Caste Census: ಜಾತಿ ಗಣತಿ ಮೂಲಕ ಸಮಾಜ ವಿಭಜಿಸುವ...
ಬಿಹಾರದಲ್ಲಿ ಇಂದು ಬಿಡುಗಡೆ ಆಗಿರುವ ಜಾತಿ ಗಣತಿ ದೇಶದ ರಾಜಕೀಯದಲ್ಲಿ ಬಿರುಗಾಳಿಯ ಅಲೆಯನ್ನೇ ಎಬ್ಬಿಸಿದೆ. ಒಂದು ಕಡೆ ವಿರೋಧ ಪಕ್ಷಗಳು ಎನ್‌ಡಿಎ ವಿರುದ್ಧ ಈ ವಿಚಾರ ಹಿಡಿದು ವಾಗ್ದಾಳಿ ನಡೆಸುತ್ತಿದ್ದರೆ, ಪ್ರಧಾನಿ ಮೋದಿ ಮಾತ್ರ ಜಾತಿ ಗಣತಿ ವರದಿ ಬಿಡುಗಡೆ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. ಹಾಗಾದರೆ ಜಾತಿ ಗಣತಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದೇನು? ಜಾತಿ ಗಣತಿ ವಿಚಾರದಲ್ಲಿ ಪ್ರಧಾನಿ ಅಭಿಪ್ರಾಯವೇನು?
ಹೌದು, ಬಿಹಾರದಲ್ಲಿ ಎದ್ದಿರುವ ಜಾತಿ ಗಣತಿ ಸಂಚಲನ ಲೋಕಸಭೆ ಚುನಾವಣೆಯಲ್ಲೂ ಅಬ್ಬರಿಸುವ ಸೂಚನೆ ನೀಡುತ್ತಿದೆ. ಹೀಗಾಗಿ ಎನ್‌ಡಿಎ ಒಕ್ಕೂಟ & ಇಂಡಿಯಾ ಒಕ್ಕೂಟದ ನಾಯಕರು ಪರಸ್ಪರ ಮಾತಿನ ಫೈಟ್ ಶುರು ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಕೂಡ ಖುದ್ದು ಜಾತಿ ಗಣತಿ ಬಗ್ಗೆ ಮಾತನಾಡಿದ್ದಾರೆ. ವಿರೋಧ ಪಕ್ಷಗಳು 6 ದಶಕದಿಂದ ಬಡವರ ಭಾವನೆ ಜತೆ ಆಟವಾಡಿವೆ. ದೇಶವನ್ನು ಜಾತಿಯ ಆಧಾರದಲ್ಲಿಯೇ ವಿಭಜಿಸಿವೆ. ಈಗ ಮಾಡುತ್ತಿರುವುದು ಕೂಡ ಪಾಪವೇ ಆಗಿದೆ ಎಂದಿದ್ದಾರೆ ಪ್ರಧಾನಿ ಮೋದಿ. ಹೀಗೆ ಬಿಹಾರ ಜಾತಿ ಗಣತಿ ಬಗ್ಗೆ ನೇರವಾಗಿ ಮಾತನಾಡದೆ ಕುಟುಕಿದ್ದಾರೆ ಪ್ರಧಾನಿ.

ಮಧ್ಯಪ್ರದೇಶಕ್ಕೆ ಕೇಂದ್ರ ಸರ್ಕಾರದ ಬಂಪರ್
ಅಂದಹಾಗೆ ಇನ್ನೇನು ವಿಧಾನಸಭೆ ಚುನಾವಣೆ ನಡೆಯಲಿರುವ ಮಧ್ಯಪ್ರದೇಶ ರಾಜ್ಯದಲ್ಲಿ ಬಿಜೆಪಿ ನಾಯಕರು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಈ ವೇಳೆ ಪ್ರಧಾನಿ ಮೋದಿಯವರು ಕೂಡ ಬಿಜೆಪಿ ನಾಯಕರಿಗೆ ಬಲ ತುಂಬಿದ್ದಾರೆ. ಇಂದು ಗ್ವಾಲಿಯರ್‌ನಲ್ಲಿ ₹19,000 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿದ ಬಳಿಕ ನಡೆದ ಸಮಾರಂಭದಲ್ಲಿ ಪ್ರಧಾನಿ ಮಾತನಾಡಿದ್ರು. ಈ ವೇಳೆ ವಿಪಕ್ಷಗಳ ನಾಯಕರ ವಿರುದ್ಧ ಪ್ರಧಾನಿ ಮೋದಿ ತೀವ್ರ ವಾಗ್ದಾಳಿ ನಡೆಸಿದರು.
ಅಭಿವೃದ್ಧಿ ಬಗ್ಗೆ ಪ್ರಧಾನಿ ಪ್ರಸ್ತಾಪ!
ಹಾಗೇ ಮತ್ತೊಂದು ಕಡೆ ₹19,000 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದ ಅಭಿವೃದ್ಧಿಯ ಯೋಜನೆಗೆ ಚಾಲನೆ ನೀಡಿ ಪ್ರಧಾನಿ, ಬಿಜೆಪಿ ಸಾಧನೆ ಕುರಿತು ಮಾತನಾಡಿದರು. 'ಒಂದೇ ದಿನ ₹19,000 ಕೋಟಿಗೂ ಹೆಚ್ಚಿನ ಯೋಜನೆಗಳು ಜಾರಿಯಾಗುತ್ತಿರುವುದು ಡಬಲ್ ಎಂಜಿನ್ ಸರ್ಕಾರದ ಫಲಿತಾಂಶ. ಡಬಲ್ ಎಂಜಿನ್ ಸರ್ಕಾರಕ್ಕಾಗಿ ಜನರ ಒಂದು ಮತವು ಮಧ್ಯಪ್ರದೇಶ & ದೇಶದ ಅಭಿವೃದ್ಧಿಗೆ ಬಲ ನೀಡುತ್ತದೆ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಮಧ್ಯಪ್ರದೇಶಕ್ಕೆ ಒಳ್ಳೆಯದನ್ನು ಮಾಡಲಿಲ್ಲ. ಅವರಿಗೆ ಅಭಿವೃದ್ಧಿಯ ದೃಷ್ಟಿಕೋನ ಮತ್ತು ಮಾರ್ಗಸೂಚಿಯೇ ಇಲ್ಲ' ಎಂದರು.

ಹಾಗೇ ಈ ವೇಳೆ ವಿಪಕ್ಷಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಗಂಭೀರ ಆರೋಪವನ್ನು ಮಾಡಿದ್ದಾರೆ. ಮತ್ತೊಂದು ಕಡೆ ಜಾಗತಿಕ ಆರ್ಥಿಕ ಪಟ್ಟಿಯಲ್ಲಿ ಭಾರತ ಈಗ 5ನೇ ಸ್ಥಾನಕ್ಕೆ ಏರಿದೆ. ಮುಂದಿನ ಅವಧಿಯಲ್ಲಿ ಅದನ್ನು 3ನೇ ಸ್ಥಾನಕ್ಕೆ ಕೊಂಡೊಯ್ಯವುದೇ ನಮ್ಮ ಗುರಿ ಎಂದಿದ್ದಾರೆ ಪ್ರಧಾನಿ. ಈ ಮೂಲಕ ಮಧ್ಯಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಜಾತಿ ಗಣತಿ ವಿಚಾರ ಪರೋಕ್ಷವಾಗಿ ಎಂಟ್ರಿ ಕೊಟ್ಟಂತಾಗಿದೆ. ಹಾಗೇ ಬಿಜೆಪಿ & ಕಾಂಗ್ರೆಸ್ ಪಕ್ಷದ ನಾಯಕರ ಮಧ್ಯೆ ಈ ವಿಚಾರ ದೊಡ್ಡ ತಿಕ್ಕಾಟಕ್ಕೂ ಕಾರಣವಾಗುವ ಸೂಚನೆ ನೀಡಿದೆ.
ಕೇಂದ್ರ ಸರ್ಕಾರಕ್ಕೆ ರಾಹುಲ್ ಸವಾಲು!
ಬಿಹಾರ ಸರ್ಕಾರ ಜಾತಿ ಗಣತಿ ಬಿಡುಗಡೆ ಮಾಡುತ್ತಿದ್ದಂತೆ ರಾಹುಲ್ ಗಾಂಧಿ ಕೇಂದ್ರಕ್ಕೆ ಸವಾಲು ಎಸೆದಿದ್ದಾರೆ. 'ಬಿಹಾರದ ಜಾತಿ ಗಣತಿ ಮೂಲಕ ಆ ರಾಜ್ಯದಲ್ಲಿ OBC + SC + ST ಅಲ್ಲಿ 84% ಎಂಬ ಸತ್ಯವು ಗೊತ್ತಾಗಿದೆ. ಕೇಂದ್ರ ಸರ್ಕಾರದ 90 ಕಾರ್ಯದರ್ಶಿಗಳ ಪೈಕಿ ಕೇವಲ 3 ಮಂದಿ ಮಾತ್ರ ಒಬಿಸಿ ಸಮುದಾಯದವರು, ಅವರು ಭಾರತ ಬಜೆಟ್‌ನ ಶೇಕಡಾ 5ರಷ್ಟನ್ನು ಮಾತ್ರ ನಿಭಾಯಿಸುತ್ತಾರೆ! ಹೀಗೆ ಭಾರತದ ಜಾತಿ ಅಂಕಿ-ಅಂಶ ತಿಳಿದುಕೊಳ್ಳುವುದು ಮುಖ್ಯವಾಗಿದೆ. ಹೆಚ್ಚಿನ ಜನಸಂಖ್ಯೆ, ಹೆಚ್ಚಿನ ಹಕ್ಕು- ಇದು ನಮ್ಮ ಪ್ರತಿಜ್ಞೆ' ಎಂದು ಟ್ವೀಟ್ ಮಾಡಿದ್ದರು. ಮತ್ತೊಂದು ಕಡೆ ಪ್ರಧಾನಿ ಮೋದಿ ಕೂಡ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.












Click it and Unblock the Notifications