ದೆಹಲಿ: ಮೊದಲ ಬಾರಿ ಗೆದ್ದ ಮಹಿಳೆಯನ್ನು ಮೇಯರ್ ಅಭ್ಯರ್ಥಿಯಾಗಿ ಘೋಷಿಸಿದ ಎಎಪಿ
ನವದೆಹಲಿ, ಡಿಸೆಂಬರ್ 23: ಆಮ್ ಆದ್ಮಿ ಪಾರ್ಟಿ (ಎಎಪಿ) ಶುಕ್ರವಾರ ಪೂರ್ವ ಪಟೇಲ್ ನಗರ ವಾರ್ಡ್‌ನಿಂದ ಮೊದಲ ಬಾರಿಗೆ ಗೆದ್ದಿರುವ ಕೌನ್ಸಿಲರ್ ಶೆಲ್ಲಿ ಒಬೆರಾಯ್ (39) ಅವರನ್ನು ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ಮೇಯರ್ ಹುದ್ದೆಗೆ ಅಭ್ಯರ್ಥಿಯಾಗಿ ಹೆಸರಿಸಿದೆ.
ಎಎಪಿ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜಕೀಯ ವ್ಯವಹಾರಗಳ ಸಮಿತಿಯ ಸಭೆಯಲ್ಲಿ ಈ ತೀರ್ಮಾಣವನ್ನು ಕೈಗೊಳ್ಳಲಾಗಿದೆ.
ಉಪಮೇಯರ್ ಹುದ್ದೆಗೆ ಚಾಂದಿನಿ ಮಹಲ್ ವಾರ್ಡ್‌ನ ಕೌನ್ಸಿಲರ್ ಆಲೆ ಮೊಹಮ್ಮದ್ ಇಕ್ಬಾಲ್ ಅವರ ಹೆಸರನ್ನು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಪಂಕಜ್ ಗುಪ್ತಾ ಘೋಷಿಸಿದರು.

ಒಬೆರಾಯ್ ಅವರು ಚುನಾವಣೆಗೆ ಸ್ಪರ್ಧಿಸುವ ಮೊದಲು ಸಂದರ್ಶಕ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಉಪಮೇಯರ್ ಅಭ್ಯರ್ಥಿ ಇಕ್ಬಾಲ್ ಎಎಪಿ ಶಾಸಕ ಶೋಯೆಬ್ ಇಕ್ಬಾಲ್ ಅವರ ಪುತ್ರ ಮತ್ತು ಎರಡನೇ ಬಾರಿ ಕೌನ್ಸಿಲರ್ ಆಗಿದ್ದಾರೆ. ಎಂಸಿಡಿಯ ಐದು ವರ್ಷಗಳ ಅಧಿಕಾರಾವಧಿಯಲ್ಲಿ ಮೊದಲ ಬಾರಿಗೆ ಮೇಯರ್ ಹುದ್ದೆಯು ಮಹಿಳಾ ಕೌನ್ಸಿಲರ್‌ಗೆ ಮೀಸಲಾಗಿದೆ.
ಜನವರಿ 6 ರಂದು ನಡೆಯಲಿರುವ ಮೊದಲ ಎಂಸಿಡಿ ಸಭೆಯಲ್ಲಿ 250 ಮಹಾನಗರ ಪಾಲಿಕೆ ಸದಸ್ಯರು ಪ್ರಮಾಣ ವಚನ ಸ್ವೀಕರಿಸಲಿದ್ದು, ಸ್ಥಾಯಿ ಸಮಿತಿಯ ಆರು ಸದಸ್ಯರ ಜೊತೆಗೆ ಮೇಯರ್ ಮತ್ತು ಉಪಮೇಯರ್ ಅವರನ್ನು ಆಯ್ಕೆ ಮಾಡುತ್ತಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೇಯರ್ ಮತ್ತು ಉಪಮೇಯರ್ ಹುದ್ದೆಗೆ ಎರಡು ಹೆಸರು ಸೇರಿದಂತೆ ಆರು ಹೆಸರುಗಳನ್ನು ಪಕ್ಷ ಅಂತಿಮಗೊಳಿಸಿದೆ. ಸ್ಥಾಯಿ ಸಮಿತಿ ಸದಸ್ಯರ ಚುನಾವಣೆಗೆ ಪಕ್ಷವು ನಾಲ್ವರನ್ನು ಅಭ್ಯರ್ಥಿಗಳಾಗಿ ಹೆಸರಿಸಿದೆ - ಶ್ರೀರಾಮ ಕಾಲೋನಿಯಿಂದ ಮೊಹಮ್ಮದ್ ಅಮಿಲ್ ಮಲಿಕ್, ಫತೇ ನಗರದಿಂದ ರಮೀಂದರ್ ಕೌರ್, ಸುಂದರ್ ನಗರಿಯಿಂದ ಮೋಹಿನಿ ಜೀನ್ವಾಲ್ ಮತ್ತು ದರಿಯಾಗಂಜ್‌ನಿಂದ ಸಾರಿಕಾ ಚೌಧರಿ ಅವರು ನಾಲ್ವರು ಅಭ್ಯರ್ಥಿಗಳಾಗಿದ್ದಾರೆ.

ಜನವರಿ 6 ರಂದು ಆಯ್ಕೆಯಾಗುವ ಮೇಯರ್ ಏಪ್ರಿಲ್ ವರೆಗೆ ಅಧಿಕಾರದಲ್ಲಿ ಇರುತ್ತಾರೆ. ಏಪ್ರಿಲ್‌ನಲ್ಲಿ ಮತ್ತೊಮ್ಮೆ ಮೇಯರ್ ಚುನಾವಣೆ ನಡೆಯಲಿದೆ.
'ಚುನಾವಣೆಯು ರಹಸ್ಯ ಮತದಾನದ ಮೂಲಕ ನಡೆಯಲಿದೆ. ಅಡ್ಡ ಮತದಾನದ ಸಂದರ್ಭದಲ್ಲಿ ಯಾವುದೇ ಪಕ್ಷಾಂತರ ವಿರೋಧಿ ಕಾನೂನುಗಳು ಅನ್ವಯಿಸುವುದಿಲ್ಲ' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎಂಸಿಡಿ ಚುನಾವಣೆಯ ಫಲಿತಾಂಶಗಳನ್ನು ಡಿಸೆಂಬರ್ 7, 2022 ರಂದು ಪ್ರಕಟಿಸಲಾಯಿತು. 250 ಸ್ಥಾನಗಳಲ್ಲಿ ಎಎಪಿ 134 ಸ್ಥಾನಗಳನ್ನು ಗೆದ್ದಿತು. ಬಿಜೆಪಿ 104 ಸ್ಥಾನಗಳನ್ನು ಗೆದ್ದಿತು. ಕಾಂಗ್ರೆಸ್ ಕೇವಲ 9 ಸ್ಥಾನಗಳನ್ನು ಗಳಿಸಿತು. ಮೂರು ವಾರ್ಡ್‌ಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

ಮೇಯರ್ ಆಯ್ಕೆ ಪ್ರಕ್ರಿಯೆಯಲ್ಲಿ 250 ಚುನಾಯಿತ ಕೌನ್ಸಿಲರ್‌ಗಳು, ಏಳು ಲೋಕಸಭೆಯ ಸದಸ್ಯರು, ರಾಜ್ಯಸಭೆಯ ಮೂರು ಸದಸ್ಯರು ಮತ್ತು ದೆಹಲಿ ಅಸೆಂಬ್ಲಿಯ 1/5 ಸದಸ್ಯರು (13 ಶಾಸಕರು) ಪಾಲ್ಗೊಳ್ಳಲಿದ್ದಾರೆ.












Click it and Unblock the Notifications