Israel War: ಇಸ್ರೇಲ್ ಯುದ್ಧದ ನಡುವೆ ದೆಹಲಿಯಲ್ಲೂ ಅಲರ್ಟ್!
ಇಸ್ರೇಲ್ ಮತ್ತು ಹಮಾಸ್ ನಡುವೆ ಯುದ್ಧ ಭೀಕರ ಸ್ವರೂಪ ಪಡೆಯುತ್ತಿದೆ. ಹೀಗಾಗಿಯೇ ಇಡೀ ಜಗತ್ತು ಅಲರ್ಟ್ ಆಗಿದ್ದು, ಯಾವ ಸಮಯದಲ್ಲಿ ಏನಾಗುತ್ತೋ ಗೊತ್ತಿಲ್ಲ ಎನ್ನುವ ವಾತಾವರಣ ನಿರ್ಮಾಣವಾಗಿದೆ. ಇದರ ಬೆನ್ನಲ್ಲೇ ರಾಷ್ಟ್ರ ರಾಜಧಾನಿ ದೆಹಲಿಯ ಹೃದಯ ಭಾಗದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಎಲ್ಲೆಲ್ಲೂ ಪೊಲೀಸರು & ಭದ್ರತಾ ಸಿಬ್ಬಂದಿ ಹದ್ದಿನ ಕಣ್ಣಿಟ್ಟು ಕಾಯುತ್ತಿದ್ದಾರೆ, ಯಾಕೆ ಗೊತ್ತಾ?
ಜಗತ್ತು ಈಗ ಎರಡು ಭಾಗವಾಗಿ ಛಿದ್ರವಾಗಿ ಹೋಗಿದೆ. ಒಂದು ಕಡೆ ಅಮೆರಿಕ ಬೆಂಬಲಿತ ದೇಶಗಳು ಇಸ್ರೇಲ್ ಪರವಾಗಿ ನಿಂತರೆ, ರಷ್ಯಾ ನೇತೃತ್ವದಲ್ಲಿ ಪ್ಯಾಲೆಸ್ತೀನ್ ಪರವಾಗಿಯೂ ಧ್ವನಿ ಮೊಳಗಿದೆ. ಸ್ಥಿತಿ ಹೀಗಿದ್ದಾಗ ಜಗತ್ತಿನ ವಿವಿಧ ಪ್ರದೇಶಗಳಲ್ಲಿ ದಿಢೀರ್ ಹಿಂಸಾಚಾರ ಭುಗಿಲೇಳುವ ವಾತಾವರಣ ಸೃಷ್ಟಿಯಾಗಿದೆ. ಹೀಗಾಗಿ, ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಖಾಕಿ ಪಡೆ ಅಲರ್ಟ್ ಆಗಿದೆ. ಹಾಗಾದ್ರೆ ದೆಹಲಿಯಲ್ಲಿ ಭದ್ರತೆಯನ್ನ ದಿಢೀರ್ ಇಷ್ಟೊಂದು ಹೆಚ್ಚಿಸಿದ್ದರ ಹಿಂದಿನ ಕಾರಣ ಏನು?

ಪ್ರತಿಭಟನೆ, ಹಿಂಸೆಗೆ ಬ್ರೇಕ್ ಹಾಕಲು ರಣತಂತ್ರ!
ಹೌದು, ಪ್ಯಾಲೆಸ್ತೀನ್ ಪರವಾಗಿ ದೆಹಲಿಯಲ್ಲಿ ಹೋರಾಟ ಮತ್ತು ಪ್ರತಿಭಟನೆ ನಡೆಯುವ ಸಾಧ್ಯತೆ ದಟ್ಟವಾಗಿದೆ. ಅಲ್ಲದೆ ಇಸ್ರೇಲ್ ಪರವಾಗಿಯೂ ಹೋರಾಟಗಳು ಭುಗಿಲೇಳುವಂತೆ ವಾತಾವರಣ ಸೃಷ್ಟಿಯಾಗಿದೆ. ಈಗಾಗಲೇ ಜಗತ್ತಿನ ಹಲವು ಪ್ರಮುಖ ನಗರಗಳಲ್ಲಿ ಇಂತಹ ಘಟನೆಗಳು ನಡೆದಿವೆ. ಹೀಗಾಗಿ ದೆಹಲಿ ಪೊಲೀಸ್ ಪಡೆ ಅಲರ್ಟ್ ಆಗಿದ್ದು, ದೆಹಲಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಹಾಗೇ ಇಸ್ರೇಲ್ ರಾಯಭಾರ ಕಚೇರಿಗೆ ನೀಡಿರುವ ಭದ್ರತೆ ಕೂಡ ಡಬಲ್ ಆಗಿದೆ. ಈ ಮೂಲಕ ಇಸ್ರೇಲ್ ಅಧಿಕಾರಿಗಳಿಗೆ ಸಮಸ್ಯೆ ಆಗದಂತೆ ದೆಹಲಿ ಖಾಕಿ ಪಡೆ ಮುನ್ನೆಚ್ಚರಿಕೆ ವಹಿಸಿದೆ.
ಅಮೆರಿಕ, ಫ್ರಾನ್ಸ್‌ನಲ್ಲೂ ಭದ್ರತೆ ಹೆಚ್ಚಳ
ಭಾರತ ಮಾತ್ರವಲ್ಲ, ಈಗಾಗಲೇ ಹಲವು ದೇಶಗಳಲ್ಲಿ ಇಸ್ರೇಲ್ ಮತ್ತು ಹಮಾಸ್ ಯುದ್ಧದ ಪರಿಣಾಮ ಭದ್ರತೆ ಹೆಚ್ಚಿಸಲಾಗಿದೆ. ಏಕೆಂದರೆ ಈಗಾಗಲೇ ಇಸ್ರೇಲ್ ಪರ ಹೋರಾಟಗಾರರು ಫ್ರಾನ್ಸ್‌ನಲ್ಲಿ ಬಡಿದಾಡಿದ್ದಾರೆ. ಹೋರಾಟದ ವೇಳೆ ಹಿಂಸೆ ಭುಗಿಲೆದ್ದು, ಫ್ರಾನ್ಸ್ ನಲುಗಿದೆ. ಇದೇ ಬೆನ್ನಲ್ಲಿ, ಅಮೆರಿಕ, ಬ್ರಿಟನ್, ಫ್ರಾನ್ಸ್ ಸೇರಿದಂತೆ ಜರ್ಮನಿಯಲ್ಲೂ ಹದ್ದಿನ ಕಣ್ಣು ಇಟ್ಟಿದೆ ಭದ್ರತಾ ಪಡೆ. ಇದೀಗ ಭಾರತದ ರಾಜಧಾನಿ ದೆಹಲಿಯಲ್ಲೂ ಕಠಿಣ ಕ್ರಮವನ್ನು ಕೈಗೊಳ್ಳಲಾಗಿದೆ.

ಚೀನಾದಲ್ಲಿ ಇಸ್ರೇಲ್ ಅಧಿಕಾರಿಗಳ ಮೇಲೆ ದಾಳಿ?
ಇಸ್ರೇಲ್ ನೆಲದ ಮೇಲೆ ಹಮಾಸ್ ದಾಳಿ ಮಾಡಿದೆ ಅಂತಾ, ರೊಚ್ಚಿಗೆದ್ದಿದ್ದ ಇಸ್ರೇಲ್ ಸೇನೆ ಮನಸ್ಸಿಗೆ ಬಂದಂತೆ ಮರು ದಾಳಿ ಮಾಡುತ್ತಿದೆ. ಗಾಜಾಪಟ್ಟಿ ಮತ್ತು ಹಮಾಸ್ ನೆಲೆ ನಾಶ ಮಾಡಿದೆ. ಆದರೆ ಈ ಸಮಯದಲ್ಲಿ ಚೀನಾ ರಾಜಧಾನಿ ಬೀಜಿಂಗ್‌ನ ಇಸ್ರೇಲ್ ರಾಯಭಾರ ಕಚೇರಿಯಲ್ಲಿ ಕೆಲಸ ಮಾಡುವ ಅಧಿಕಾರಿ ಮೇಲೆ ಇಂದು ಹಲ್ಲೆ ನಡೆದಿದೆ ಎಂದು ಆರೋಪ ಕೇಳಿಬಂದಿದೆ.
ತಮ್ಮ ದೇಶದ ಅಧಿಕಾರಿಗಳ ಮೇಲೆ ಹಲ್ಲೆ ನಡೆದಿರುವ ಕುರಿತು ಸ್ವತಃ ಇಸ್ರೇಲ್ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ. ಬೀಜಿಂಗ್‌ನಲ್ಲಿ ಇರುವ ಇಸ್ರೇಲ್ ರಾಯಭಾರ ಕಚೇರಿಯ ಅಧಿಕಾರಿಗಳ ಮೇಲೆ ದಾಳಿ ನಡೆದಿದೆ ಎಂದು ಆರೋಪ ಮಾಡಲಾಗಿದೆ. ಹಲ್ಲೆಯ ನಂತರ ರಾಯಭಾರ ಕಚೇರಿ ಅಧಿಕಾರಿ ಒಬ್ಬರು ಗಾಯಗೊಂಡು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಪರಿಸ್ಥಿತಿ ಈಗ ಸ್ಥಿರವಾಗಿದ್ದು, ಹಲವು ದೇಶಗಳಲ್ಲಿ ಇಸ್ರೇಲ್ ಅಧಿಕಾರಿಗಳಿಗೆ ನೀಡಿದ ಭದ್ರತೆ ಹೆಚ್ಚಿಸಲಾಗಿದೆ. ಹಾಗೇ ಭಾರತದಲ್ಲೂ ಮುನ್ನೆಚ್ಚರಿಕೆ ವಹಿಸಲಾಗಿದೆ.
ಯುದ್ಧದ ಹಿಂಸಾಚಾರಕ್ಕೆ 7 ದಿನ
ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ಈಗ 7ನೇ ದಿನಕ್ಕೆ ಕಾಲಿಟ್ಟಿದೆ. ಸಾವಿರಾರು ಜನ ಎರಡೂ ಕಡೆ ಮೃತಪಟ್ಟಿದ್ದು ಗಾಜಾಪಟ್ಟಿಯು ಸಂಪೂರ್ಣ ನಾಶ ಆಗೋಗಿದೆ. ಹೀಗೆ ತನ್ನ ಶತ್ರು ನಾಶಕ್ಕೆ ಇಸ್ರೇಲ್ ತೊಡೆತಟ್ಟಿ ನಿಂತಿದ್ದರೆ, ಗಾಜಾಪಟ್ಟಿ ಮೇಲಿನ ಭೀಕರ ದಾಳಿ ಬಗ್ಗೆ ಜಗತ್ತೇ ಆಕ್ರೋಶ ವ್ಯಕ್ತಪಡಿಸುತ್ತಿದೆ. ಆದರೆ ಯುದ್ಧ ನಿಲ್ಲಿಸುವ ಪ್ರಯತ್ನಗಳು ಮಾತ್ರ ನಡೆಯುತ್ತಿಲ್ಲ. ಹೀಗಾಗಿ ಉಕ್ರೇನ್ ಹಾಗೂ ರಷ್ಯಾ ಮಧ್ಯೆ ಹಿಂಸಾಚಾರ ನಡೆಯುವ ವೇಳೆ ಮತ್ತೊಂದು ಕಿರಿಕ್ ಜೋರಾಗಿದೆ. ಇದು ಈ ಪ್ರಪಂಚವನ್ನ 3ನೇ ಮಹಾಯುದ್ಧ ಕೂಪಕ್ಕೆ ತಳ್ಳುತ್ತಿದೆ. ಇದನ್ನು ಹೀಗೆ ಬಿಟ್ಟರೆ ಜಗತ್ತು ಭಸ್ಮವಾಗುವುದು ಪಕ್ಕಾ.












Click it and Unblock the Notifications