ಸಂಸದ ಸ್ಥಾನದಿಂದ ರಾಹುಲ್ ಗಾಂಧಿ ಅನರ್ಹ: ಮುಂದಿನ ಆಯ್ಕೆಯೇನು? ವಯನಾಡ್ ನಲ್ಲಿ ಉಪಚುನಾವಣೆ ಸಾಧ್ಯತೆ
ನವದೆಹಲಿ, ಮಾರ್ಚ್ 24: ದೇಶದ ರಾಜಕೀಯದಲ್ಲಿ ಸಂಚಲನ ಮೂಡಿಸುವ ವಿದ್ಯಮಾನವೊಂದರಲ್ಲಿ ಕೇರಳದ ವಯನಾಡ್ ಕ್ಷೇತ್ರವನ್ನು ಪ್ರತಿನಿಧಿಸುವ ರಾಹುಲ್ ಗಾಂಧಿಯವರನ್ನು ಸಂಸದೀಯ ಸ್ಥಾನದಿಂದ ಅನರ್ಹಗೊಳಿಸಿ ಲೋಕಸಭಾ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಈ ನಿರ್ಧಾರದ ವಿರುದ್ದ ಕೆಂಡಾಮಂಡಲವಾಗಿರುವ ಕಾಂಗ್ರೆಸ್ ಪ್ರತಿಭಟನೆಗೆ ಇಳಿದಿದೆ.
ಲೋಕಸಭಾ ಕಾರ್ಯದರ್ಶಿ ಕಚೇರಿಯ ನಿರ್ಧಾರದಿಂದಾಗಿ ವಯನಾಡ್ ಕ್ಷೇತ್ರದಲ್ಲಿ ವಿಶೇಷ ಉಪಚುನಾವಣೆ ನಡೆಸಬಹುದಾಗಿದೆ. ಇದಲ್ಲದೇ, ರಾಜಧಾನಿಯಲ್ಲಿ ಅವರಿಗೆ ನೀಡಲಾಗಿರುವ ಸರಕಾರೀ ಬಂಗ್ಲೆಯನ್ನು ಖಾಲಿ ಮಾಡುವಂತೆಯೂ ಕೇಂದ್ರ ಸರಕಾರ ಅವರಿಗೆ ಸೂಚಿಸುವ ಆಯ್ಕೆಯನ್ನು ಹೊಂದಿದೆ.

ರಾಷ್ಟ್ರಪತಿಯವರು ಕೇಂದ್ರ ಚುನಾವಣಾ ಆಯೋಗದ ಬಳಿ ಚರ್ಚಿಸಿ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳಬಹುದೇ ಹೊರತು, ಲೋಕಸಭೆಯ ಕಾರ್ಯದರ್ಶಿಗಳಿಗೆ ಅನರ್ಹಗೊಳಿಸುವ ಪವರ್ ಇಲ್ಲ ಎನ್ನುವುದು ಕಾಂಗ್ರೆಸ್ಸಿನ ವಾದ. ಹಾಗಾದರೆ, ಇದರಿಂದ ಹೊರ ಬರಲು ರಾಹುಲ್ ಗಾಂಧಿಯವರಿಗೆ ಇರುವ ಮುಂದಿನ ಆಯ್ಕೆಗಳೇನು?
ಹಿರಿಯ ವಕೀಲ, ಮಾಜಿ ಕೇಂದ್ರ ಸಚಿವರೂ ಆಗಿರುವ ಕಪಿಲ್ ಸಿಬಲ್ ಈ ಬಗ್ಗೆ ಪ್ರತಿಕ್ರಿಯಿಸಿ, "ರಾಹುಲ್ ಗಾಂಧಿವರಿಗೆ ಎರಡು ವರ್ಷದ ಶಿಕ್ಷೆ ವಿಧಿಸಲಾಗಿರುವುದರಿಂದ ಸಂಸದ ಸ್ಥಾನದಿಂದ ಅವರು ಅನರ್ಹಗೊಳ್ಳುತ್ತಾರೆ. ನ್ಯಾಯಾಲಯ ಅವರ ಶಿಕ್ಷೆಯನ್ನು ವಜಾಗೊಳಿಸಿದರೆ ಮಾತ್ರ ಸಾಲುವುದಿಲ್ಲ. ಬದಲಿಗೆ, ದೋಷಿ ಎಂದು ನೀಡಿದ ತೀರ್ಪಿಗೆ ತಡೆ ತರಬೇಕಾಗುತ್ತದೆ, ಇಲ್ಲದಿದ್ದರೆ ಮುಂದಿನ ಎಂಟು ವರ್ಷ ಅವರು ಸ್ಪರ್ಧಿಸುವಂತಿಲ್ಲ"ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿಯವರ ಕಾನೂನು ಸಲಹಾ ತಂಡದ ಮಾಹಿತಿಯ ಪ್ರಕಾರ, ಅವರು ಸೂರತ್ ಕೋರ್ಟಿನ ಆದೇಶವನ್ನು ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸುವ ಸಾಧ್ಯತೆಯಿದೆ. ಒಂದು ವೇಳೆ ಅಲ್ಲಿ ಅವರ ಅರ್ಜಿ ಸ್ವೀಕಾರ ಆಗದೇ ಇದ್ದಲ್ಲಿ ಸುಪ್ರೀಂಕೋರ್ಟ್ ಮೊರೆ ಹೋಗಬಹುದು.
ಏನಿದು ಪ್ರಕರಣ: 2019ರ ಲೋಕಸಭೆ ಚುನಾವಣೆ ವೇಳೆ ಕರ್ನಾಟಕದ ಕೋಲಾರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ರಾಹುಲ್ ಗಾಂಧಿ "ಎಲ್ಲಾ ಕಳ್ಳರಿಗೆ ಮೋದಿ ಎಂಬ ಉಪನಾಮ ಹೇಗೆ ಇರುತ್ತದೆ ಎಂಬುದೇ ಆಶ್ಚರ್ಯ" ಎನ್ನುವ ಹೇಳಿಕೆಯನ್ನು ನೀಡಿದ್ದರು. ರಾಹುಲ್ ಗಾಂಧಿಯವರ ಈ ಹೇಳಿಕೆಗೆ ಸಂಬಂಧಿಸಿದಂತೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಾಗಿತ್ತು.
ಪ್ರಕರಣವನ್ನು ವಿಚಾರಣೆ ನಡೆಸಿದ್ದ ನ್ಯಾಯಾಲಯವು 2 ವರ್ಷಗಳ ಶಿಕ್ಷೆಯನ್ನು ಘೋಷಿಸಿದೆ. ಬಳಿಕ ಜಾಮೀನು ನೀಡಿ, ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿ ಶಿಕ್ಷೆಯನ್ನು 30 ದಿನಗಳವರೆಗೆ ಅಮಾನತುಗೊಳಿಸಲಾಯಿತು.












Click it and Unblock the Notifications