DK Shivakumar: ಡಿ ಕೆ ಶಿವಕುಮಾರ್ ಡಾವೊಸ್ ಪ್ರವಾಸ ರದ್ದು: ಕಾರಣ ಇಲ್ಲಿದೆ
ದೆಹಲಿ: ಜನವರಿ 18ರಂದು ನಿಗದಿಯಾಗಿದ್ದ ವರ್ಲ್ಡ್ ಏಕನಾಮಿಕ್ ಫೋರಂ ಕಾರ್ಯಕ್ರಮದಲ್ಲಿ ಭಾಗವಹಿಸುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪ್ರವಾಸವನ್ನು ರದ್ದುಗೊಳಿಸಲಾಗಿದೆ. ಬೆಂಗಳೂರು ಹಾಗೂ ನವದೆಹಲಿಯಲ್ಲಿ ಅಧಿಕೃತ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಡಿಸಿಎಂ ಅವರ ಈ ಪ್ರವಾಸ ರದ್ದುಗೊಳಿಸಲಾಗಿದೆ.
ರಾಜ್ಯ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಎಐಸಿಸಿ ನಾಯಕರ ಜೊತೆಗಿನ ಸರಣಿ ಸಭೆ ಹಾಗೂ ಮನರೇಗಾ ಮರುಜಾರಿ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧದ ಅಭಿಯಾನದ ಜೊತೆಗೆ ಜನವರಿ 22ರಿಂದ ಆರಂಭವಾಗುವ ಐದು ದಿನಗಳ ವಿಶೇಷ ಅಧಿವೇಶನದಲ್ಲಿ ಭಾಗವಹಿಸಬೇಕಾಗಿದೆ. ಹೀಗಾಗಿ ಡಾವೋಸ್ ಪ್ರವಾಸವನ್ನ ರದ್ದುಗೊಳಿಸಲಾಗಿದೆ.

ಅಸ್ಸಾಂನಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ: ಡಿಕೆಶಿ
ಅಸ್ಸಾಂ ರಾಜ್ಯದ ಜನ ಬದಲಾವಣೆ ಬಯಸಿದ್ದಾರೆ. ಖಂಡಿತವಾಗಿ ಅಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ಪಕ್ಷ ಒಗ್ಗಟ್ಟಾಗಿ ಕೆಲಸ ಮಾಡಲಿದೆ. ಆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಪರವಾದ ಅಲೆಯಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಶ್ವಾಸ ವ್ಯಕ್ತಪಡಿಸಿದರು.
ನಮಗೆಲ್ಲರಿಗೂ ಚುನಾವಣೆ ನಿರ್ವಹಣೆ ಮಾಡಿ ಅನುಭವವಿದೆ. ನಾವೆಲ್ಲರೂ ಒಟ್ಟಾಗಿ ಅಸ್ಸಾಂನಲ್ಲಿ ಬದಲಾವಣೆಗಾಗಿ ಕೆಲಸ ಮಾಡುತ್ತೇವೆ. ಅಲ್ಲಿನ ಜನರ ಅಭಿಲಾಷೆಯೂ ಇದೇ ಆಗಿದೆ. ಗ್ಯಾರಂಟಿಯಾಗಿ ಸರ್ಕಾರ ಅಧಿಕಾರಕ್ಕೇರಲಿದೆ. ಸ್ಪಷ್ಟ ಸಂದೇಶವನ್ನು ನೀಡಲು ನಾವು ಬಯಸುತ್ತೇವೆ. ನಮ್ಮ ಕಾರ್ಯಕ್ರಮಗಳ ಬಗ್ಗೆ ತಿಳಿಸುತ್ತೇವೆ ಎಂದರು. ಅಸ್ಸಾಂ ರಾಜ್ಯದಲ್ಲಿ ಪಕ್ಷದ ನಾಯಕತ್ವ ವಹಿಸಿಕೊಂಡಿರುವವರು ಯುವಕರು. ಇಲ್ಲಿನ ಎಲ್ಲಾ ನಾಯಕರು ಬೆಂಬಲ ನೀಡುತ್ತಿದ್ದಾರೆ. ನಮ್ಮ ಒಗ್ಗಟ್ಟು ಸ್ಪಷ್ಟ ಸಂದೇಶವನ್ನು ನೀಡಿದೆ. ಮಲ್ಲಿಕಾರ್ಜುನ ಖರ್ಗೆ ಅವರು ಹಾಗೂ ರಾಹುಲ್ ಗಾಂಧಿ ಅವರ ನಾಯಕತ್ವದಲ್ಲಿ ಪಕ್ಷ ಮುನ್ನಡೆಯಲಿದೆ ಎಂದರು.
ಭೂಪೇಶ್ ಬಘೇಲ್ ಅವರು ಯಾವ ಕಾರ್ಯತಂತ್ರಗಳನ್ನು ಚುನಾವಣೆಯಲ್ಲಿ ಅನುಸರಿಸಬೇಕು ಎಂದು ಸಲಹೆಗಳನ್ನು ನೀಡಿದ್ದಾರೆ. ಜೊತೆಗೆ ಸಭೆಯಲ್ಲಿ ಸಾಕಷ್ಟು ನಾಯಕರು ತಮ್ಮ ಆಲೋಚನೆಗಳನ್ನು ತಿಳಿಸಿದ್ದಾರೆ. ಪಕ್ಷದ ಪದಾಧಿಕಾರಿಗಳು ಅಸ್ಸಾಂನ ಪ್ರಸ್ತುತ ಸ್ಥಿತಿಯ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೇಳಿದರು.












Click it and Unblock the Notifications