Nitin Gadkari: ಆರ್‌ಎಸ್‌ಎಸ್ ಬಗ್ಗೆ ನಿತಿನ್ ಗಡ್ಕರಿ ಏನಂದ್ರು ಗೊತ್ತಾ?
ನಾಗ್ಪುರ, ಏಪ್ರಿಲ್, 01: ಈಗಾಗಲೇ ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಎಲ್ಲಾ ರಾಜಕೀಯ ಪಕ್ಷಗಳು ಕೂಡ ಗೆಲುವಿಗಾಗಿ ಭಾರೀ ಪೈಪೋಟಿ ನಡೆಸುತ್ತಿವೆ. ಅಲ್ಲದೆ ಬೇರೆ ರಾಜಕೀಯ ಪಕ್ಷಗಳ ಬಗ್ಗೆ ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಿದ್ದಾರೆ. ಇದೀಗ ನಿತಿನ್ ಗಡ್ಕರಿಯವರು ಆರ್‌ಎಸ್‌ಎಸ್ ಬಗ್ಗೆ ಹಾಗೂ ತಮ್ಮ ಕೆಲವೊಂದು ವಿಚಾರಗಳನ್ನು ಹೇಳಿದ್ದಾರೆ ಹಾಗಾದರೆ ಅವರು ಏನು ಹೇಳಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಭಾರತೀಯ ಜನತಾ ಪಾರ್ಟಿ (BJP) ಇದೀಗ ಸಂಸತ್‌ನಲ್ಲಿ 288 ಸದಸ್ಯ ಬಲವನ್ನು ಹೊಂದಿದ್ದು, ಇದನ್ನು ಉಳಿಸಿಕೊಳ್ಳುವ ಜೊತೆಗೆ ದಕ್ಷಿಣದಿಂದ ಹೆಚ್ಚಿನ ಸ್ಥಾನಗಳನ್ನು ಗೆದ್ದು ಪ್ರಧಾನಿ ನರೇಂದ್ರ ಮೋದಿ ಅವರು ಅಂದುಕೊಂಡಂತೆ 370 ಸ್ಥಾನಗಳನ್ನು ತೆಕ್ಕೆಗೆ ಹಾಕಿಕೊಳ್ಳುತ್ತೇವೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಭರವಸೆ ವ್ಯಕ್ತಪಡಿಸಿದರು.

ಎಲ್ಲಾ ರಾಜ್ಯಗಳ ಲೆಕ್ಕಾಚಾರವನ್ನು ನೋಡುವ ಅಗತ್ಯವೇ ಇಲ್ಲ. ಈ ಬಾರಿ ನಾವು ದಕ್ಷಿಣದಲ್ಲಿ ಯಶಸ್ಸನ್ನು ಕಾಣಲಿದ್ದೇವೆ. ಪ್ರಧಾನಿ ಮೋದಿ ಸರ್ಕಾರ ದಕ್ಷಿಣದಲ್ಲಿ ಮತ್ತು ಈಶಾನ್ಯ ರಾಜ್ಯಗಳಲ್ಲಿ ಮಾಡಿದ ಕೆಲಸಕ್ಕೆ ಫಲ ಸಿಗುವ ಕಾಲ ಬಂದಿದೆ ಎಂದರು.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಕಳೆದ 10 ವರ್ಷಗಳಿಂದ ಮಾಡಿದ ಉತ್ತಮ ಕೆಲಸಗಳಿಂದ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವು 400ಕ್ಕೂ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿ ಪಟ್ಟ ಅಲಂಕರಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದ್ದಾರೆ.
2025ರಲ್ಲಿ ಆರ್‌ಎಸ್‌ಎಸ್‌ಗೆ ನೂರು ವರ್ಷ ತುಂಬಲಿದೆ. ಈ ಬಗ್ಗೆ ನಿಮ್ಮ ಕಾರ್ಯಸೂಚಿ ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ವ್ಯಕ್ತಿಗತವಾಗಿ ಯಾವ ಮಾರ್ಗಸೂಚಿಯೂ ಇಲ್ಲ. ಆರ್‌ಎಸ್‌ಎಸ್ ಅದರ ಕಾರ್ಯಸೂಚಿ ಏನು ಅನ್ನುವುದನ್ನು ಹೇಳುತ್ತದೆ. ಅದನ್ನು ಈಡೇರಿಸುವುದು ನಮ್ಮ ಜವಾಬ್ದಾರಿ ಆಗಿದೆ ಎಂದು ಎಂದು ಹೇಳಿದರು.
ಬಿಜೆಪಿ ಚುನಾವಣಾ ಬಾಂಡ್‌ಗಳ ಮೂಲಕ ಹೆಚ್ಚಿನ ದೇಣಿಗೆ ಪಡೆದಿದ್ದು ಸಹಜ. ಟಿ.ವಿ. ಮಾಧ್ಯಮದಲ್ಲಿಯೂ ಕೂಡ ಟಿಆರ್‌ಪಿ ಹೆಚ್ಚು ಇರುವವರೆಗೆ ಹೆಚ್ಚು ಜಾಹೀರಾತು ಸಿಗುತ್ತದೆ. ಟಿಆರ್‌ಪಿ ಕಡಿಮೆ ಇದ್ದರೆ ಕಡಿಮೆ ದರದ ಜಾಹೀರಾತು ಲಭ್ಯವಾಗುತ್ತದೆ. ಇದೀಗ ನಾವು ಆಡಳಿತ ಮಾಡುತ್ತಿದ್ದೇವೆ. ಆದ್ದರಿಮದ ನಮಗೆ ಹೆಚ್ಚು ದೇಣಿಗೆ ಸಿಕ್ಕಿದ್ದು, ನಾಳೆ ಮತ್ತೊಂದು ಪಕ್ಷ ಅಧಿಕಾರಕ್ಕೆ ಬಂದರೆ, ಅದು ಹೆಚ್ಚು ದೇಣಿಗೆ ಪಡೆಯುತ್ತದೆ ಎಂದರು.
ಅರವಿಂದ್ ಕೇಜ್ರಿವಾಲ್ ಸೇರಿದಂತೆ ವಿಪಕ್ಷಗಳ ಮುಖಂಡರ ವಿರುದ್ಧ ಇ.ಡಿ, ಸಿಬಿಐ, ಆದಾಯ ತೆರಿಗೆ ಇಲಾಖೆ ಮುಂತಾದ ಸಂಸ್ಥೆಗಳು ಕ್ರಮ ಜರುಗಿಸಿದ್ದರ ಕುರಿತು ಮಾತನಾಡಿದ ಅವರು, ನಾವು ನಮ್ಮಿಚ್ಛೆಯಂತೆ ಕ್ರಮ ಕೈಗೊಂಡಿಲ್ಲ. ಕಾನೂನು ಪ್ರಕಾರ ಪ್ರಕರಣಗಳು ದಾಖಲು ಆಗಿವೆ. ಇದರಲ್ಲಿ ಮೋದಿಜಿ ಅಥವಾ ಬಿಜೆಪಿಯದ್ದು ಯಾವುದೇ ಪಾತ್ರವಿಲ್ಲ ಎಂದು ಹೇಳಿದರು.












Click it and Unblock the Notifications