ದೆಹಲಿ ಕಾರು ಸ್ಫೋಟ ಕೇಸ್: ಎನ್‌ಐಎ ಬಲೆಗೆ ಬಿದ್ದ ಪ್ರಮುಖ ಆರೋಪಿ
ದೇಶವನ್ನೇ ಬೆಚ್ಚಿಬೀಳಿಸಿರುವ ದೆಹಲಿ ಕೆಂಪುಕೋಟೆ ಕಾರು ಸ್ಫೋಟ ಪ್ರಕರಣದ ತನಿಖೆ ಚುರುಕುಗೊಂಡಿದೆ. ಇದರ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಆತ್ಮಾಹುತಿ ಬಾಂಬರ್ ಜೊತೆ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸಿದ್ದ ಕಾಶ್ಮೀರಿ ನಿವಾಸಿಯನ್ನು ಬಂಧಿಸಿದೆ. ಆತ್ಮಾಹುತಿ ಬಾಂಬರ್‌ನ ಸಹಾಯಕನ ಬಂಧನದೊಂದಿಗೆ ಕೆಂಪು ಕೋಟೆ ಪ್ರದೇಶ ಬಾಂಬ್ ದಾಳಿ ಪ್ರಕರಣದಲ್ಲಿ ಎನ್‌ಐಎ ಮಹತ್ವದ ಪ್ರಗತಿ ಸಾಧಿಸಿದೆ.
ದೆಹಲಿ ಪೊಲೀಸರಿಂದ ಪ್ರಕರಣವನ್ನು ವಹಿಸಿಕೊಂಡ ನಂತರ ಬೃಹತ್ ಶೋಧ ಕಾರ್ಯಾಚರಣೆಯನ್ನು ಆರಂಭಿಸಿದ್ದ ಎನ್‌ಐಎ ತನಿಖೆಯನ್ನು ತೀವ್ರಗೊಳಿಸಿದೆ. ಐತಿಹಾಸಿಕ ಕೆಂಪು ಕೋಟೆ ಬಳಿ ನಡೆದ ದೆಹಲಿ ಕಾರು ಸ್ಫೋಟ ಪ್ರಕರಣವು ಇದೀಗ ಮಹತ್ವದ ತಿರುವು ಪಡೆದುಕೊಂಡಿದೆ. ಆತ್ಮಹತ್ಯಾ ಬಾಂಬರ್ ಜೊತೆ ಸೇರಿ 12 ಅಮಾಯಕರ ಜೀವಗಳನ್ನು ಬಲಿತೆಗೆದುಕೊಂಡ ಹಾಗೂ 32 ಜನರನ್ನು ಗಾಯಗೊಳಿಸಿ ಭಯೋತ್ಪಾದಕ ದಾಳಿಯನ್ನು ನಡೆಸಲು ಸಂಚು ರೂಪಿಸಿದ್ದ ಕಾಶ್ಮೀರಿ ನಿವಾಸಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ದಾಳಿಯಲ್ಲಿ ಭಾಗಿಯಾಗಿರುವ ಕಾರನ್ನು ನೋಂದಾಯಿಸಲಾಗಿದ್ದ ಅಮೀರ್ ರಶೀದ್ ಅಲಿಯನ್ನು ಏಜೆನ್ಸಿ ಬಂಧಿಸಿದೆ. ನವೆಂಬರ್ 10ರಂದು ಸಂಜೆ 7 ಗಂಟೆ ಸುಮಾರಿಗೆ ಸ್ಫೋಟ ಸಂಭವಿಸಿದ ಒಂದು ದಿನದ ನಂತರ ದೆಹಲಿ ಪೊಲೀಸರಿಂದ ಈ ಪ್ರಕರಣವನ್ನು ಎನ್‌ಐಎ ವಹಿಸಿಕೊಂಡಿತ್ತು. ನಂತರ ಬೃಹತ್ ಶೋಧ ಕಾರ್ಯಾಚರಣೆಯನ್ನು ಆರಂಭಿಸಿದ್ದ ಎನ್‌ಐಎ ದೆಹಲಿಯಲ್ಲಿ ಆತನನ್ನು ಬಂಧಿಸಿದೆ.
ಜಮ್ಮು ಮತ್ತು ಕಾಶ್ಮೀರದ ಪ್ಯಾಂಪೋರ್‌ನ ಸಂಬೂರಾ ನಿವಾಸಿಯಾಗಿರುವ ಆರೋಪಿಯು ಆತ್ಮಾಹುತಿ ಬಾಂಬರ್ ಉಮರ್ ಉನ್ ನಬಿ ಜೊತೆ ಭಯೋತ್ಪಾದಕ ದಾಳಿಯನ್ನು ನಡೆಸಲು ಸಂಚು ರೂಪಿಸಿದ್ದಾನೆ ಎಂದು ಎನ್‌ಐಎ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ. ಅಮೀರ್ ಕಾರನ್ನು ಖರೀದಿಸಲು ದೆಹಲಿಗೆ ಬಂದಿದ್ದರು. ಇದನ್ನು ಅಂತಿಮವಾಗಿ ಸ್ಫೋಟಕ್ಕೆ ವಾಹನದಲ್ಲಿ ಸಾಗಿಸುವ ಐಇಡಿ ಆಗಿ ಬಳಸಲಾಯಿತು ಎಂದು ಹೇಳಿದೆ.
ಐಇಡಿ ಹೊತ್ತೊಯ್ಯಲಾದ ವಾಹನದ ಮೃತ ಚಾಲಕನನ್ನು ಪುಲ್ವಾಮಾ ಜಿಲ್ಲೆಯ ನಿವಾಸಿ ಮತ್ತು ಫರಿದಾಬಾದ್‌ನ ಅಲ್ ಫಲಾಹ್ ವಿಶ್ವವಿದ್ಯಾಲಯದಲ್ಲಿ ಜನರಲ್ ಮೆಡಿಸಿನ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕ ಉಮರ್ ಉನ್ ನಬಿ ಎಂದು ಎನ್‌ಐಎ ವಿಧಿವಿಜ್ಞಾನದ ಮೂಲಕ ದೃಢಪಡಿಸಿದೆ. ಅಲ್ಲದೆ ಭಯೋತ್ಪಾದನಾ ನಿಗ್ರಹ ಸಂಸ್ಥೆಯು ನಬಿಗೆ ಸೇರಿದ ಮತ್ತೊಂದು ವಾಹನವನ್ನು ಸಹ ವಶಪಡಿಸಿಕೊಂಡಿದೆ.
ನವೆಂಬರ್ 10ರಂದು ರಾಷ್ಟ್ರ ರಾಜಧಾನಿಯನ್ನು ಬೆಚ್ಚಿಬೀಳಿಸಿದ ಸ್ಫೋಟದಲ್ಲಿ ಗಾಯಗೊಂಡವರು ಸೇರಿದಂತೆ 73 ಸಾಕ್ಷಿಗಳನ್ನು ಎನ್‌ಐಎ ಇದುವರೆಗೆ ವಿಚಾರಣೆ ನಡೆಸಿರುವ ಪ್ರಕರಣದಲ್ಲಿ ಸಾಕ್ಷ್ಯಕ್ಕಾಗಿ ವಾಹನವನ್ನು ಪರಿಶೀಲಿಸಲಾಗುತ್ತಿದೆ. ಸದ್ಯ ದೆಹಲಿ ಪೊಲೀಸ್, ಜಮ್ಮು ಮತ್ತು ಕಾಶ್ಮೀರ ಪೊಲೀಸ್, ಹರಿಯಾಣ ಪೊಲೀಸ್, ಉತ್ತರ ಪ್ರದೇಶ ಪೊಲೀಸ್ ಮತ್ತು ವಿವಿಧ ಸಂಸ್ಥೆಗಳೊಂದಿಗೆ ಎನ್‌ಐಎ ಕಾರ್ಯನಿರ್ವಹಿಸುತ್ತಿದೆ. ಬಾಂಬ್ ಸ್ಫೋಟದ ಹಿಂದಿನ ದೊಡ್ಡ ಪಿತೂರಿಯನ್ನು ಪತ್ತೆ ಹಚ್ಚಲು ಮತ್ತು ಪ್ರಕರಣದಲ್ಲಿ ಭಾಗಿಯಾಗಿರುವ ಇತರರನ್ನು ಗುರುತಿಸಲು ಹಲವು ಸುಳಿವುಗಳನ್ನು ಹುಡುಕುತ್ತಿದೆ ಎಂದು ಸಂಸ್ಥೆ ಹೇಳಿದೆ.












Click it and Unblock the Notifications