ಮೋದಿಗೆ ಜಗನ್ ಬಲ: ದೆಹಲಿ ಸುಗ್ರೀವಾಜ್ಞೆ, ಅವಿಶ್ವಾಸ ನಿರ್ಣಯ- ಬಿಜೆಪಿ ಬೆಂಬಲಿಸಲು ವೈಎಸ್ಆರ್ ಕಾಂಗ್ರೆಸ್ ನಿರ್ಧಾರ
ನವದೆಹಲಿ, ಜುಲೈ 27: ರಾಷ್ಟ್ರ ರಾಜಧಾನಿಯಲ್ಲಿ ಸೇವೆಗಳ ನಿಯಂತ್ರಣಕ್ಕಾಗಿ ದೆಹಲಿ ಸುಗ್ರಿವಾಜ್ಞೆ ಮಸೂದೆಯನ್ನು ತೆರವುಗೊಳಿಸಲು ಸಂಸತ್ತಿನ ಉಭಯ ಸದನಗಳು ತಯಾರಾಗಿವೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ತೀವ್ರ ವಿರೋಧದ ನಡುವೆಯೂ ಕೇಂದ್ರ ಸರ್ಕಾರ ದೆಹಲಿ ಸುಗ್ರಿವಾಜ್ಞೆ ಮಸೂದೆಯನ್ನು ಮಂಡಿಸುವುದಾಗಿ ಹೇಳಿತ್ತು. ಮೋದಿ ಸರ್ಕಾರದ ಈ ನಿರ್ಧಾರಕ್ಕೆ ವೈಎಸ್‌ಆರ್ ಕಾಂಗ್ರೆಸ್ ಬೆಂಬಲವಾಗಿ ನಿಂತಿದೆ. ಈ ಹಿನ್ನೆಲೆಯಲ್ಲಿ ಮಸೂದೆಯನ್ನು ಅಂಗೀಕರಿಸುವಂತೆ ಮಾಡುವುದು ಎನ್‌ಡಿಎಗೆ ಸುಲಭವಾಗಿದೆ.
ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಪಕ್ಷವು ಸಂಸತ್ತಿನಲ್ಲಿ ಬಿಜೆಪಿ ಸರ್ಕಾರವನ್ನು ಬೆಂಬಲಸುವ ನಿರ್ಧಾರ ಕೈಗೊಂಡಿದೆ. ದೆಹಲಿ ಸುಗ್ರೀವಾಜ್ಞೆ ಹಾಗೂ ಮಣಿಪುರದ ಮೇಲಿನ ಅವಿಶ್ವಾಸ ನಿರ್ಣಯ ಮಂಡಣೆಯಲ್ಲಿ ಮೋದಿ ಪರ ಜಗನ್ ನಿಂತಿದ್ದಾರೆ ಎಂದು ವರದಿಯಾಗಿದೆ.

ರಾಜ್ಯಸಭೆಯಲ್ಲಿ ಒಂಬತ್ತು ಮತ್ತು ಲೋಕಸಭೆಯಲ್ಲಿ 22 ಸದಸ್ಯರನ್ನು ವೈಎಸ್‌ಆರ್ ಕಾಂಗ್ರೆಸ್ ಪಕ್ಷವು ಹೊಂದಿದೆ. ಈ ನಿರ್ಣಾಯಕ ಮಸೂದೆಗಳಲ್ಲಿ ಮೋದಿ ಸರ್ಕಾರವನ್ನು ಬೆಂಬಲಿಸುತ್ತಿದೆ. ಇದು ಎನ್‌ಡಿಎ ಮೈತ್ರಿಕೂಟಕ್ಕೆ ಮತ್ತಷ್ಟು ಬಲ ತಂದು ಕೊಟ್ಟಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರ ಸರ್ಕಾರವು ರಾಜ್ಯಸಭೆಯಲ್ಲಿ ಬಹುಮತ ಹೊಂದಿಲ್ಲ. ಆದರೆ, ವೈಎಸ್‌ಆರ್ ಕಾಂಗ್ರೆಸ್ ಪಕ್ಷದ 9 ಸದಸ್ಯರು ಬೆಂಬಲಿಸಿದರೆ, ಮೋದಿ ಸರ್ಕಾರವು ಬಹುಮತ ಪಡೆಯಲಿದೆ. ಈ ಹಿನ್ನೆಲೆಯಲ್ಲಿ ವಿವಾದಾತ್ಮಕ ದೆಹಲಿ ಸುಗ್ರಿವಾಜ್ಞೆ ಮಸೂದೆಯನ್ನು ಸುಲಭವಾಗಿ ತೆರವುಗೊಳಿಸಬಹುದು.

ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶಕ್ಕೆ ಸಂಬಂಧಿಸಿದ (ತಿದ್ದುಪಡಿ) ಮಸೂದೆಯ ಮೂಲಕ ದೆಹಲಿಯ ಅಧಿಕಾರಿಗಳ ಮೇಲೆ ನಿಯಂತ್ರಣ ಹೊಂದಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದು ದೆಹಲಿಯ ಚುನಾಯಿತ ಸರ್ಕಾರದ ಅಸ್ತಿತ್ವವನ್ನೆ ಮುಗಿಸುತ್ತದೆ ಎಂಬುದು ಸಿಎಂ ಕೇಜ್ರಿವಾಲರ ಅಭಿಪ್ರಾಯವಾಗಿದೆ.
ಈ ವಿಚಾರದಲ್ಲಿ ದೆಹಲಿ ಸರ್ಕಾರದ ಪರ ಸುಪ್ರೀಂ ಕೋರ್ಟ್ ಆದೇಶವನ್ನು ನೀಡಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಮಸೂದೆಯನ್ನು ಮಂಡಿಸಲು ನಿರ್ಧರಿಸಿದೆ. ಮಸೂದೆ ಅಂಗೀಕಾರವಾದ ನಂತರ ಅಧಿಕಾರಿಗಳ ವರ್ಗಾವಣೆ ಮತ್ತು ನೇಮಕಾತಿಗಳ ಮೇಲಿನ ಸಂಪೂರ್ಣ ಹಿಡಿತ ಕೇಂದ್ರ ಸರ್ಕಾರದ ಬಳಿ ಇರಲಿದೆ.

ದೆಹಲಿ ಸುಗ್ರಿವಾಜ್ಞೆ ಹಾಗೂ ಅವಿಶ್ವಾಸ ನಿರ್ಣಯ ಮಂಡಣೆ ವಿಚಾರದಲ್ಲಿ ನಾವು ಸರ್ಕಾರದ ಪರವಾಗಿ ಮತ ಚಲಾಯಿಸುತ್ತೇವೆ ಎಂದು ವೈಎಸ್ಆರ್ ಕಾಂಗ್ರೆಸ್ ಪಕ್ಷದ ನಾಯಕ ವಿಜಯಸಾಯಿ ರೆಡ್ಡಿ ತಿಳಿಸಿದ್ದಾರೆ.
ಲೋಕಸಭೆಯಲ್ಲಿ 22 ಸಂಸದರನ್ನು ಹೊಂದಿರುವ ವೈಎಸ್‌ಆರ್ ಕಾಂಗ್ರೆಸ್ ಪಕ್ಷವು ಸರ್ಕಾರದ ಪರ ಮತ ಚಲಾಯಿಸಲು ನಿರ್ಧರಿಸುವುದು ಬಿಜೆಪಿಗೆ ಮತ್ತಷ್ಟು ಬಲ ಬಂದಂತಾಗಿದೆ. ವಿಶ್ವಾಸಮತ ಯಾಚನೆಗೆ ಲೋಕಸಭೆ ಸ್ಪೀಕರ್ ಎರಡು ನೋಟಿಸ್‌ಗಳನ್ನು ಅಂಗೀಕರಿಸಿದ್ದಾರೆ.

ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಎಎಪಿ) ಕೇಂದ್ರದ ಮಸೂದೆ ವಿರುದ್ಧದ ಹೋರಾಟಕ್ಕೆ ಬೆಂಬಲವನ್ನು ಕೋರುತ್ತಿದೆ. ರಾಜಧಾನಿಯಲ್ಲಿ ಅಧಿಕಾರಿಗಳ ಮೇಲೆ ನಿಯಂತ್ರಣವನ್ನು ತೆಗೆದುಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದೆ. ಈ ಮೂಲಕ ಕಾನೂನು ಸುವ್ಯವಸ್ಥೆಯನ್ನು ಬುಡಮೇಲು ಮಾಡಲು ಪ್ರಯತ್ನಿಸುತ್ತಿದೆ ಎಂದು ಎಎಪಿ ಆರೋಪಿಸಿದೆ.
ಎಎಪಿ ನಾಯಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ದೇಶಾದ್ಯಂತ ಪ್ರವಾಸ ಮಾಡಿ, ವಿವಿಧ ಮುಖ್ಯಮಂತ್ರಿಗಳು ಮತ್ತು ವಿರೋಧ ಪಕ್ಷದ ನಾಯಕರನ್ನು ಭೇಟಿ ಮಾಡಿ ಅವರ ಬೆಂಬಲವನ್ನು ಕೋರಿದ್ದಾರೆ.












Click it and Unblock the Notifications