಗುರವಾಗಿ ಪರಿಗಣಿಸಬೇಡಿ, ಹಗುರವಾಗಿ ಪರಿಗಣಿಸಿದ್ದವರಿಗೆ ನಾನು ಈಗಾಗಲೇ ಹೇಳಿದ್ದೇನೆ, ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತ, ಆದರೆ ನಾನು ಬಾಳಾ ಸಾಹೇಬರ ಕಾರ್ಯಕರ್ತ, ಎಲ್ಲರೂ ಅದನ್ನು ತಿಳಿದುಕೊಳ್ಳಬೇಕು, 2022ರಲ್ಲಿ ನನ್ನನ್ನು ಹಗುರವಾಗಿ ಪರಿಗಣಿಸಿದಾಗ ನಾನು ಸರ್ಕಾರವನ್ನೇ ಬದಲಾಯಿಸಿದೆ. ನಾವು ಸಾಮಾನ್ಯ ಜನ ಇಷ್ಟಪಡುವ ಸರ್ಕಾರವನ್ನು ತಂದಿದ್ದೇವೆ" ಎಂದು ಅವರು ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.
ಸರ್ಕಾರದಲ್ಲಿ ಭಿನ್ನಾಭಿಪ್ರಾಯ
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸಭೆಗಳನ್ನು ಕರೆಯುತ್ತಿದ್ದು ಇದಕ್ಕೆ ಏಕನಾಥ್ ಶಿಂಧೆ ಅವರನ್ನು ಆಹ್ವಾನಿಸದೆ ಕಡೆಗಣಿಸುತ್ತಿರುವುದು ಭಿನ್ನಾಭಿಪ್ರಾಯದ ಊಹಾಪೋಹಗಳಿಗೆ ಕಾರಣವಾಗಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
2022ರಲ್ಲಿ ಏಕನಾಥ್ ಶಿಂಧೆ ಅವರು ಬಂಡಾಯ ಎದ್ದಿದ್ದರಿಂದ ಉದ್ದವ್ ಠಾಕ್ರೆ ಅವರ ಸರ್ಕಾರ ಪತನವಾಗಿತ್ತು. ಶಿವಸೇನೆ ಎರಡು ಭಾಗವಾಗಿತ್ತು, ಏಕನಾಥ್ ಶಿಂಧೆ ತಮ್ಮ ಬೆಂಬಲಿತ ಶಾಸಕರ ಜೊತೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದರು.
ಆದರೆ ಕಳೆದ ವರ್ಷ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತಕ್ಕಿಂತ ಹೆಚ್ಚಿನ ಸ್ಥಾನಗಳಲ್ಲಿ ಗೆದ್ದ ಬಳಿಕ ಏಕನಾಥ್ ಶಿಂಧೆ ಬಿಜೆಪಿಗೆ ಮುಖ್ಯಮಂತ್ರಿ ಹುದ್ದೆಯನ್ನು ಬಿಟ್ಟುಕೊಟ್ಟರು.
288 ಸ್ಥಾನಗಳನ್ನು ಹೊಂದಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಏಕನಾಥ್ ಶಿಂಧೆ ಅವರ ಶಿವಸೇನೆ 57 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಬಿಜೆಪಿ 132 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.
ನನ್ನನ್ನು ಹಗುರವಾಗಿ ಪರಿಗಣಿಸುವವರು ನನ್ ಹೇಳಿಕೆಯನ್ನು ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ. 200ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತೇವೆ ಎಂದು ನಾನು ದೇವೇಂದ್ರ ಫಡ್ನವಿಸ್ ಅವರಿಗೆ ಮೊದಲೇ ಹೇಳಿದ್ದೆ, ಅದರಂತೆ 232 ಸ್ಥಾನಗಳಲ್ಲಿ ನಾವು ಗೆಲುವು ಸಾಧಿಸಿದ್ದೇವೆ. ನನ್ನನ್ನು ಹಗುರವಾಗಿ ಪರಿಗಣಿಸಬೇಡಿ, ಇದನ್ನು ಅರ್ಥಮಾಡಿಕೊಳ್ಳಬೇಕು ನಾನು ನನ್ನ ಕೆಲಸ ಮುಂದುವರೆಸುತ್ತೇನೆ ಎಂದರು.
ಇತ್ತೀಚೆಗೆ ತಮಗೆ ಬಂದಿರುವ ಕೊಲೆ ಬೆದರಿಕೆ ಬಗ್ಗೆ ಕೂಡ ಪ್ರತಿಕ್ರಿಯೆ ನೀಡಿದ್ದು, ಹಿಂದೆಯೂ ಕೊಲೆ ಬೆದರಿಕೆಗಳು ಬಂದಿವೆ, ಡ್ಯಾನ್ಸ್ ಬಾರ್ ಮುಚ್ಚಿಸಿದ್ದಾಗಲೂ ಕೊಲೆ ಮಾಡುವುದಾಗಿ ಬೆದರಿಕೆ ಕರೆ ಬಂದಿದ್ದವು. ನಕ್ಸಲರು ಕೂಡ ನನಗೆ ಬೆದರಿಕೆ ಹಾಕಿದ್ದರು ಆದರೆ ನಾನು ಯಾವ ಬೆದರಿಕೆಗೂ ಮಣಿಯುವುದಿಲ್ಲ ಎಂದು ಹೇಳಿದ್ದಾರೆ.












Click it and Unblock the Notifications