Delhi Assembly Election 2025: ಆಮ್ ಆದ್ಮಿ ಪಕ್ಷಕ್ಕೆ ಮಾಡು ಇಲ್ಲವೇ ಮಡಿ ಚುನಾವಣೆ

ನವದೆಹಲಿ, ಜನವರಿ 25: ದೆಹಲಿ ವಿಧಾನಸಭೆ ಚುನಾವಣೆ-2025ರ ಕಣ ಕುತೂಹಲಕ್ಕೆ ಕಾರಣವಾಗಿದೆ. ಫೆಬ್ರವರಿ 5ರಂದು 70 ಸದಸ್ಯ ಬಲದ ವಿಧಾನಸಭೆಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ, ಫೆಬ್ರವರಿ 8ರಂದು ಫಲಿತಾಂಶ ಘೋಷಣೆಯಾಗಲಿದೆ. ರಾಜ್ಯದ ಆಡಳಿತ ಪಕ್ಷವಾದ ಎಎಪಿಗೆ ಈ ಬಾರಿಯ ಚುನಾವಣೆ ಸವಾಲು ಮಾತ್ರವಲ್ಲ ನಿರ್ಣಾಯಕವಾಗಿದೆ. ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತೇವೆ ಎಂದು ಅಧಿಕಾರಕ್ಕೆ ಬಂದ ಪಕ್ಷ ಈಗ ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿದೆ.

ದೆಹಲಿಯ 70 ಸೀಟುಗಳ ಚುನಾವಣಾ ಕಣದಲ್ಲಿ 699 ಅಭ್ಯರ್ಥಿಗಳಿದ್ದಾರೆ. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 36. 2015, 2020ರಲ್ಲಿ ಸುಲಭವಾಗಿ ಗೆದ್ದು ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರ ಹಿಡಿದ ಎಎಪಿ ಪಕ್ಷಕ್ಕೆ ಈ ಬಾರಿ ಸವಾಲು ಎದುರಾಗಿದೆ. ಬಿಜೆಪಿ, ಕಾಂಗ್ರೆಸ್ ಚುನಾವಣೆಯಲ್ಲಿ ಪಕ್ಷಕ್ಕೆ ಎದುರಾಳಿಗಳು.

Delhi Assembly Elections 2025 Do Or Die Battle For AAP

ಮುಖ್ಯಮಂತ್ರಿಯಾಗಿದ್ದ ಅರವಿಂದ ಕೇಜ್ರಿವಾಲ್, ಮನೀಷ್ ಸಿಸೋಡಿಯಾ ಸೇರಿದಂತೆ ಎಎಪಿ ಪಕ್ಷದ ನಾಯಕರು ದೆಹಲಿ ಅಬಕಾರಿ ನೀತಿ ಹಗರಣದ ಆರೋಪದಲ್ಲಿ ಜೈಲು ವಾಸ ಅನುಭವಿಸಿದರು. ಜೈಲಿನಿಂದ ಬಿಡುಗಡೆಯಾದ ಬಳಿಕ ಅರವಿಂದ ಕೇಜ್ರಿವಾಲ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅತಿಶಿ ರಾಜ್ಯದ ಹಾಲಿ ಮುಖ್ಯಮಂತ್ರಿಯಾಗಿದ್ದಾರೆ.

ಮಾಡು ಇಲ್ಲವೇ ಮಡಿ ಚುನಾವಣೆ: 2025ರ ದೆಹಲಿ ವಿಧಾನಸಭೆ ಚುನಾವಣೆ ಎಎಪಿಗೆ ಮಾಡು ಇಲ್ಲವೇ ಮಡಿ ಎಂಬ ಪರಿಸ್ಥಿತಿ ತಂದಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ. ಎಎಪಿ ಮತ್ತೆ ಅಧಿಕಾರಕ್ಕೆ ಬಂದರೆ ಅರವಿಂದ ಕೇಜ್ರಿವಾಲ್ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಎಎಪಿ ಪಕ್ಷ ಈಗಾಗಲೇ ಘೋಷಣೆ ಮಾಡಿದೆ.

ಪಕ್ಷದ ನಾಯಕರ ವಿರುದ್ಧದ ಭ್ರಷ್ಟಾಚಾರದ ಆರೋಪಗಳೇ ಎಎಪಿಗೆ ಮುಳುವಾಗಲಿದೆ ಎಂದು ಅಂದಾಜಿಸಲಾಗುತ್ತಿದೆ. ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ಆರೋಪಗಳನ್ನು ನೋಡಿಯೇ ಪಾರದರ್ಶಕ ಸರ್ಕಾರಕ್ಕಾಗಿ ಎಎಪಿಯನ್ನು ಎರಡು ಚುನಾವಣೆಗಳಲ್ಲಿ ಜನರು ಬೆಂಬಲಿಸಿದ್ದರು. ಸ್ಪಷ್ಟ ಬಹುಮತವನ್ನು ನೀಡಿದ್ದರು. ಆದರೆ ಈಗ ಎಎಪಿ ಸವಾಲು ಎದುರಿಸುತ್ತಿದೆ.

27 ವರ್ಷಗಳ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರ ಹಿಡಿಯಬೇಕು ಎಂದು ತಂತ್ರ ರೂಪಿಸಿರುವ ಬಿಜೆಪಿ ಅರವಿಂದ ಕೇಜ್ರಿವಾಲ್ ಮತ್ತು ಎಎಪಿ ಪಕ್ಷದ ಭ್ರಷ್ಟಾಚಾರದ ಆರೋಪಗಳನ್ನೇ ಚುನಾವಣಾ ಪ್ರಚಾರದ ಪ್ರಮುಖ ಅಸ್ತ್ರವನ್ನಾಗಿ ಮಾಡಿಕೊಂಡಿದೆ. ಮತ್ತೊಂದು ಕಡೆ ದೆಹಲಿಯಲ್ಲಿ ತನ್ನ ಗತವೈಭವನ್ನು ಮರಳಿ ಪಡೆಯಬೇಕು ಎಂದು ಕಾಂಗ್ರೆಸ್ ಪ್ರಯತ್ನ ನಡೆಸಿದೆ.

ಅರವಿಂದ ಕೇಜ್ರಿವಾಲ್ ಸಮಾಜದ ವಿವಿಧ ಸಮುದಾಯವನ್ನು ಗುರಿಯಾಗಿಸಿಕೊಂಡು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡುವ ಮೂಲಕ ಬಿಜೆಪಿ, ಕಾಂಗ್ರೆಸ್ ವಿರುದ್ಧ ಹೋರಾಡುತ್ತಿದ್ದಾರೆ. ಎಎಪಿ ಈ ಬಾರಿಯ ಚುನಾವಣೆಯಲ್ಲಿ ಸನಾತನ ಮಂತ್ರದ ಮೊರೆ ಹೋಗಿದ್ದು, ಹಿಂದೂಗಳ ಮತಗಳ ಮೇಲೆಯೂ ಕಣ್ಣಿಟ್ಟಿದೆ.

ಅರ್ಚಕರು, ಸಿಖ್ ಗುರುದ್ವಾರಗಳು, ಆಟೋ ಚಾಲಕರು, ಕೊಳಗೇರಿ ನಿವಾಸಿಗಳು, ವಿದ್ಯಾರ್ಥಿಗಳು, ಮಹಿಳೆಯರನ್ನು ಓಲೈಸುವ ಮೂಲಕ ಈ ಬಾರಿ ಗೆದ್ದು ದೆಹಲಿಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಬೇಕು ಎಂದು ಎಎಪಿ ಪಕ್ಷ ತಂತ್ರ ರೂಪಿಸಿ, ಪ್ರಚಾರದ ಕಣಕ್ಕಿಳಿದಿದೆ.

ದೆಹಲಿ ಅಬಕಾರಿ ನೀತಿ ಹಗರಣದ ಆರೋಪದಲ್ಲಿ ಜೈಲು ಸೇರಿದರೂ ಸಹ ಅರವಿಂದ ಕೇಜ್ರಿವಾಲ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿಲ್ಲ. ಜೈಲಿನಿಂದಲೇ ಆಡಳಿತ ನಡೆಸುವೆ ಎಂದು ಹಠ ಮಾಡಿದರು, ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಪಕ್ಷ ಅಧಿಕಾರಕ್ಕೆ ಎಷ್ಟು ಅಂಟಿಕೊಂಡಿದೆ ಎಂಬುದನ್ನು ತೋರಿಸಿದೆ ಎಂದು ಜನರು ಹೇಳುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+