Haryana: ಹರಿಯಾಣದಲ್ಲಿ ಕಾಂಗ್ರೆಸ್‌ಗೆ ಶಕ್ತಿ ತುಂಬಿದ ಬಿಜೆಪಿಯ ವೈಫಲ್ಯಗಳಿವು..
ಹರಿಯಾಣದಲ್ಲಿ ನಿನ್ನೆ ವಿಧಾನಸಭೆ ಚುನಾವಣೆ ಮುಕ್ತಾಯಗೊಂಡಿದ್ದು, ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶಗಳೆಲ್ಲ ಕಾಂಗ್ರೆಸ್ ಪಕ್ಷದ ಕಡೆಗೆ ಬೊಟ್ಟು ಮಾಡಿ ತೋರಿಸಿವೆ. ಹತ್ತು ವರ್ಷಗಳ ಕಾಲ ಬಿಜೆಪಿ ಹಿಡಿತದಲ್ಲಿದ್ದ ಹರಿಯಾಣದಲ್ಲಿ ಕಾಂಗ್ರೆಸ್ ಸದ್ದು ಕೇಳಿಬರುತ್ತಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
ಸಿವೋಟರ್ ಎಕ್ಸಿಟ್ ಪೋಲ್ ಪ್ರಕಾರ, ಕಾಂಗ್ರೆಸ್ ಪಕ್ಷವು ಒಂದು ದಶಕದ ನಂತರ ಹರಿಯಾಣದಲ್ಲಿ ಕಹಳೆ ಮೊಳಗಿಸಲು ಸಜ್ಜಾಗಿದೆ. ಜೊತೆಗೆ ಬಿಜೆಪಿಯ ಹ್ಯಾಟ್ರಿಕ್ ಸಾಧನೆಗೂ ಅಡ್ಡಗಾಲು ಹಾಕಿಕೊಂಡಿದೆ ಎನ್ನಲಾಗಿದೆ. 90 ಸದಸ್ಯ ಬಲದ ಹರಿಯಾಣ ವಿಧಾನಸಭೆಯಲ್ಲಿ ಪ್ರಸ್ತುತ ಸಮೀಕ್ಷೆಯಂತೆ ಕಾಂಗ್ರೆಸ್ 50ರಿಂದ 58 ಸ್ಥಾನಗಳನ್ನು ಗೆಲ್ಲಲಿದೆ ಎಂದು ಅಂದಾಜಿಸಲಾಗಿದೆ, ಆದರೆ ಬಿಜೆಪಿ 20-28 ಸ್ಥಾನಗಳಿಗೆ ಕುಸಿಯಲಿದೆ ಎಂದು ಹೇಳಲಾಗುತ್ತಿದೆ.

ಹರಿಯಾಣದಲ್ಲಿ ಬಿಜೆಪಿಯ ಜನಪ್ರಿಯತೆ ನೆಲಕಚ್ಚಲು ತನ್ನ ಎರಡು ಅವಧಿಯ ಅಧಿಕಾರದಲ್ಲಿ ಇಟ್ಟಿರುವ ಹಲವು ತಪ್ಪು ಹೆಜ್ಜೆಗಳೇ ಇಂದು ಕಾಂಗ್ರೆಸ್‌ಗೆ ಗೆಲುವಿನ ದಾರಿ ತೋರಿದೆ ಎನ್ನಲಾಗಿದೆ. ಪಕ್ಷವು ಹಿನ್ನಡೆಗೆ ಕಾರಣವಾದ ಅಂಶಗಳನ್ನು ಹೇಳುವುದಾದರೆ..
ಹರಿಯಾಣದ ಬಿಜೆಪಿ ಸರ್ಕಾರವು ಹಲವಾರು ಬಗೆಹರಿಯದ ಸಮಸ್ಯೆಗಳಿಂದ ತೀವ್ರ ಆಡಳಿತ ವಿರೋಧವನ್ನು ಎದುರಿಸಿತು. ಇದರ ಫಲವಾಗಿ ಪಕ್ಷವು ಮಾರ್ಚ್ 2024ರಲ್ಲಿ ಅಂದಿನ ಸಿಎಂ ಆಗಿದ್ದ ಮನೋಹರ್ ಲಾಲ್ ಖಟ್ಟರ್ ಅವರನ್ನು ಕುರ್ಚಿಯಿಂದ ಕೆಳಗಿಳಿಸಿತು. ಆದರೂ ಬಿಜೆಪಿಯು ಹಲವು ಹಂತಗಳಲ್ಲಿ ವಿಫಲವಾಗಿತ್ತು ಎನ್ನಲಾಗಿದೆ.

ಹರಿಯಾಣದಲ್ಲಿ ನಿರುದ್ಯೋಗ ಸಮಸ್ಯೆ ಕೂಡ ಬಿಜೆಪಿ ಸರ್ಕಾರದ ದೊಡ್ಡ ವೈಫಲ್ಯ ಎನ್ನಲಾಗಿದೆ. ತನ್ನ ಅಧಿಕಾರಾವಧಿಯಲ್ಲಿ ಹರಿಯಾಣದ ನಿರುದ್ಯೋಗ ದರವು 2021-22ರಲ್ಲಿ ಶೇ 9ರಷ್ಟು ಮಾತ್ರ ಇತ್ತು. ಬಿಜೆಪಿ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ 2 ಲಕ್ಷ ಉದ್ಯೋಗಗಳನ್ನು ನೀಡುವ ಭರವಸೆ ನೀಡಿದ್ದರೂ ಹುದ್ದೆಗಳನ್ನು ಭರ್ತಿ ಮಾಡಲು ವಿಫಲವಾಯಿತು.
ಅಲ್ಲಿನ ಲೋಕಸೇವಾ ಆಯೋಗದ ಕಚೇರಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ರದ್ದು ಮಾಡಿದ ಹಗರಣವು ಬಿಜೆಪಿಯ ವಿಶ್ವಾಸಾರ್ಹತೆಯನ್ನು ಇನ್ನಷ್ಟು ಕುಗ್ಗಿಸಿತು. ಇದನ್ನೇ ಅಸ್ತ್ರವಾಗಿ ಬಳಸಿಕೊಂಡ ಕಾಂಗ್ರೆಸ್ ನಿರುದ್ಯೋಗ ಸಮಸ್ಯೆ ನಿವಾರಿಸಿ, ಲಕ್ಷಗಟ್ಟಲೆ ಸರ್ಕಾರಿ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಘೋಷಿಸಿತು.

ಬಿಜೆಪಿಯು ಹರಿಯಾಣದಲ್ಲಿ ಕೇವಲ ನಗರ ಕೇಂದ್ರಿತ ಪಕ್ಷವಾಗಿತ್ತು ಎನ್ನಲಾಗಿದೆ. ಆದರೆ, ಈ ಬಾರಿ ನಗರವಾಸಿಗಳನ್ನು ನಿರ್ಲಕ್ಷಿಸಿದ್ದರಿಂದ ಇದು ಕೂಡ ಹಿನ್ನಡೆಗೆ ಕಾರಣ ಎನ್ನಲಾಗಿದೆ. ಹಾಗಾಗಿ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ನಗರವಾಸಿಗಳು ಮತದಾನ ಮಾಡದಿರಲು ನಿರ್ಧರಿಸಿದ್ದರು ಎಂದು ಅಂಕಿಅಂಶಗಳು ಹೇಳಿವೆ.
ಬಿಜೆಪಿ ಸರ್ಕಾರ ಜಾರಿಗೆ ತಂದ ಹಲವು ಕಾರ್ಯಕ್ರಮಗಳು ಕೇವಲ ಕಾಗದದಲ್ಲಿ ಮಾತ್ರವೇ ಉಳಿದಿತ್ತು, ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ ಎನ್ನುವ ಆರೋಪವಿದೆ. ಇದೇ ವರ್ಷ ಅಲ್ಲಿದ್ದ ಬಿಜೆಪಿ ಸರ್ಕಾರವು 24 ಬೆಳೆಗಳ ಮೇಲೆ ಕನಿಷ್ಠ ಬೆಂಬಲ ಬೆಲೆ (MSP) ಯೋಜನೆಯನ್ನು ಘೋಷಿಸಿತು. ಅಗ್ನಿವೀರರಿಗೆ ಬಡ್ಡಿ ರಹಿತ ಸಾಲ ಘೋಷಿಸಿತು. ಆದರೆ ಇದು ಚುನಾವಣೆ ಹತ್ತಿರವಾಗಿದ್ದಾಗ ಹೇಳಿದ್ದರಿಂದಲೂ ಸಾಕಾರವಾಗಲಿಲ್ಲ. ಈ ಎಲ್ಲ ಕಾರಣಗಳು ಕಾಂಗ್ರೆಸ್ ಪಾಲಿಗೆ ರಹದಾರಿ ನಿರ್ಮಿಸಿದೆ ಎನ್ನಲಾಗಿದೆ.












Click it and Unblock the Notifications