ದೆಹಲಿ ಏಮ್ಸ್‌ನ ಸರ್ವರ್ ಡೌನ್, ಸೈಬರ್ ವೈರಸ್ ದಾಳಿ ಶಂಕೆ
ನವದೆಹಲಿ, ನವೆಂಬರ್ 23: ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆಸ್ಪತ್ರೆಯ ಸರ್ವರ್ ರಾಮ್ಸ್‌ವೇರ್ (ಒಂದು ಬಗೆಯ ಸೈಬರ್ ಸಾಫ್ಟ್‌ವೇರ್ ವೈರಸ್) ದಾಳಿಗೆ ಒಳಗಾಗಿರಬಹುದು ಎಂದು ಆಸ್ಪತ್ರೆ ತಿಳಿಸಿದೆ.
ಆಸ್ಪತ್ರೆಯ ಸರ್ವರ್‌ಗಳು ಬೆಳಗ್ಗೆ 7ರಿಂದಲೇ ಕೆಟ್ಟು ನಿಂತಿದ್ದರಿಂದ ಆಸ್ಪತ್ರೆಯ ಎಲ್ಲ ವಿಭಾಗಗಳು ಕೈಯಿಂದಲೇ ಕಾರ್ಯನಿರ್ವಹಿಸುತ್ತಿವೆ. ಬುಧವಾರ ಸಂಜೆ ಆಸ್ಪತ್ರೆಯ ಸಿಸ್ಟಮ್ ಅನ್ನು ಮರುಚಾಲನೆಗೊಳಿಸಲು ಕೆಲಸ ಮಾಡುತ್ತಿರುವ ನ್ಯಾಷನಲ್ ಇನ್ಫೋಮ್ಯಾಟಿಕ್ಸ್ ಸೆಂಟರ್ "ಇದು ಸೈಬರ್ ವೈರಸ್ ದಾಳಿಯಾಗಿರಬಹುದು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗುತ್ತದೆ'' ಎಂದು ತಿಳಿಸಿದೆ.
ಡಿಜಿಟಲ್ ಸೇವೆಗಳನ್ನು ಮರುಚಾಲನೆಗೊಳಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಅಲ್ಲದೆ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (ಸಿಇಆರ್‌ಟಿ-ಇನ್) ಮತ್ತು ರಾಷ್ಟ್ರೀಯ ಮಾಹಿತಿ ಕೇಂದ್ರದಿಂದ ಬೆಂಬಲವನ್ನು ಪಡೆಯಲಾಗುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ರಾಮ್ಸ್‌ವೇರ್ ಎನ್ನುವುದು ದುರುದ್ದೇಶಪೂರಿತ ಸಾಫ್ಟ್‌ವೇರ್ ವೈರಸ್ ಆಗಿದ್ದು, ಬಳಕೆದಾರರು ಅಥವಾ ಸಂಸ್ಥೆಯು ಅವರ ಕಂಪ್ಯೂಟರ್‌ನಲ್ಲಿರುವ ಫೈಲ್‌ಗಳಿಗೆ ಪ್ರವೇಶವನ್ನು ನಿರಾಕರಿಸಲು ವಿನ್ಯಾಸಗೊಳಿಸಲಾಗಿರುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ, ಸೈಬರ್ ಹ್ಯಾಕರ್‌ಗಳು ಫೈಲ್‌ಗಳಿಗೆ ಪ್ರವೇಶವನ್ನು ಅನುಮತಿಸಲು ಹಣವನ್ನು ಕೋರುತ್ತಾರೆ.
ಪ್ರತಿ ವರ್ಷ 1.5 ಮಿಲಿಯನ್ ಹೊರರೋಗಿಗಳಿಗೆ ಮತ್ತು 80,000 ಒಳರೋಗಿಗಳಿಗೆ ಸೇವೆ ಸಲ್ಲಿಸುವ ದೆಹಲಿ ನಗರದ ಅತಿದೊಡ್ಡ ಆಸ್ಪತ್ರೆಯು ಬೆಳಗ್ಗೆಯಿಂದ ನಿಧಾನಗತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದರಿಂದ ಪ್ರತಿ ವಿಭಾಗದಲ್ಲೂ ಉದ್ದನೆ ಸರತಿ ಸಾಲುಗಳು ಸೃಷ್ಟಿಯಾಗಿದೆ. ನೋಂದಾವಣೆ ವಿಭಾಗವು ಅತ್ಯಂತ ಕೆಟ್ಟ ಪರಿಣಾಮ ಬೀರಿದೆ. ಅಲ್ಲಿ ನೂರಾರು ಜನರು ತಮ್ಮನ್ನು ನೋಂದಾಯಿಸಿಕೊಳ್ಳಲು ಬೆಳಗಿನಿಂದಲೇ ಸರತಿ ಸಾಲಿನಲ್ಲಿ ನಿಂತಿದ್ದಾರೆ.

ಅಲ್ಲದೆ, ಸ್ಮಾರ್ಟ್ ಲ್ಯಾಬ್, ವರದಿ ತಯಾರಿಕೆ, ಬಿಲ್ಲಿಂಗ್ ಮತ್ತು ಅಪಾಯಿಂಟ್‌ಮೆಂಟ್ ವ್ಯವಸ್ಥೆಗಳ ಮೇಲೂ ಇದು ಪರಿಣಾಮ ಬೀರಿದೆ. ಭವಿಷ್ಯದಲ್ಲಿ ಇಂತಹ ದಾಳಿಗಳು ನಡೆಯದಂತೆ ಏಮ್ಸ್ ಮತ್ತು ಎನ್‌ಐಸಿ ಮುನ್ನೆಚ್ಚರಿಕೆ ವಹಿಸಲಿದೆ ಎಂದು ಆಸ್ಪತ್ರೆ ಹೇಳಿಕೆಯಲ್ಲಿ ತಿಳಿಸಿದೆ. ಏಮ್ಸ್ ವೆಬ್‌ಸೈಟ್‌ನ ಪ್ರಕಾರ, ಆಸ್ಪತ್ರೆಯನ್ನು 1956ರಲ್ಲಿ ನವದೆಹಲಿಯಲ್ಲಿ ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಯಾಗಿ ಸ್ಥಾಪಿಸಲಾಯಿತು. ಇದು ಭಾರತದಲ್ಲಿನ ಆರೋಗ್ಯ ವ್ಯವಸ್ಥೆಯ ಎಲ್ಲಾ ಅಂಶಗಳಲ್ಲಿ ಉತ್ಕೃಷ್ಟತೆಯ ಅಭಿವೃದ್ಧಿ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ಕಂಪ್ಯೂಟರ್ ಸೌಲಭ್ಯವನ್ನು 1978 ರಲ್ಲಿ ಸಣ್ಣ ರೀತಿಯಲ್ಲಿ ಇಲ್ಲಿ ಪ್ರಾರಂಭಿಸಲಾಯಿತು.












Click it and Unblock the Notifications