ಗೌರಿ ಲಂಕೇಶ್ ಹತ್ಯೆಯ ನಂತರ, ಮತ್ತೋರ್ವ ಪತ್ರಕರ್ತೆಗೆ ಜೀವ ಬೆದರಿಕೆ ಕರೆ
ಗೌರಿ ಲಂಕೇಶ್ ಹತ್ಯೆಯಾದ ಎರಡೇ ದಿನದಲ್ಲಿ ಮತ್ತೆ ಐದು ಮಹಿಳಾ ಪತ್ರಕರ್ತೆ/ಅಂಕಣಕಾರ/ಲೇಖಕಿಯರಿಗೆ ಜೀವ ಬೆದರಿಕೆ. ಈ ಸಂಬಂಧ ಪತ್ರಕರ್ತೆ ಸಾಗರಿಕಾ ಘೋಷ್ ದೆಹಲಿಯ ಸೈಬರ್ ಪೊಲೀಸ್ ಠಾಣೆಯಲ್ಲಿ ಗುರುವಾರ (ಸೆ 7) ದೂರು ನೀಡಿದ್ದಾರೆ.
ನವದೆಹಲಿ, ಸೆ 8: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾದ ಎರಡೇ ದಿನದಲ್ಲಿ ಮತ್ತೆ ಐದು ಮಹಿಳಾ ಪತ್ರಕರ್ತೆ/ಅಂಕಣಕಾರ/ಲೇಖಕಿಯರಿಗೆ ಜೀವ ಬೆದರಿಕೆ ಪೋಸ್ಟ್ ಅನ್ನು ಸಾಮಾಜಿಕ ತಾಣದಲ್ಲಿ ವ್ಯಕ್ತಿಯೋರ್ವ ಹಾಕಿದ್ದಾನೆ.
ಈ ಸಂಬಂಧ ಪತ್ರಕರ್ತೆ ಸಾಗರಿಕಾ ಘೋಷ್ ದೆಹಲಿಯ ಸೈಬರ್ ಪೊಲೀಸ್ ಠಾಣೆಯಲ್ಲಿ ಗುರುವಾರ (ಸೆ 7) ದೂರು ನೀಡಿದ್ದಾರೆ. ಪೊಲೀಸರು ಬೆದರಿಕೆ ಹಾಕಿರುವ ವ್ಯಕ್ತಿಯ ವಿರುದ್ದ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

ಶೋಭಾ ಡೇ, ಆರುಂಧತಿ ರಾಯ್, ಸಾಗರಿಕಾ ಘೋಷ್, ಕವಿತಾ ಕೃಷ್ಣನ್ ಮತ್ತು ಶೆಹಲಾ ರಷೀದ್ ಮೇಲೆ ಸಾಮಾಜಿಕ ತಾಣದ ಮೂಲಕ ಜೀವ ಬೆದರಿಕೆ ಬಂದಿರುವ ಹಿನ್ನಲೆಯಲ್ಲಿ ಎಫ್ಐಆರ್ ದಾಖಲಿಸಿಕೊಳ್ಲಲಾಗಿದೆ ಎಂದು ಡಿಸಿಪಿ ಅನೀಶ್ ರಾಯ್ ಹೇಳಿದ್ದಾರೆ.
ವಿಕ್ರಮ ಆದಿತ್ಯ ರಾಣಾ ಮತ್ತು ವಿಕ್ರಮ್ ಜೆಬಿ ರಾಣಾ ಎನ್ನುವ ಎರಡು ಫೇಸ್ ಬುಕ್ ಅಕೌಂಟಿನಿಂದ ಐದು ಮಹಿಳೆಯರಿಗೆ ಜೀವ ಬೆದರಿಕೆ ಬಂದಿದ್ದು, ಈ ಅಕೌಂಟ್ ಅನ್ನು ಶಿಲ್ಲಾಂಗ್ ನಗರದಿಂದ ನಿರ್ವಹಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಗರಿಕಾ ಸೇರಿದಂತೆ ಐವರು ಪತ್ರಕರ್ತೆಯರು ದೇಶ ವಿರೋಧಿಗಳಾಗಿದ್ದು, ಮುಖವಾಡ ಧರಿಸಿರುವ ಪತ್ರಕರ್ತೆಯರು, ಹೋರಾಟಗಾರ್ತಿಯರು. ಇಂತವರನ್ನು ದೇಶದಿಂದ ಹೊಡೆದು ಹಾಕಬೇಕೆಂದು 'ವಿಕ್ರಮ ಆದಿತ್ಯ ರಾಣಾ' ಎನ್ನುವ ಅಕೌಂಟಿನಿಂದ ಪೋಸ್ಟ್ ಹಾಕಲಾಗಿತ್ತು.












Click it and Unblock the Notifications