‘ಸರ್, ನನಗೆ ಆಫೀಸ್ ಹೊರತಾದ ವೈಯಕ್ತಿಕ ಬದುಕಿದೆ’: ಶನಿವಾರ ಕೆಲಸ ಮಾಡಲು ನಿರಾಕರಿಸಿದರೂ GenZ ಯುವಕನಿಗೆ ಕೆಲಸ ಕೊಟ್ಟ ಉದ್ಯಮಿ

ನವದೆಹಲಿ: ಕಾರ್ಪೊರೇಟ್ ಜಗತ್ತಿನಲ್ಲಿ ವರ್ಕ್-ಲೈಫ್ ಬ್ಯಾಲೆನ್ಸ್ ಎನ್ನುವುದು ಕಣ್ಮರೆಯಾಗುತ್ತಿರುವ ಕುರಿತು ಭಾರಿ ಚರ್ಚೆಗಳು ನಡೆಯುತ್ತಿವೆ. ಇದರ ನಡುವೆಯೇ ದೆಹಲಿ ಮೂಲದ ಉದ್ಯಮಿಯೊಬ್ಬರು ಶನಿವಾರ ಕೆಲಸ ಮಾಡಲು ನಿರಾಕರಿಸಿದ 25 ವರ್ಷದ ಜೆನ್ ಜೀ ಯುವಕನನ್ನ ಕೆಲಸಕ್ಕೆ ತೆಗೆದುಕೊಂಡಿರುವ ಸ್ಫೂರ್ತಿದಾಯಕ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಉದ್ಯಮಿ ಅಭಿಷೇಕ್ ಅಗರ್ವಾಲ್ ಅವರು ಲಿಂಕ್ಡ್‌ಡಿನ್‌ನಲ್ಲಿ ಹಂಚಿಕೊಂಡಿರುವ ಪೋಸ್ಟ್ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಇದರ ಜೊತೆಗೆ ಹೊಸ ತಲೆಮಾರಿನ ಉದ್ಯೋಗಿಗಳಲ್ಲಿ ಸ್ಪಷ್ಟತೆ ಹಾಗೂ ಆತ್ಮವಿಶ್ವಾಸಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

'ಸರ್, ನನಗೆ ಆಫೀಸ್ ಹೊರತಾದ ವೈಯಕ್ತಿಕ ಬದುಕಿದೆ' ಎಂದ ಜೆನ್ ಜಿ ಯುವಕ

ಇಂಟರ್ವ್ಯೂವ್‌ನಲ್ಲಿ ಆದ ಅನುಭವವನ್ನ ಹಂಚಿಕೊಂಡಿರುವ ಅಭಿಷೇಕ್ ಅಗರ್ವಾಲ್, "ನಾನು 25 ವರ್ಷದ ಯುವಕನೊಬ್ಬನ ಸಂದರ್ಶನ ಮಾಡುತ್ತದ್ದೆ. ಆತ ಶನಿವಾರ ಕೆಲಸ ಮಾಡಲು ನೇರವಾಗಿ ನಿರಾಕರಿಸಿದ. ಇದರಿಂದ ಅಚ್ಚರಿಗೊಂಡ ನಾನು, 'ನಿಮ್ಮ ವಯಸ್ಸಿಗೆ ಇದು ಅತಿಯಾದ ಸೋಮಾರಿತನ ಎನಿಸುವುದಿಲ್ಲವೇ?' ಎಂದು ಪ್ರಶ್ನಿಸಿದೆ. ಆದರೆ ಆ ಯುವಕ ನೀಡಿದ ಉತ್ತರ ನನ್ನ ಆಲೋಚನಾ ಕ್ರಮವನ್ನೇ ಬದಲಿಸಿತು" ಎಂದು ಬರೆದುಕೊಂಡಿದ್ದಾರೆ.

Delhi Founder

ಒಂದು ಚೂರು ಹೆದರದೆ ಉತ್ತರಿಸಿದ ಆ ಯುವಕ, "ಸರ್, ನನಗೆ ಆಫೀಸ್ ಹೊರತಾಗಿಯೂ ಒಂದು ವೈಯಕ್ತಿಕ ಬದುಕಿದೆ. ನಾನು ಪ್ರತಿ ಶನಿವಾರ ಕ್ರಿಕೆಟ್ ಆಡುತ್ತೇನೆ ಹಾಗೆಯೇ 14ನೇ ವಯಸ್ಸಿನಿಂದಲೂ ಗಿಟಾರ್ ನುಡಿಸುತ್ತಿದ್ದೇನೆ. ಜೊತೆಗೆ ನನ್ನ ಸಮಯವನ್ನು ಬಯಸುವ ಕುಟುಂಬವಿದೆ" ಎಂದು ಸ್ಪಷ್ಟವಾಗಿ ಹೇಳಿದ್ದಾನೆ. ಇದಕ್ಕೆ ಪ್ರತಿಕ್ರಿಯಿಸಿದ ಅಭಿಷೇಕ್, "ಇವೆಲ್ಲವನ್ನೂ ಆಫೀಸ್ ಮುಗಿದ ಮೇಲೆ ಸಂಜೆ 7 ಗಂಟೆಯ ನಂತರ ನೋಡಿಕೊಳ್ಳಬಹುದು. ಭಾನುವಾರವೂ ನಿಮಗೆ ರಜೆ ಇರುತ್ತದೆ" ಎಂದಿದ್ದಾರೆ. ಆದರೆ ಆ ಯುವಕ ನೀಡಿದ ಮತ್ತೊಂದು ಉತ್ತರ ಇಂಟರ್ವ್ಯೂವ್‌ನಲ್ಲಿದ್ದ ಎಲ್ಲರನ್ನಾ ನಿಬ್ಬೆರಗಾಗಿಸಿದೆ.

ಅಮೆರಿಕದ ಉದಾಹರಣೆ ನೀಡಿದ ಯುವಕ

"ಸರ್, ನನ್ನ ಅಣ್ಣ ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದಾರೆ. ನಾನು ಈಗಾಗಲೇ ಎರಡು ಬಾರಿ ಅಲ್ಲಿಗೆ ಹೋಗಿದ್ದೇನೆ. ಅಲ್ಲಿ ಎಲ್ಲರೂ ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ಕೆಲಸ ಮಾಡುತ್ತಾರೆ. ಆದರೂ ಅವರು ಜಗತ್ತಿನ ಅತ್ಯಂತ ಸ್ಪರ್ಧಾತ್ಮಕ ಮತ್ತು ಮುಂದುವರಿದ ರಾಷ್ಟ್ರವಾಗಿದ್ದಾರೆ. ಅವರು ವಾರದ ಐದು ದಿನ ಕೆಲಸ ಮಾಡಿ ಯಶಸ್ವಿಯಾಗಲು ಸಾಧ್ಯವಾಗುವುದಾದರೆ, ನಮ್ಮಿಂದ ಯಾಕೆ ಸಾಧ್ಯವಿಲ್ಲ?" ಎಂದು ಯುವಕ ಮರುಪ್ರಶ್ನೆ ಹಾಕಿದ್ದಾನೆ.

ಈ ಉತ್ತರ ಕೇಳಿ ಅಭಿಷೇಕ್ ಅಗರ್ವಾಲ್ ಮತ್ತು ಅವರ ಪ್ಯಾನಲ್ ಸದಸ್ಯರು ಆಶ್ಚರ್ಯರಾಗಿದ್ದಾರೆ. "ನಾನು ನೂರಾರು ಅಭ್ಯರ್ಥಿಗಳ ಇಂಟರ್ವ್ಯೂವ್‌ ಮಾಡಿದ್ದೇನೆ. ಬಹುತೇಕರು ನಾವು ಏನು ಕೇಳಲು ಬಯಸುತ್ತೇವೆಯೋ ಅದನ್ನೇ ಹೇಳುತ್ತಾರೆ. ತಾವು ಕೆಲಸದ ಬಗ್ಗೆ ಅತ್ಯಂತ ಆಸಕ್ತಿ ಹೊಂದಿದ್ದೇವೆ, ಶೇ. 200 ರಷ್ಟು ಶ್ರಮ ಹಾಕುತ್ತೇವೆ, ವಾರಾಂತ್ಯದಲ್ಲಿ ಕೆಲಸ ಮಾಡಲು ಯಾವುದೇ ಸಮಸ್ಯೆಯಿಲ್ಲ ಎನ್ನುತ್ತಾರೆ. ಆದರೆ 8 ತಿಂಗಳಲ್ಲೇ ಮಾನಸಿಕವಾಗಿ ಬಳಲಿ ಕೆಲಸ ಬಿಡಲು ದಾರಿ ಹುಡುಕುತ್ತಾರೆ. ಆದರೆ ಈ ಯುವಕ ಭಿನ್ನವಾಗಿದ್ದ" ಎಂದು ಅಭಿಷೇಕ್ ಹೇಳಿದ್ದಾರೆ.

ಶನಿವಾರ ಕೆಲಸ ಮಾಡಲು ನಿರಾಕರಿಸಿದರೂ, ಆತನ ಸ್ಪಷ್ಟತೆ ಮತ್ತು ಪ್ರಾಮಾಣಿಕತೆಯನ್ನ ಮೆಚ್ಚಿ ಅಭಿಷೇಕ್ ಅಗರ್ವಾಲ್ ಆತನನ್ನು ಕೆಲಸಕ್ಕೆ ಸೇರಿಸಿಕೊಂಡರು. ಆ ನಿರ್ಧಾರ ಸರಿಯಾಗಿತ್ತು ಎಂಬುದನ್ನು ಆ ಯುವಕ ತನ್ನ ಕೆಲಸದ ಮೂಲಕ ಸಾಬೀತುಪಡಿಸಿದ್ದಾನೆ

"ಆತ ಸತತ ಎರಡು ತ್ರೈಮಾಸಿಕಗಳಲ್ಲಿ ತಂಡದ ಎಲ್ಲರಿಗಿಂತ ಉತ್ತಮ ಸಾಧನೆ ಮಾಡಿದ. ಗ್ರಾಹಕರ ಬಳಿ ಎಂದೂ ಸುಳ್ಳು ಹೇಳಲಿಲ್ಲ. ಉತ್ಪನ್ನದ ಸಾಧಕ-ಬಾಧಕಗಳನ್ನು ಸ್ಪಷ್ಟವಾಗಿ ವಿವರಿಸಿ, ನಿರ್ಧಾರವನ್ನು ಗ್ರಾಹಕರಿಗೇ ಬಿಡುತ್ತಿದ್ದ. ಆತನ ಪ್ರಾಮಾಣಿಕತೆ ಗ್ರಾಹಕರಿಗೆ ಇಷ್ಟವಾಯಿತು. ಆತ ಈಗಲೂ ಶನಿವಾರ ಕ್ರಿಕೆಟ್ ಆಡುತ್ತಾನೆ, ಗಿಟಾರ್ ನುಡಿಸುತ್ತಾನೆ ಮತ್ತು ಕುಟುಂಬಕ್ಕೆ ಸಮಯ ನೀಡುತ್ತಾನೆ. ನಾನು ಯಾರನ್ನು ಸೋಮಾರಿ ಎಂದು ಕರೆದೆನೋ, ನಾನು ಇಡೀ ವರ್ಷದಲ್ಲಿ ಇಂಟರ್ವ್ಯೂವ್‌ ಮಾಡಿದ್ದರಲ್ಲಿ ಆತನೇ ಅತ್ಯಂತ ಸ್ಪಷ್ಟಯಿದ್ದ ವ್ಯಕ್ತಿಯಾಗಿದ್ದ" ಎಂದು ಅಭಿಷೇಕ್ ಪ್ರಶಂಸಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಕಮೆಂಟ್‌

ಅಭಿಷೇಕ್ ಅಗರ್ವಾಲ್ ಅವರ ಈ ಪೋಸ್ಟ್ ಲಿಂಕ್ಡ್‌ಇನ್‌ನಲ್ಲಿ ವೈರಲ್ ಆಗುತ್ತಲೇ ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. "ಕೆಲಸದ ಬದ್ಧತೆಯನ್ನು ನೀವು ವಾರಾಂತ್ಯದಲ್ಲಿ ಎಷ್ಟು ದಿನ ಕೆಲಸ ಮಾಡುತ್ತೀರಿ ಎಂಬುದರ ಮೇಲೆ ಅಳೆಯಬಾರದು. ಬದಲಾಗಿ ನೀವು ಎಷ್ಟು ಮೌಲ್ಯಯುತ ಕೆಲಸ ಮಾಡುತ್ತೀರಿ ಎಂಬುದರ ಮೇಲೆ ಅಳೆಯಬೇಕು. ವೈಯಕ್ತಿಕ ಬದುಕನ್ನು ಗೌರವಿಸುವವರು ಕೆಲಸದಲ್ಲೂ ಪ್ರಾಮಾಣಿಕತೆ ಹಾಗೂ ಸ್ಪಷ್ಟತೆ ಹೊಂದಿರುತ್ತಾರೆ" ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.

ಮತ್ತೊಬ್ಬರು ಪ್ರತಿಕ್ರಿಯಿಸಿ, "ಆರಂಭದಲ್ಲೇ ಎಲ್ಲದಕ್ಕೂ 'ಎಸ್' ಎಂದು ಹೇಳಿ ನಂತರ ಪಶ್ಚಾತ್ತಾಪ ಪಡುವ ಬದಲು, ನಮ್ಮ ನಿರೀಕ್ಷೆಗಳನ್ನು ಸ್ಪಷ್ಟವಾಗಿ ಹೇಳುವುದು ಉತ್ತಮ. ಗಡಿಗಳನ್ನು ನಿಗದಿಪಡಿಸಿಕೊಳ್ಳುವುದು ಕಾರ್ಯಕ್ಷಮತೆಯನ್ನ ಸೀಮಿತಗೊಳಿಸುವುದಿಲ್ಲ, ಬದಲಾಗಿ ಅದನ್ನು ದೀರ್ಘಕಾಲಿಕವಾಗಿ ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+