Delhi Election 2025 Result: ದೆಹಲಿ ಚುನಾವಣೆಯಲ್ಲಿ ಶಕ್ತಿ ಪ್ರದರ್ಶಿಸಿದ ಸಚಿವ ವಿ. ಸೋಮಣ್ಣ
ನವದೆಹಲಿ, ಫೆಬ್ರವರಿ 09: ಶನಿವಾರ ದೆಹಲಿ ವಿಧಾನಸಭೆ ಚುನಾವಣೆ 2025ರ ಫಲಿತಾಂಶ ಘೋಷಣೆಯಾಗಿದೆ. ರಾಜ್ಯದ ಆಡಳಿತ ಪಕ್ಷವಾಗಿದ್ದ ಎಎಪಿ ಹೀನಾಯ ಸೋಲು ಕಂಡಿದೆ. ಬಿಜೆಪಿ 48 ಸೀಟುಗಳಲ್ಲಿ ಗೆಲುವು ಸಾಧಿಸಿದ್ದು, ಸರ್ಕಾರ ರಚನೆ ಮಾಡುವ ತಯಾರಿ ಆರಂಭಿಸಿದೆ. 27 ವರ್ಷಗಳ ಬಳಿಕ ಬಿಜೆಪಿಗೆ ರಾಷ್ಟ್ರ ರಾಜಧಾನಿಯ ಅಧಿಕಾರ ಸಿಕ್ಕಿದೆ. ಮುಖ್ಯಮಂತ್ರಿ ಯಾರು? ಎಂಬುದು ಸದ್ಯದ ಪ್ರಶ್ನೆ.
ಕರ್ನಾಟಕದಲ್ಲಿ ಸಂಘಟನಾ ಚತುರ ಎಂದು ಪ್ರಸಿದ್ಧಿಯಾಗಿರುವ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ದೆಹಲಿ ಚುನಾವಣೆಯಲ್ಲಿಯೂ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದಾರೆ. ತುಮಕೂರು ಸಂಸದರು ಉಸ್ತುವಾರಿವಹಿಸಿಕೊಂಡಿದ್ದ ದೆಹಲಿಯ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಯಗಳಿಸಿದ್ದಾರೆ.

70 ಸದಸ್ಯ ಬದಲ ದೆಹಲಿ ವಿಧಾನಸಭೆಯಲ್ಲಿ ಬಿಜೆಪಿ 48, ಎಎಪಿ 22 ಸ್ಥಾನಗಳಲ್ಲಿ ಜಯಗಳಿಸಿದೆ. ಕಾಂಗ್ರೆಸ್ ಸತತ ಮೂರನೇ ಬಾರಿ ಯಾವುದೇ ಸ್ಥಾನಗಳಿಸದೇ ತೀವ್ರ ಮುಖಭಂಗವನ್ನು ಅನುಭವಿಸಿದೆ. ಬಿಜೆಪಿ ಇನ್ನೂ ಸಹ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕಿದೆ.
ಪ್ರಚಾರ ಮಾಡಿದ್ದ ವಿ. ಸೋಮಣ್ಣ: ದೆಹಲಿ ಚುನಾವಣೆಯಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣಗೆ ನಂಗ್ಲೋಯಿ ಜಾಟ್ ಕ್ಷೇತ್ರದ ಉಸ್ತುವಾರಿ ವಹಿಸಲಾಗಿತ್ತು. ಮನೋಜ್ ಕುಮಾರ್ ಶೋಕೀನ್ ಈ ಕ್ಷೇತ್ರದ ಅಭ್ಯರ್ಥಿಯಾಗಿದ್ದರು. ವಿ. ಸೋಮಣ್ಣ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದರು.
ಮನೆ-ಮನೆ ಪ್ರಚಾರ ನಡೆಸಿ ದೇಶದ ಪ್ರಗತಿಯೊಂದಿಗೆ ರಾಷ್ಟ್ರದ ರಾಜಧಾನಿ ದೆಹಲಿಯ ಪ್ರಗತಿಗಾಗಿ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸಿ, ಮನೋಜ್ ಕುಮಾರ್ ಶೋಕೀನ್ ಗೆಲ್ಲಿಸುವಂತೆ ಮನವಿ ಮಾಡಿದ್ದರು.
ಚುನಾವಣೆಯಲ್ಲಿ ಮನೋಜ್ ಕುಮಾರ್ ಶೋಕೀನ್ 75,272 ಮತಗಳನ್ನು ಪಡೆದು ಜಯಗಳಿಸಿದ್ದಾರೆ. 26,251 ಮತಗಳ ಅಂತರದಲ್ಲಿ ಅವರು ಎಎಪಿಯ ರಘುವಿಂದರ್ ಶೋಕೀನ್ ಸೋಲಿಸಿದ್ದಾರೆ. ಈ ಮೂಲಕ ವಿ. ಸೋಮಣ್ಣ ಸಂಘಟನಾ ಶಕ್ತಿ ದೆಹಲಿ ಚುನಾವಣೆಯಲ್ಲಿ ಸಾಬೀತಾಗಿದೆ.
ದೆಹಲಿ ಚುನಾವಣೆ ಫಲಿತಾಂಶದ ಕುರಿತು ಪ್ರತಿಕ್ರಿಯೆ ನೀಡಿರುವ ವಿ. ಸೋಮಣ್ಣ, "ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ಚಿಂತನೆಯ ಕಾರಣಕ್ಕೆ ದೆಹಲಿಯ ಚುನಾವಣೆಯಲ್ಲಿ ನಾವು ಗೆಲುವು ಸಾಧಿಸಿದ್ದೇವೆ. ನನಗೆ ಉಸ್ತುವಾರಿ ನೀಡಿದ್ದ ಕ್ಷೇತ್ರದಲ್ಲಿಯೂ ಗೆದ್ದಿದ್ದೇವೆ. ಬಿಜೆಪಿ ಈ ಹಿಂದೆ ಕ್ಷೇತ್ರದಲ್ಲಿ ಗೆದ್ದಿರಲಿಲ್ಲ" ಎಂದು ಹೇಳಿದರು.
"ದೆಹಲಿಯ ಜನರು ತೀರ್ಮಾನ ಮಾಡಿಯೇ ಬಿಜೆಪಿಯನ್ನು ಗೆಲ್ಲಿಸಿದ್ದಾರೆ. ನನಗೂ ಒಂದು ಕ್ಷೇತ್ರದ ಉಸ್ತುವಾರಿ ನೀಡಿದ್ದರು. ಅಲ್ಲಿ ಪ್ರಚಾರವನ್ನು ನಡೆಸಿದ್ದೆ. ಆ ಕ್ಷೇತ್ರದಲ್ಲೂ ನಮ್ಮ ಪಕ್ಷ ಗೆದ್ದಿದೆ" ಎಂದು ವಿ. ಸೋಮಣ್ಣ ಸಂತಸ ವ್ಯಕ್ತಪಡಿಸಿದ್ದಾರೆ.
2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ವಿ. ಸೋಮಣ್ಣ ವರುಣಾ ಹಾಗೂ ಚಾಮರಾಜನಗರ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಎರಡರಲ್ಲೂ ಕೂಡ ಸೋಲು ಕಂಡಿದ್ದರು. 2024ರ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಅವರಿಗೆ ತುಮಕೂರು ಕ್ಷೇತ್ರದ ಟಿಕೆಟ್ ನೀಡಿತ್ತು. ಚುನಾವಣೆಯಲ್ಲಿ ಗೆದ್ದ ಅವರು ಪ್ರಧಾನಿ ನರೇಂದ್ರ ಮೋದಿ 3.0 ಸರ್ಕಾರದಲ್ಲಿ ಸಚಿವರಾದರು.












Click it and Unblock the Notifications