ನನ್ನನ್ನು ಜೀ ಎನ್ನಬೇಡಿ, ಮೋದಿ ಎಂದರೆ ಸಾಕು: ಪ್ರಧಾನಿ ಮೋದಿ
ನವದೆಹಲಿ, ಡಿಸೆಂಬರ್ 7: ತಮ್ಮನ್ನು ಮೋದಿ ಜೀ ಎಂದು ಕರೆಯಬೇಡಿ. ಇದು ಯಾರ ವೈಯಕ್ತಿಕ ಗೆಲುವಲ್ಲ, ಸಾಮೂಹಿಕ ಗೆಲುವು. ನನ್ನನ್ನು ಮೋದಿ ಜೀ ಮಾಡುವ ಮೂಲಕ ಸಾರ್ವಜನಿಕರಿಂದ ದೂರ ಮಾಡಬೇಡಿ, ನಾನು ಮೋದಿ ಅಷ್ಟೇ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ತಮ್ಮ ಪಕ್ಷದ ಸದಸ್ಯರಿಗೆ ಮನವಿ ಮಾಡಿದ್ದಾರೆ.
ಮೂರು ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷವು ಅಭೂತಪೂರ್ವ ಗೆಲುವು ಸಾಧಿಸಿದ ನಂತರ ಗುರುವಾರ ನಡೆದ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಪ್ರಧಾನಿ ಮೋದಿ, ಆಡಳಿತಕ್ಕಾಗಿ ಭಾರತೀಯ ಜನತಾ ಪಕ್ಷವು ಹೆಚ್ಚು ಆದ್ಯತೆಯ ಪಕ್ಷವಾಗಿದೆ. ಇದಕ್ಕಾಗಿ ಇತ್ತೀಚಿನ ರಾಜ್ಯ ಚುನಾವಣೆಗಳನ್ನು ನೋಡಿದರೆ ತಿಳಿಯುತ್ತದೆ ಎಂದು ತಿಳಿಸಿದರು.

ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಬಿಜೆಪಿ ಸಂಸದೀಯ ಪಕ್ಷದ ಮೊದಲ ಸಭೆಯಲ್ಲಿ ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಸೇರಿದಂತೆ ಹಿರಿಯ ನಾಯಕರು ಮೋದಿ ಅವರನ್ನು ಅಭಿನಂದಿಸುತ್ತಿದ್ದಂತೆ ಪಕ್ಷದ ಸಂಸದರು ಮೋದಿ ಅವರ ನಾಯಕತ್ವವನ್ನು ಶ್ಲಾಘಿಸಿ ಘೋಷಣೆಗಳನ್ನು ಕೂಗಿದರು.
ನಾನೊಬ್ಬ ಬಿಜೆಪಿ ಪಕ್ಷದ ಸಣ್ಣ ಕಾರ್ಯಕರ್ತ. ಜನರು ನನ್ನನ್ನು ಅವರ ಕುಟುಂಬ ಓರ್ವ ಸದಸ್ಯನಾಗಿ ಕಂಡಿದ್ದಾರೆ. ಆದರೆ ನನ್ನ ಹೆಸರಿನ ಹಿಂದೆ ಮುಂದೆ ಶ್ರೀ, ಆದರಣೀಯ ಜಿ ಅನ್ನೋ ಪದಗಳು ಸೇರಿಸುವುದರಿಂದ ಅಂತರ ಕಾಯ್ದುಕೊಂಡಂತೆ ಆಗಲಿದೆ. ಹೀಗಾಗಿ ಮೋದಿ ಎಂದರೆ ಸಾಕು ಎಂದರು.
ನಾನು ಕೂಡ ಬಿಜೆಪಿ ಕಾರ್ಯಕರ್ತರಲ್ಲಿ ಒಬ್ಬ ಎಂದು ಎಲ್ಲಾ ಸಂಸದರು ಪರಿಗಣಿಸಬೇಕು. ನಮ್ಮ ಕಾರ್ಯಕರ್ತರ ನಡುವೆ ಭೇದಭಾವವಿಲ್ಲ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತಾರೆ. ಬಿಜೆಪಿ ನನಗೆ ಕೆಲ ಜವಾಬ್ದಾರಿ ನೀಡಿದೆ. ಹೀಗೆ ಪ್ರತಿಯೊಬ್ಬ ಕಾರ್ಯಕರ್ತರಿಗೆ ಒಂದೊಂದು ಜವಾಬ್ದಾರಿ ನೀಡಿದೆ ಎಂದು ಮೋದಿ ಹೇಳಿದರು.

ಮೂರು ರಾಜ್ಯಗಳಾದ ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನಕ್ಕೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಕಾಂಗ್ರೆಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಪ್ರಧಾನಿ ಮೋದಿಯವರ ನಾಯಕತ್ವವು ಅವರ ದೊಡ್ಡ ಗೆಲುವಿಗೆ ಪ್ರಾಥಮಿಕ ಕಾರಣ ಎಂದು ಹಲವು ನಾಯಕರು ಹೇಳಿದ್ದಾರೆ.
ತನ್ನ ಎಲ್ಲಾ ಲೋಕಸಭೆ ಮತ್ತು ರಾಜ್ಯಸಭಾ ಸದಸ್ಯರನ್ನು ಒಳಗೊಂಡಿರುವ ಬಿಜೆಪಿ ಸಂಸದೀಯ ಪಕ್ಷವು ಸಾಮಾನ್ಯವಾಗಿ ಪ್ರತಿ ವಾರ ಅಧಿವೇಶನಗಳ ಸಮಯದಲ್ಲಿ ಸಭೆ ಸೇರುತ್ತದೆ. ಸಭೆಗಳಲ್ಲಿ, ಪಿಎಂ ಮೋದಿ ಸೇರಿದಂತೆ ಅದರ ನಾಯಕರು ಸಂಸತ್ತಿನಲ್ಲಿನ ಕಾರ್ಯಸೂಚಿಗೆ ಮತ್ತು ಅದರ ಸಾಂಸ್ಥಿಕ ಮತ್ತು ರಾಜಕೀಯ ಪ್ರಚಾರಗಳಿಗೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ಮಾತನಾಡುತ್ತಾರೆ.
ಆರ್‌ಎಸ್‌ಎಸ್ ನಾಯಕರನ್ನು ಜೀ ಎಂದು ಕರೆಯುವುದು ವಾಡಿಕೆ. ಅದರಂತೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಟ್ಟಾಳು ಆಗಿರುವ ನರೇಂದ್ರ ಮೋದಿ ಅವರನ್ನು ಮೋದಿಜೀ ಎಂದು ಎಲ್ಲರೂ ಕರೆಯುತ್ತಿದ್ದರು. ಆದರೆ ಈಗ ನನ್ನನ್ನು ಜೀ ಎಂದು ಕರೆಯಬೇಡಿ ಎಂದು ಮೋದಿ ಹೇಳಿದ್ದು ಸಾಕಷ್ಟು ಚರ್ಚೆಗೀಡು ಮಾಡಿದೆ.
ಸರ್ಕಾರದ ಯೋಜನೆಗಳು ಮತ್ತು ಕಾರ್ಯಕ್ರಮಗಳ ಸಂದೇಶವನ್ನು ಜನಸಾಮಾನ್ಯರಿಗೆ ಕೊಂಡೊಯ್ಯುವ ಉದ್ದೇಶದಿಂದ ಮುಂಬರುವ ವಿಕ್ಷಿತ್ ಭಾರತ್ ಯಾತ್ರೆಯಲ್ಲಿ ಸಂಸದರು ಭಾಗವಹಿಸಬೇಕು ಎಂದು ಮೋದಿ ಅವರು ಒತ್ತಾಯಿಸಿದ್ದಾರೆ. ಮೇಡ್-ಇನ್-ಇಂಡಿಯಾ ತೇಜಸ್ ಯುದ್ಧ ವಿಮಾನವನ್ನು ಹೊಗಳಿದ ಅವರು, ಮೇಕ್ ಇನ್ ಇಂಡಿಯಾ ಯೋಜನೆಯು ಜಾಗತಿಕವಾಗಿ ಚರ್ಚೆಯಾಗಿದೆ. ಹೀಗಾಗಿ ಸ್ಥಳೀಯ ಉತ್ಪಾದನೆ ಮತ್ತು ಉತ್ಪಾದನೆಯನ್ನು ಉತ್ತೇಜಿಸಲು ಒತ್ತು ನೀಡಬೇಕು ಎಂದರು.












Click it and Unblock the Notifications