Delhi Flood News: ದೆಹಲಿ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ಮೂವರು ಬಾಲಕರು ಶವವಾಗಿ ಪತ್ತೆ
ನವದೆಹಲಿ, ಜುಲೈ 14: ರಾಷ್ಟ್ರ ರಾಜಧಾನಿ ದೆಹಲಿಯು ಭೀಕರ ಪ್ರವಾಹಕ್ಕೆ ಸಿಲುಕಿದೆ. ರಾಜ್‌ಘಾಟ್, ಕೆಂಪುಕೋಟೆ, ಸುಪ್ರೀಂ ಕೋರ್ಟ್‌ನಂತರ ಪ್ರಮುಖ ಸ್ಥಳಗಳು ಜಲಾವೃತವಾಗಿವೆ. ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದೆ. ಯಮುನಾ ನದಿಯ ಆರ್ಭಟ ಮತ್ತಷ್ಟು ಹೆಚ್ಚಾಗುತ್ತಿದೆ. ಜನರ ಜೀವನ ಸಂಪುರ್ಣ ಅಸ್ತವ್ಯಸ್ತಗೊಂಡಿದೆ. ಇದೆಲ್ಲದರ ನಡುವೆ ಸಾವುಗಳು ಸಂಭವಿಸುತ್ತಿದೆ.
ಈಶಾನ್ಯ ದೆಹಲಿಯ ಪ್ರವಾಹದ ನೀರಿನಲ್ಲಿ ಈಜಲು ಪ್ರಯತ್ನಿಸುತ್ತಿದ್ದ ಮೂವರು ಬಾಲಕರು ಇಂದು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
10 ವರ್ಷದ ಒಬ್ಬ ಬಾಲಕ ಮತ್ತು 13 ವರ್ಷದ ಇಬ್ಬರು ಬಾಲಕರು ಪ್ರವಾಹದಲ್ಲಿ ಸಿಲುಕಿ ಮೃತಪಟ್ಟಿದ್ದಾರೆ. ಇಂದು ಸಂಜೆ 4:30 ರ ಸುಮಾರಿಗೆ ಈ ಘಟನೆ ನಡೆದಿದೆ. ಈಶಾನ್ಯ ದೆಹಲಿಯ ಮುಕುಂದಪುರ ಪ್ರದೇಶದಲ್ಲಿನ ಮೆಟ್ರೋ ನಿಲ್ದಾಣದ ಬಳಿ ಈ ಬಾಲಕರು ಶವವಾಗಿ ಪತ್ತೆಯಾಗಿದ್ದಾರೆ.

ಮೇಟ್ರೋ ನಿಲ್ದಾಣದ ಬಳಿ ಇರುವ ಹಳ್ಳದಲ್ಲಿ ಉಂಟಾದ ಪ್ರವಾಹ ಉಂಟಾಗಿದೆ. ಅದರಲ್ಲಿ ಸಿಲುಕಿ ಮೂವರು ಬಾಲಕರು ಪ್ರಾಣ ಕಳೆದುಕೊಂಡಿದ್ದಾರೆ. ಅವರು ಈಜಾಡಲು ಈ ಹಳ್ಳಕ್ಕೆ ದುಮುಕಿದ್ದಾರೆ. ನಂತರ ಅದರಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದಾರೆ.
ಹಳ್ಳದಿಂದ ಅವರನ್ನು ಹೊರತೆಗೆದು ಬಿಜೆಆರ್‌ಎಂ ಆಸ್ಪತ್ರೆಗೆ ಸಾಗಿಸಲಾಗಿದೆ. ಅಲ್ಲಿ ಮೂವರೂ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರವಾಹದಲ್ಲಿ ಸಾವನ್ನಪ್ಪಿದ ಬಾಲಕರನ್ನು ಪಿಯೂಷ್ (13), ನಿಖಿಲ್ (10) ಮತ್ತು ಆಶಿಶ್ (13) ಎಂದು ಗುರುತಿಸಲಾಗಿದೆ. ಅವರೆಲ್ಲರೂ ಜಹಾಂಗೀರ್ಪುರಿ ಎಚ್-ಬ್ಲಾಕ್ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ನಿರಂತರ ಮಳೆಯ ನಂತರ ಯಮುನಾ ನದಿ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ದೆಹಲಿಯ ಹಲವಾರು ಪ್ರದೇಶಗಳು ಜಲಾವೃತಗೊಂಡಿವೆ. ಇದು ಕಳೆದ 45 ವರ್ಷಗಳಲ್ಲಿ ದಾಖಲಾದ ಅತಿ ಹೆಚ್ಚು ಮಳೆಯ ಪ್ರಮಾಣವಾಗಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಇಂದು ಐಟಿಒ ಪ್ರದೇಶವನ್ನು ಪರಿಶೀಲಿಸಿದರು. ಈ ಪ್ರದೇಶದಲ್ಲಿ ಪ್ರವಾಹ ಉಂಟಾಗಿ ನೀರು ನುಗ್ಗಿದೆ.
ಐಒಟಿ ಬ್ಯಾರೇಜ್‌ನ 32 ಗೇಟ್‌ಗಳಲ್ಲಿ ಐದು ಗೇಟುಗಳು ಮುಚ್ಚ ಹೋಗಿವೆ. ಇದು ಹೆಚ್ಚಿನ ಪ್ರವಾಹಕ್ಕೆ ಕಾರಣವಾಗಿದೆ. ಇಲ್ಲಿನ ಒಳಚರಂಡಿಗಳು ತುಂಬಿ ಹರಿಯುತ್ತಿವೆ. ಮುಚ್ಚಲಾಗಿರುವ ಗೇಟುಗಳನ್ನು ತೆರೆಯಲು ಸೇನೆ ಮತ್ತು ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿ ಹರಸಾಹಸ ಪಡುತ್ತಿದೆ. ಆದರು, ಮುಚ್ಚಿಹೋಗಿರುವ ಗೇಟುಗಳನ್ನು ತೆರೆಯಲು ಯಶಸ್ವಿಯಾಗಿಲ್ಲವೆಂದು ತಿಳಿದುಬಂದಿದೆ.
ಕೇಂದ್ರ ಜಲ ಆಯೋಗದ ಅಂಕಿಅಂಶಗಳ ಪ್ರಕಾರ ಯಮುನಾ ನದಿಯಲ್ಲಿ ನೀರಿನ ಮಟ್ಟ 208.17 ಮೀಟರ್ ಎಂದು ದಾಖಲಾಗಿದೆ.
ಇತರ ರಾಜ್ಯಗಳಿಂದ ಯಮುನಾ ನದಿಗೆ ಭಾರೀ ಪ್ರಮಾಣದ ನೀರು ಹರಿದುಬರುತ್ತಿರುವ ಕಾರಣ ದೆಹಲಿಯಲ್ಲಿ ಪ್ರವಾಹ ಉಂಟಾಗಿದೆ ಎಂದು ಎಎಪಿ ಹೇಳಿದೆ.












Click it and Unblock the Notifications