Free LPG Cylinder: ದೀಪಾವಳಿ ಗಿಫ್ಟ್: 1.86 ಕೋಟಿ ಮಹಿಳೆಯರಿಗೆ ಉಚಿತ ಎಲ್‌ಪಿಜಿ ಸಿಲಿಂಡರ್
ಬೆಳಕಿನ ಹಬ್ಬ ದೀಪಾವಳಿ ಪ್ರಯುಕ್ತ ಸರ್ಕಾರವು ಮಹಿಳೆಯರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಸರ್ಕಾರದಿಂದಲೇ ಬಡ ಮಹಿಳೆಯರಿಗೆ ಉಚಿತ ಎಲ್‌ಪಿಜಿ ಸಿಲಿಂಡರ್‌ಗಳನ್ನು ನೀಡುವುದಾಗಿ ಘೋಷಣೆ ಮಾಡಿದೆ. ಇದು 2016ರಲ್ಲಿ ಪ್ರಾರಂಭಿಸಲಾದ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಭಾಗವಾಗಿದ್ದು, ದೀಪಾವಳಿಗೆ ಮುನ್ನವೇ 1.86 ಕೋಟಿ ಮಹಿಳೆಯರಿಗೆ ಎಲ್‌ಪಿಜಿ ಸಿಲಿಂಡರ್‌ಗಳು ಉಚಿತವಾಗಿ ಸಿಗಲಿವೆ.
ಈ ಯೋಜನೆಯಡಿ ಎರಡು ಹಂತಗಳಲ್ಲಿ ಗ್ಯಾಸ್ ಸಿಲಿಂಡರ್ ವಿತರಣೆ ನಡೆಯಲಿದೆ. ಮೊದಲ ಹಂತದಲ್ಲಿ ಈ ವರ್ಷದ ಅಕ್ಟೋಬರ್ ಮತ್ತು ಡಿಸೆಂಬರ್ ನಡುವೆ ವಿತರಣೆ ನಡೆಯಲಿದೆ. ಎರಡನೇ ಹಂತ 2026ರ ಜನವರಿ ಮತ್ತು ಮಾರ್ಚ್ ನಡುವೆ ಮುಂದುವರಿಯಲಿದೆ ಎಂದು ಸರ್ಕಾರ ಹೇಳಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಮೊದಲ ಹಂತದಲ್ಲಿ ಸುಮಾರು 1.23 ಕೋಟಿ ಆಧಾರ್-ದೃಢೀಕೃತ ಫಲಾನುಭವಿಗಳಿಗೆ ಉಚಿತ ಎಲ್‌ಪಿಜಿ ಸಿಲಿಂಡರ್‌ನ ಪ್ರಯೋಜನ ಸಿಗಲಿದೆ.

ಹಿಂದೂಸ್ತಾನ್ ಪೆಟ್ರೋಲಿಯಂ, ಭಾರತ್ ಪೆಟ್ರೋಲಿಯಂ ಮತ್ತು ಇಂಡಿಯನ್ ಆಯಿಲ್ ಸಹಾಯದಿಂದ ಈ ಕೆಲಸ ನಡೆಯಲಿದೆ. ಈ ಯೋಜನೆಗಾಗಿ ಬರೋಬ್ಬರಿ 346.34 ಕೋಟಿ ರೂ.ಗಳನ್ನು ಮುಂಗಡವಾಗಿ ನೀಡಲಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ. ರಾಜ್ಯದ ಮಹಿಳೆಯರಿಗೆ ಎರಡು ಉಚಿತ ಎಲ್‌ಪಿಜಿ ಸಿಲಿಂಡರ್‌ಗಳನ್ನು ನೀಡುವುದಾಗಿ ಉತ್ತರ ಪ್ರದೇಶ ಸರ್ಕಾರ ಘೋಷಣೆ ಮಾಡಿದೆ.
ಖಾತೆಗಳಿಗೆ ಸಬ್ಸಿಡಿ ಹಣ
ಆಧಾರ್-ಪರಿಶೀಲಿಸಿದ ಫಲಾನುಭವಿಗಳು 14.2 ಕೆಜಿ ತೂಕದ ಸಿಲಿಂಡರ್‌ಗಳನ್ನು ಈಗಿನ ಬೆಲೆಯಲ್ಲಿ ಖರೀದಿಸುತ್ತಾರೆ. ಸಬ್ಸಿಡಿ ಅನುದಾನವನ್ನು ಲಿಂಕ್ ಮಾಡಲಾದ ಅವರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗುತ್ತದೆ. 5 ಕೆ.ಜಿ. ತೂಕದ ಸಿಲಿಂಡರ್‌ಗಳನ್ನು ಹೊಂದಿರುವ ಅಥವಾ ಕೇವಲ ಒಂದು ಸಂಪರ್ಕವನ್ನು ಹೊಂದಿರುವ ಗ್ರಾಹಕರು ಇದರ ಪ್ರಯೋಜನ ಪಡೆಯಲು ಅರ್ಹರು ಎಂದು ಸ್ಪಷ್ಟಪಡಿಸಿದೆ.
ಜಿಲ್ಲಾ ಮತ್ತು ರಾಜ್ಯ ಮಟ್ಟದ ಸಮಿತಿಗಳು ಈ ಎಲ್‌ಪಿಜಿ ವಿತರಣಾ ಯೋಜನೆಯನ್ನು ಪರಿಶೀಲಿಸಬೇಕು ಎಂದು ಸೂಚನೆ ನೀಡಲಾಗಿದೆ. ಗ್ರಾಹಕರ ಕುಂದುಕೊರತೆಗಳನ್ನು ಪರಿಹರಿಸಲು ದೂರು ನಿರ್ವಹಣಾ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ. ಸಮಯಕ್ಕೆ ಸರಿಯಾಗಿ ತಪಾಸಣೆ ಖಚಿತಪಡಿಸಿಕೊಳ್ಳುವುದು ಹಾಗೂ ಗ್ಯಾಸ್ ಸಿಲಿಂಡರ್‌ಗಳು 14.2 ಕೆಜಿ ತೂಕವಿರುವಂತೆ ನೋಡಿಕೊಳ್ಳುವುದು ತೂಕ ಮತ್ತು ಅಳತೆ ಇಲಾಖೆಯ ಪ್ರಮುಖ ಜವಾಬ್ದಾರಿಯಾಗಿದೆ. ಇಂಧನ ಬೆಲೆಗಳು ಹೆಚ್ಚುತ್ತಿರುವಾಗಲೂ ಈ ಉಚಿತ ಎಲ್‌ಪಿಜಿ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಶುದ್ಧ ಇಂಧನಗಳ ಬಳಕೆಯನ್ನು ಉತ್ತೇಜಿಸಲು ಸರ್ಕಾರ ಈ ನಿರ್ಧಾರ ಘೋಷಿಸಿದೆ. ಇದರಿಂದ ಕೋಟ್ಯಂತರ ಮಹಿಳೆಯರು ಮತ್ತು ಹಿಂದುಳಿದ ಕುಟುಂಬಗಳಿಗೆ ದೀಪಾವಳಿಯ ಉಡುಗೊರೆ ಸಿಕ್ಕಂತಾಗಿದೆ.
ಚಿತ್ತೂರಿನಲ್ಲಿ ಎಲ್‌ಪಿಜಿ ಸ್ಥಾವರ
ಪ್ರಧಾನಿ ನರೇಂದ್ರ ಮೋದಿ ಚಿತ್ತೂರಿನಲ್ಲಿ ಇಂಡಿಯನ್ ಆಯಿಲ್‌ನ ಎಲ್‌ಪಿಜಿ ಬಾಟ್ಲಿಂಗ್ ಸ್ಥಾವರವನ್ನು ಉದ್ಘಾಟಿಸಿದರು. ಸುಮಾರು ₹200 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಈ ಸೌಲಭ್ಯವು ವಾರ್ಷಿಕವಾಗಿ 60,000 ಮೆಟ್ರಿಕ್ ಟನ್ ಬಾಟಲಿಂಗ್ ಸಾಮರ್ಥ್ಯ ಹೊಂದಿದೆ. ಇದರಿಂದ ಆಂಧ್ರಪ್ರದೇಶ, ತಮಿಳುನಾಡು ಮತ್ತು ಕರ್ನಾಟಕದ ಎಲ್‌ಪಿಜಿ ವಿತರಕರ ಮೂಲಕ 7.2 ಲಕ್ಷಕ್ಕೂ ಹೆಚ್ಚು ಗ್ರಾಹಕರಿಗೆ ಸೇವೆ ಸಲ್ಲಿಸಲಿದೆ ಎಂದು ಐಒಸಿಎಲ್ ತಿಳಿಸಿದೆ.












Click it and Unblock the Notifications