ಮನೆಯಲ್ಲಿ ಮಲಗಿದ್ದಾಗಲೇ ಅಪಹರಿಸಿದ್ದರು: ದೆಹಲಿ ಪೊಲೀಸರ ವಿರುದ್ಧ ಪ್ರಸಿದ್ಧ ಯೂಟ್ಯೂಬರ್ ಧ್ರುವ್ ರಾಠಿ ಗಂಭೀರ ಆರೋಪ
ಜಂತರ್ ಮಂತರ್‌ನಲ್ಲಿ ಆಯೋಜಿಸಲಾಗಿದ್ದ 'ಜಂತರ್ ಮಂತರ್ 2.0' ಪ್ರತಿಭಟನಾ ಸಮಾವೇಶದಲ್ಲಿ ಪಾಲ್ಗೊಳ್ಳಲು ತೆರಳಬೇಕಿದ್ದ ಪ್ರಸಿದ್ಧ ಯೂಟ್ಯೂಬರ್ ಧ್ರುವ್ ರಾಠಿ ಅವರನ್ನು ದೆಹಲಿ ಪೊಲೀಸರು ಶನಿವಾರ (ಅಕ್ಟೋಬರ್ 10) ವಶಪಡಿಸಿಕೊಂಡಿದ್ದರು. ಗುರುಗ್ರಾಮ್‌ನಲ್ಲಿರುವ ಅವರ ನಿವಾಸದಿಂದಲೇ ಬಂಧಿಸಿ ಕರೆದೊಯ್ದಿದ್ದರು.
ಭಾನುವಾರ (ಅಕ್ಟೋಬರ್ 11) ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ಧ್ರುವ್ ರಾಠಿ ಅವರನ್ನು ಬಿಡುಗಡೆ ಮಾಡಲಾಯಿತು. ಜೈಲಿನಿಂದ ಹೊರಬಂದ ಬಳಿಕ ವಿಡಿಯೋ ಸಂದೇಶ ಹಂಚಿಕೊಂಡಿರುವ ಧ್ರುವ್ ರಾಠೀ, 'ತನ್ನನ್ನು ಕಾನೂನುಬದ್ಧವಾಗಿ ಬಂಧಿಸಲಾಗಿಲ್ಲ, ಬದಲಿಗೆ ಬಂಧನದ ನೆಪದಲ್ಲಿ ಅಪಹರಿಸಲಾಗಿತ್ತು,' ಎಂದು ದೆಹಲಿ ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಧ್ರುವ್ ರಾಠಿ ಟ್ವಿಟರ್ ವಿಡಿಯೋದಲ್ಲಿ ಏನಿದೆ?
ತಮ್ಮ ಅಧಿಕೃತ 'ಎಕ್ಸ್' (X) ಖಾತೆಯಲ್ಲಿ ವಿಡಿಯೋ ಹಂಚಿಕೊಂಡು ಘಟನೆಯನ್ನು ವಿವರವಾಗಿ ಬಿಚ್ಚಿಟ್ಟಿರುವ ಧ್ರುವ್ ರಾಠೀ, 'ಶನಿವಾರ ಬೆಳಗ್ಗೆ 7 ಗಂಟೆಗೆ ನಾನು ಮನೆಯಲ್ಲಿ ನಿದ್ರಿಸುತ್ತಿದ್ದಾಗ, ಸಾಧಾರಣ ಉಡುಪಿನಲ್ಲಿದ್ದ ಸುಮಾರು 20 ಜನರ ತಂಡ ದಿಢೀರನೆ ನನ್ನ ಮಲಗುವ ಕೋಣೆಗೆ ಪ್ರವೇಶಿಸಿತು. ಯಾವುದೇ ಮುನ್ಸೂಚನೆ ಅಥವಾ ಕಾನೂನುಬದ್ಧ ನೋಟಿಸ್ ನೀಡದೆ ನನ್ನನ್ನು ಬಲವಂತವಾಗಿ ಕರೆದೊಯ್ಯಲಾಯಿತು. ಈ ವೇಳೆ ನನಗೆ ಸಣ್ಣಪುಟ್ಟ ಗಾಯಗಳೂ ಆಗಿವೆ,' ಎಂದು ತಿಳಿಸಿದ್ದಾರೆ.
ಸುಮಾರು 22 ರಿಂದ 23 ಗಂಟೆಗಳ ಕಾಲ ತಮ್ಮನ್ನು ಹಲವು ಪೊಲೀಸ್ ಠಾಣೆಗಳಿಗೆ ಬದಲಾಯಿಸುತ್ತಾ ಕಸ್ಟಡಿಯಲ್ಲಿಡಲಾಗಿತ್ತು. ಈ ಇಡೀ ಅವಧಿಯಲ್ಲಿ ತಮ್ಮ ಕುಟುಂಬಸ್ಥರನ್ನಾಗಲಿ ಅಥವಾ ಕಾನೂನು ಸಲಹೆಗಾರರನ್ನಾಗಲಿ (ವಕೀಲರು) ಸಂಪರ್ಕಿಸಲು ಪೊಲೀಸರು ಅವಕಾಶ ನೀಡಲಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತೀಯ ಪಾಸ್‌ಪೋರ್ಟ್ ಪ್ರದರ್ಶಿಸಿ ಆಕ್ರೋಶ
ವಿಡಿಯೋದಲ್ಲಿ ತಮ್ಮ ಭಾರತೀಯ ಪಾಸ್‌ಪೋರ್ಟ್ ಅನ್ನು ಪ್ರದರ್ಶಿಸಿದ ರಾಠಿ ಅವರು, 'ನಾನು ಈಗಲೂ ಭಾರತದ ಕಾನೂನುಬದ್ಧ ಪ್ರಜೆ. ಈ ದೇಶದ ಪ್ರಜೆಯಾಗಿ ಶಾಂತಿಯುತ ಪ್ರತಿಭಟನೆಗಳು ಮತ್ತು ಪ್ರಜಾಪ್ರಭುತ್ವದ ಚಳವಳಿಗಳಲ್ಲಿ ಭಾಗವಹಿಸುವ ಸಂಪೂರ್ಣ ಮೂಲಭೂತ ಹಕ್ಕು ನನಗಿದೆ,' ಎಂದು ಹೇಳಿದ್ದಾರೆ.
ಪೊಲೀಸರಿಂದ ಎಚ್ಚರಿಕೆ ಸಂದೇಶ
ಸಿಜೆಪಿಯು ಜಂತರ್ ಮಂತರ್‌ನಲ್ಲಿ 'ಜಂತರ್ ಮಂತರ್ 2.0' ಪ್ರತಿಭಟನೆಗೆ ಕರೆ ನೀಡಿತ್ತು. ಆದರೆ ಪ್ರತಿಭಟನಾ ಪ್ರದೇಶದ ಸುತ್ತಮುತ್ತ ನಿಷೇಧಾಜ್ಞೆ ಜಾರಿಯಲ್ಲಿದ್ದ ಕಾರಣ, ಜನಸಂದಣಿ ಸೇರುವುದನ್ನು ತಡೆಯಲು ದೆಹಲಿ ಪೊಲೀಸರು ರಾಷ್ಟ್ರ ರಾಜಧಾನಿಯಾದ್ಯಂತ ಭದ್ರತೆಯನ್ನು ಹೆಚ್ಚಿಸಿದ್ದರು. ಈ ಹಿನ್ನೆಲೆ ಗುರುಗ್ರಾಮ್‌ನಲ್ಲಿದ್ದ ರಾಠಿ ಅವರನ್ನು ಮುನ್ನೆಚ್ಚರಿಕಾ ಕ್ರಮವಾಗಿ ವಶಕ್ಕೆ ಪಡೆಯಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ
ಪ್ರಸ್ತುತ ಧ್ರುವ್ ರಾಠೀ ಅವರನ್ನು ಕಸ್ಟಡಿಯಿಂದ ಬಿಡುಗಡೆ ಮಾಡಲಾಗಿದೆ. ಆದರೂ ಅವರು ಮತ್ತೆ ಜಾರಿಯಲ್ಲಿರುವ ನಿಷೇಧಾಜ್ಞೆಗಳನ್ನು ಉಲ್ಲಂಘಿಸಲು ಯತ್ನಿಸಿದರೆ ಅಥವಾ ಜಂತರ್ ಮಂತರ್ ಪ್ರತಿಭಟನಾ ಸ್ಥಳಕ್ಕೆ ಪ್ರವೇಶಿಸಲು ಮುಂದಾದರೆ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸುವುದಾಗಿ ದೆಹಲಿ ಪೊಲೀಸರು ಎಚ್ಚರಿಸಿದ್ದಾರೆ. ಮತ್ತೊಂದೆಡೆ ಸಾಮಾಜಿಕ ಜಾಲತಾಣದಲ್ಲಿ ಹಲವು ನೆಟ್ಟಿಗರು 'ಇದು ಬಿಜೆಪಿಯ ಷಡ್ಯಂತ್ರ್ಯಾಗಿದೆ. ನ್ಯಾಯ ಕೇಳುವ ಹಕ್ಕು ನಮಗಿಲ್ಲವೆ?,' ಎಂದು ಪ್ರಶ್ನಿಸುವ ಮೂಲಕ ಆಕ್ರೋಶ ಹೊರಹಾಕುತ್ತಿದ್ದಾರೆ.
I was not arrested or detained, I was KIDNAPPED. Thank you for your support, here's the full story 👇 https://t.co/gcN8cAUOmY
— Dhruv Rathee (@dhruv_rathee) October 11, 2026
ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನಾತಾ ಪಾರ್ಟಿ (ಸಿಜೆಪಿ) ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಆಯೋಜನೆ ಮಾಡಿತ್ತು. ಪ್ರತಿಭಟನಾಕಾರರು ಜಂತರ್ ಮಂತರ್ ತಲುಪುವುದನ್ನು ತಡೆಯಲು ದೆಹಲಿಯಾದ್ಯಂತ ಪೊಲೀಸ್ ಬಿಗಿ ಭದ್ರೆತೆಗೊಳಿಸಿದ್ದ ಸಮಯದಲ್ಲಿ ರಾಠೀ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಇದೀಗ ಅವರನ್ನು ಬಿಡುಗಡೆಗೊಳಿಸಲಾಗಿದೆ.


Click it and Unblock the Notifications
