Delhi Elections 2025: ಮಧ್ಯಮ ವರ್ಗದವರಿಗೆ ಪ್ರಣಾಳಿಕೆ ಬಿಡುಗಡೆ ಮಾಡಿದ ಕೇಜ್ರಿವಾಲ್
ನವದೆಹಲಿ, ಜನವರಿ 22: ದೆಹಲಿ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಎಎಪಿ ಮುಖ್ಯಸ್ಥ ಹಾಗೂ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಧ್ಯಮ ವರ್ಗಕ್ಕಾಗಿ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.
ಈ ಬಾರಿ ಮಧ್ಯಮ ವರ್ಗದ ಕುಟುಂಬಗಳತ್ತ ಗಮನ ಹರಿಸಿರುವ ಅರವಿಂದ್ ಕೇಜ್ರಿವಾಲ್ ಅವರು, ಮಧ್ಯಮ ವರ್ಗದ ಚುನಾವಣಾ ಪ್ರಣಾಳಿಕೆಯಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಉಚಿತ ಚಿಕಿತ್ಸೆ ನೀಡುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೇ ಮಧ್ಯಮ ವರ್ಗದ ನಾಗರಿಕರಿಗೆ ಕೇಂದ್ರ ಸರ್ಕಾರವು ಏನನ್ನೂ ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಆರೋಪಿಸಿದರು.

ಮಧ್ಯಮ ವರ್ಗದ ಮತಕ್ಕಾಗಿ ಕೆಲವರು ಪ್ರಯತ್ನಿಸಿದ್ರೆ, ಇನ್ನೊಂದು ವರ್ಗ ತುಳಿಯುತ್ತಿದೆ. 75 ವರ್ಷಗಳಲ್ಲಿ ಒಂದೊಂದು ಪಕ್ಷ ಅಧಿಕಾರಕ್ಕೆ ಬಂತು. ಪ್ರತಿಯೊಂದು ಸರ್ಕಾರಗಳು ಮಧ್ಯಮ ವರ್ಗವನ್ನು ಹತ್ತಿಕ್ಕಿವೆ. ಮಧ್ಯಮ ವರ್ಗದವರಿಗೆ ಏನನ್ನೂ ಮಾಡುವುದಿಲ್ಲ ಆದರೆ ತೆರಿಗೆ ಅಸ್ತ್ರವನ್ನು ಚಾಲನೆ ಮಾಡಿದ್ದು, ಮಧ್ಯಮ ವರ್ಗದವರು ಸರ್ಕಾರದ ಎಟಿಎಂ ಆಗಿ ಮಾರ್ಪಟ್ಟಿದ್ದಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಇನ್ನೂ ಬಿಜೆಪಿ ಮಂಗಳವಾರ ಎರಡನೇ ಪ್ರಣಾಳಿಕೆಯನ್ನ ಬಿಡುಗಡೆ ಮಾಡಿದೆ. ಬಿಜೆಪಿ ಲೋಕಸಭಾ ಸಂಸದ ಅನುರಾಗ್ ಠಾಕೂರ್ ಅವರು ದೆಹಲಿಯ ಇತರ ಹಿರಿಯ ಬಿಜೆಪಿ ನಾಯಕರ ಸಮ್ಮುಖದಲ್ಲಿ ಸಂಕಲ್ಪ ಪತ್ರವನ್ನು ಬಿಡುಗಡೆ ಮಾಡಿದ್ದು, ಮತದಾರರಿಗೆ ಭರ್ಜರಿ ಭರವಸೆಯನ್ನ ಬಿಜೆಪಿ ನೀಡಿದೆ. ಎರಡನೇ ಪ್ರಣಾಳಿಕೆಯು ಸರ್ಕಾರಿ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಆಟೋ ರಿಕ್ಷಾ ಚಾಲಕರು ಮತ್ತು ಗೃಹ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪನೆ ಕುರಿತು ಬಿಜೆಪಿ ಭರವಸೆ ನೀಡಿದೆ.
ದೆಹಲಿಯ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಅಗತ್ಯವಿರುವ ವಿದ್ಯಾರ್ಥಿಗಳಿಗೆ ಕೆಜಿಯಿಂದ ಪಿಜಿವರೆಗೆ ಉಚಿತ ಶಿಕ್ಷಣವನ್ನು ನೀಡುತ್ತೇವೆ. ನಾವು ದೆಹಲಿಯ ಯುವಕರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ಒಂದು ಬಾರಿ 15,000 ರೂಪಾಯಿಗಳ ಆರ್ಥಿಕ ಸಹಾಯವನ್ನು ನೀಡುತ್ತೇವೆ ಮತ್ತು ಎರಡು ಬಾರಿ ಪ್ರಯಾಣ ಮತ್ತು ಅರ್ಜಿ ಶುಲ್ಕವನ್ನು ಮರುಪಾವತಿ ಮಾಡುತ್ತೇವೆ. ಇದು ಮೋದಿ ಕಿ ಗ್ಯಾರಂಟಿ ಎಂದು ಬಿಜೆಪಿ ಲೋಕಸಭಾ ಸಂಸದ ಅನುರಾಗ್ ಠಾಕೂರ್ ಅವರು ತಿಳಿಸಿದ್ದಾರೆ.
ಮೊದಲ ಪ್ರಣಾಳಿಕೆಯಲ್ಲಿನ ಪ್ರಮುಖ ಭರವಸೆಗಳಲ್ಲಿ, ಬಿಜೆಪಿಯು ಮಹಿಳೆಯರಿಗೆ ಕಲ್ಯಾಣ ಉಪಕ್ರಮಗಳ ಸರಣಿಯನ್ನು ಘೋಷಿಸಿತು, ಇದು ಗರ್ಭಿಣಿಯರ ಆರೋಗ್ಯ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಮಾತೃತ್ವ ಸುರಕ್ಷಾ ಯೋಜನೆಯಡಿ ಆರು ಪೌಷ್ಟಿಕಾಂಶದ ಕಿಟ್‌ಗಳು ಮತ್ತು 21,000 ರೂ ನೀಡುವುದಾಗಿ ಭರವಸೆ ನೀಡಿದೆ. ಮಹಿಳಾ ಸಮೃದ್ಧಿ ಯೋಜನೆ ಅಡಿಯಲ್ಲಿ ದೆಹಲಿಯ ಮಹಿಳೆಯರಿಗೆ 2,500 ರೂ ನೀಡಲಾಗುವುದು ಎಂದು ತಿಳಿಸಿದ್ದಾರೆ.












Click it and Unblock the Notifications