ಡಿಜಿಟಲ್ ಇಂಡಿಯಾ ಬಿಲ್ ದೇಶದಲ್ಲಿ 11 ವಿಷಯಗಳನ್ನು ನಿಷೇಧಿಸಲಿದೆ: ಸಚಿವ ರಾಜೀವ್ ಚಂದ್ರಶೇಖರ್
ನವದೆಹಲಿ, ಜೂನ್. 09: ಭಾರತದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನದ ರಾಜ್ಯ ಸಚಿವ (MEITY) ರಾಜೀವ್ ಚಂದ್ರಶೇಖರ್ ದೇಶದಲ್ಲಿ ಮಾಹಿತ ಮತ್ತು ತಂತ್ರಜ್ಞಾನದ ಹೊಸ ಯೋಜನೆಗಳನ್ನು ಘೋಷಿಸಿದ್ದಾರೆ. ಇದು ಇಂಟರ್ನೆಟ್ ಅನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುವ ಮತ್ತು ದೇಶದಲ್ಲಿ ಹೊಸ ಸೈಬರ್ ಅಪರಾಧಗಳನ್ನು ತಡೆಯುವ ಗುರಿಯನ್ನು ಹೊಂದಿದೆ.
ಡಿಜಿಟಲ್ ಇಂಡಿಯಾ ಮಸೂದೆಯ ಕುರಿತು ಈ ತಿಂಗಳು ಚರ್ಚೆಗಳು ಪ್ರಾರಂಭವಾಗಲಿದ್ದು, ಹೊಸ ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ಮಸೂದೆಯನ್ನು ಶೀಘ್ರದಲ್ಲೇ ಸಂಸತ್ತಿನಲ್ಲಿ ಮಂಡಿಸಲಾಗುವುದು ಎಂದು ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ ಎಂದು ಎನ್‌ಡಿಟಿವಿಗೆ ಉಲ್ಲೇಖಿಸಿದೆ. ಡಿಜಿಟಲ್ ಇಂಡಿಯಾ ಮಸೂದೆಯು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವಿಷಯ, ಧಾರ್ಮಿಕ ಪ್ರಚೋದನೆಯ ವಿಷಯ, ಪೇಟೆಂಟ್ ಉಲ್ಲಂಘನೆಯ ವಸ್ತು ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿನ ತಪ್ಪು ಮಾಹಿತಿ ಸೇರಿದಂತೆ ವಿವಿಧ ಆನ್‌ಲೈನ್ ಸುರಕ್ಷತಾ ಸಮಸ್ಯೆಗಳನ್ನು ಪರಿಹರಿಸುವ ನಿರೀಕ್ಷೆಯಿದೆ.

"ಸಾಮಾಜಿಕ ಮಾಧ್ಯಮದಲ್ಲಿ ನಾವು ಬಯಸದ 11 ವಿಷಯಗಳಿವೆ. ಮಕ್ಕಳ ಲೈಂಗಿಕ ನಿಂದನೆ ವಿಷಯ, ಧಾರ್ಮಿಕ ಪ್ರಚೋದನೆ ವಸ್ತುಗಳು, ಪೇಟೆಂಟ್ ಉಲ್ಲಂಘನೆಯ ವಸ್ತು, ತಪ್ಪು ಮಾಹಿತಿ ಮತ್ತು ಅಂತಹ ವಿಷಯಗಳು ಇದರಲ್ಲಿ ಸೇರಿವೆ" ಎಂದು ಹೇಳಿದ್ದಾರೆ.
11 ವಿಷಯಗಳ ಸಂಪೂರ್ಣ ಪಟ್ಟಿಯು ಪೋರ್ನ್, ಮಕ್ಕಳಿಗೆ ಹಾನಿಕಾರಕ ವಿಷಯ, ಹಕ್ಕುಸ್ವಾಮ್ಯ ಉಲ್ಲಂಘನೆ, ತಪ್ಪುದಾರಿಗೆಳೆಯುವ ವಿಷಯ, ಸೋಗು ಹಾಕುವಿಕೆ, ಭಾರತದ ಏಕತೆ ಮತ್ತು ಸಮಗ್ರತೆಗೆ ವಿರುದ್ಧವಾದ ವಿಷಯ, ಕಂಪ್ಯೂಟರ್ ಮಾಲ್‌ವೇರ್, ನಿಷೇಧಿತ ಆನ್‌ಲೈನ್ ಗೇಮ್‌ಗಳು ಮತ್ತು ಕಾನೂನುಬಾಹಿರವಾದ ವಿಷಯಗಳನ್ನು ಒಳಗೊಂಡಿದೆ.
ಈ ರೀತಿಯ ವಿಷಯವನ್ನು ಪ್ರಸ್ತುತ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳು, 2021 ರ ಕೊನೆಯ ಅಪ್‌ಡೇಟ್‌ನಲ್ಲಿ ಪಟ್ಟಿಮಾಡಲಾಗಿದೆ. ಆದರೆ ಡಿಜಿಟಲ್ ಇಂಡಿಯಾ ಮಸೂದೆಯು ಅಂತಹ ವಿಷಯವನ್ನು ಪ್ರಸಾರ ಮಾಡುವ ಪ್ಲಾಟ್‌ಫಾರ್ಮ್‌ಗಳನ್ನು ಹೊಣೆಗಾರರನ್ನಾಗಿ ಮಾಡಲು ಸರ್ಕಾರಕ್ಕೆ ಕಾನೂನುಬದ್ಧ ಶಕ್ತಿ ನೀಡುತ್ತದೆ ಎಂದಿದ್ದಾರೆ.
"2014 ರಲ್ಲಿ ದೇಶವು ವಿಶ್ವದಲ್ಲಿ ಹೆಚ್ಚು ಡಿಜಿಟಲ್ ಸಂಪರ್ಕವಿಲ್ಲದ ದೇಶವಾಗಿತ್ತು. ಇಂದು, ದೇಶದಲ್ಲಿ 85 ಕೋಟಿ ಜನರು ಇಂಟರ್ನೆಟ್‌ಗೆ ಸಂಪರ್ಕ ಹೊಂದಿದ್ದಾರೆ. ಇಂದು ನಾವು ವಿಶ್ವದ ಅತಿದೊಡ್ಡ ಸಂಪರ್ಕಿತ ದೇಶವಾಗಿ ಮಾರ್ಪಟ್ಟಿದ್ದೇವೆ. 2025 ರ ವೇಳೆಗೆ ಈ ಸಂಖ್ಯೆ 120 ಕೋಟಿಗೆ ಬೆಳೆಯುತ್ತದೆ" ಎಂದು ರಾಜೀವ್ ಚಂದ್ರಶೇಖರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಸಮಸ್ಯೆಗಳಿಗೆ ಹಿಂದಿನ ಯುಪಿಎ ಸರ್ಕಾರವನ್ನು ದೂಷಿಸಿದ ರಾಜೀವ್ ಚಂದ್ರಶೇಖರ್, "2008 ರಲ್ಲಿ ಐಟಿ ಕಾಯ್ದೆಗೆ ಮಾಡಿದ ತಿದ್ದುಪಡಿಗಳಿಂದ ತಂತ್ರಜ್ಞಾನ ಮತ್ತು ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ವಿನಾಯಿತಿ ನೀಡಲಾಗಿದೆ. ಪ್ರಸ್ತಾವಿತ ಡಿಜಿಟಲ್ ಇಂಡಿಯಾ ಮಸೂದೆಯು ಅಂತರ್ಜಾಲವನ್ನು ಮುಕ್ತ ಮತ್ತು ಸುರಕ್ಷಿತಗೊಳಿಸಲು ಮತ್ತು ಡಿಜಿಟಲ್ ನಾಗರಿಕರನ್ನು ರಕ್ಷಿಸುವ ಸರ್ಕಾರದ ಯೋಜನೆಗಳ ಒಂದು ಭಾಗವಾಗಿದೆ" ಎಂದು ಸರ್ಕಾರ ಹೇಳಿದೆ.
"ಇಂದು ಭಾರತವು ವಿಶ್ವದ ಅತಿದೊಡ್ಡ ಇಂಟರ್‌ನೆಟ್ ಸಂಪರ್ಕಿತ ದೇಶವಾಗಿದೆ. ನಾವು ಭಾರತವನ್ನು ಸುರಕ್ಷಿತ ಮತ್ತು ಅತ್ಯಂತ ವಿಶ್ವಾಸಾರ್ಹ ದೇಶವನ್ನಾಗಿ ಮಾಡಲು ಬಯಸುತ್ತೇವೆ. ಡಿಜಿಟಲ್ ನಾಗರಿಕರಿಗೆ ತನ್ನ ಪ್ಲಾಟ್‌ಫಾರ್ಮ್ ಅನ್ನು ಸುರಕ್ಷಿತವಾಗಿ ಮತ್ತು ವಿಶ್ವಾಸಾರ್ಹವಾಗಿಡುವುದು ಆನ್‌ಲೈನ್ ಪ್ಲಾಟ್‌ಫಾರ್ಮ್‌ನ ಜವಾಬ್ದಾರಿಯಾಗಿದೆ. ಇದನ್ನು ಜಾರಿಗೊಳಿಸಲು, ಡಿಜಿಟಲ್ ಇಂಡಿಯಾ ಬಿಲ್‌ನಲ್ಲಿ ಒಂದು ನಿಬಂಧನೆಯನ್ನು ಸೇರಿಸಲಾಗುತ್ತದೆ. ಈ ಪ್ಲಾಟ್‌ಫಾರ್ಮ್‌ಗಳು ತಮ್ಮ ಬಳಕೆದಾರರ ಸುರಕ್ಷತೆ ಮತ್ತು ನಂಬಿಕೆಯನ್ನು ಎತ್ತಿಹಿಡಿಯುವ ಜವಾಬ್ದಾರಿಯನ್ನು ನೀಡಲಾಗುತ್ತದೆ" ಎಂದು ಮಾಹಿತಿ ನೀಡಿದ್ದಾರೆ.
(ಮಾಹಿತಿ ಕೃಪೆ: ಎನ್‌ಡಿಟಿವಿ)












Click it and Unblock the Notifications