ಬಾಲಿವುಡ್ ನಟಿ ಶ್ರೀದೇವಿ ಸಾವು : ಉತ್ತರ ಸಿಕ್ಕದ 5 ಪ್ರಶ್ನೆಗಳು
Recommended Video

ದುಬೈನಲ್ಲಿ ಬಾಲಿವುಡ್ ನಟಿ ಶ್ರೀದೇವಿಯವರ ಸಾವಿಗೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದ್ದು, ಅವರನ್ನು ಬೋನಿ ಕಪೂರ್ ಅವರ ಕುಟುಂಬಕ್ಕೆ ಹಸ್ತಾಂತರಿಸುವ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಮಂಗಳವಾರ ರಾತ್ರಿ 10.30ರ ಸುಮಾರಿಗೆ ಶ್ರೀದೇವಿಯವರ ದೇಹ ಭಾರತಕ್ಕೆ ಬರಲಿದೆ.
ಶ್ರೀದೇವಿ ಗಂಡ ಬೋನಿ ಕಪೂರ್, ಮಾರ್ವಾ ಕುಟುಂಬದ ಸದಸ್ಯರು, ಜುಮೈರಾಹ್ ಎಮಿರೇಟ್ಸ್ ಟವರ್ಸ್ ಹೋಟೆಲ್ ಸಿಬ್ಬಂದಿ ಮುಂತಾದವರನ್ನು ವಿಚಾರಣೆಗೆ ಒಳಪಡಿಸಿದ್ದ ದುಬೈ ವಿಶೇಷ ಪ್ರಾಸಿಕ್ಯೂಟರ್ ಅವರು ನೀಡಿರುವ ವರದಿಯ ಪ್ರಕಾರ, ಶ್ರೀದೇವಿಯರ ಸಾವು ಬಾತ್ ಟಬ್ ನಲ್ಲಿ ಮುಳುಗುವಿಕೆಯಿಂದ ಆಗಿದೆ.
ಅಲ್ಲಿಗೆ, ಶ್ರೀದೇವಿಯವರ ಸಾವಿನ ಪ್ರಕರಣದ ತನಿಖೆಯನ್ನು ದುಬೈ ಪೊಲೀಸರು ಮುಕ್ತಾಯಗೊಳಿಸಿದ್ದು, ಭಾರತಕ್ಕೆ ಶ್ರೀದೇವಿಯವರ ದೇಹ ಬಂದ ಬಳಿಕ ಬುಧವಾರ ಬೆಳಿಗ್ಗೆ ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು ಮತ್ತು ಬುಧವಾರ ಸಂಜೆ ಅಂತಿಮ ಸಂಸ್ಕಾರ ಮಾಡಲಾಗುವುದು.
ಇಷ್ಟೆಲ್ಲ ಆದರೂ, ಕೆಲವೊಂದು ಪ್ರಶ್ನೆಗಳು ಹಾಗೆಯೇ ಉಳಿದುಕೊಂಡಿವೆ. ಅವುಗಳು ಕೂಡ ಶ್ರೀದೇವಿಯರ ಅಂತ್ಯ ಸಂಸ್ಕಾರದೊಂದಿಗೆ ಸಮಾಧಿಯಾಗಲಿವೆ. ಉತ್ತರ ಸಿಗದಿದ್ದರೇನಂತೆ, ಆ ಪ್ರಶ್ನೆಗಳತ್ತ ಒಂದು ಬಾರಿ ಕಣ್ಣು ಹಾಯಿಸಬಹುದಲ್ಲ?

ಹೋಟೆಲಿನಲ್ಲಿ ಶ್ರೀದೇವಿಯ ಜತೆ ಇದ್ದದ್ದಾರು?
ತನ್ನ ಮಗಳು ಖುಷಿಯೊಂದಿಗೆ ಬೋನಿ ಕಪೂರ್ ಅವರು ಮುಂಬೈಗೆ ಮರಳಿದ ಮೇಲೆ ಶಾಪಿಂಗ್ ಮಾಡಬೇಕಿದ್ದ ಶ್ರೀದೇವಿಯವರು ಎರಡು ದಿನಗಳ ಕಾಲ ಹೋಟೆಲ್ ನಲ್ಲಿಯೇ ಬಾಗಿಲು ಕೂಡ ತೆರೆಯದೆ ಉಳಿದುಕೊಂಡರೇಕೆ? ಅವರ ಜೊತೆ ಆಗ ಮತ್ತಾರಿದ್ದರು? ಒಂದು ಬಲ್ಲ ಮೂಲಗಳ ಪ್ರಕಾರ, ಶ್ರೀದೇವಿಯವರ ಜೊತೆ ಅವರ ಸಹೋದರಿಯರಿದ್ದರು. ಆಗ ಅವರ ಮಧ್ಯೆ ಏನಾದರೂ ಕಲಹವಾಯಿತೆ?

ಪೊಲೀಸರಿಗೆ ತಿಳಿಸಲು ಬೋನಿ ತಡ ಮಾಡಿದ್ದೇಕೆ?
ಶ್ರೀದೇವಿಯವರು ಬಾತ್ ಟಬ್ ನಲ್ಲಿ ಮುಳುಗಿದ್ದಾರೆಂದು ಗೊತ್ತಾದ ಮೂರುವರೆ ಗಂಟೆಯ ನಂತರ ಬೋನಿ ಕಪೂರ್ ಅವರು ಪೊಲೀಸರಿಗೆ ಫೋನ್ ಮಾಡಿದ್ದು ಏಕೆ? ದುಬೈ ಪೊಲೀಸರು ಮೂರು ಗಂಟೆಗಳ ಕಾಲ ಬೋನಿ ಕಪೂರ್ ಅವರ ವಿಚಾರಣೆ ಮಾಡಿದ್ದು, ಅವರಿಂದ ಹೇಳಿಕೆ ಪಡೆದಿದ್ದು, ಅವರಿಗೆ ಈ ಪ್ರಕರಣದಲ್ಲಿ ಯಾವುದೇ ಕ್ಲೀನ್ ಚಿಟ್ ನೀಡಿಲ್ಲ.

ಶ್ರೀದೇವಿ ತಲೆಗೆ ಗಾಯ ಆಗಿದ್ದು ಹೇಗೆ?
ಎಲ್ಲಕ್ಕಿಂತ ಮುಖ್ಯವಾಗಿ, ಶ್ರೀದೇವಿಯವರ ತಲೆಯ ಮೇಲೆ ಗಾಯವಾಗಿರುವ ಗುರುತಿದೆ ಎಂದು ಏಷ್ಯಾನೆಟ್ ನ್ಯೂಸ್ ವರದಿ ಮಾಡಿದೆ. ಅವರು ಹೋಟೆಲಿನಲ್ಲಿದ್ದಾಗ ಬೋನಿ ಬಿಟ್ಟರೆ ಬೇರೆ ಯಾರೂ ಇಲ್ಲದಿದ್ದರೆ, ಅವರ ತಲೆಗೆ ಗಾಯವಾಗಿದ್ದಾದರೂ ಹೇಗೆ? ಬಾತ್ ಟಬ್ಬಿನಲ್ಲಿ ಬೀಳುವಾಗ ಶ್ರೀದೇವಿಯವರ ತಲೆಗೆ ಪೆಟ್ಟಾಯಿತೆ? ಅಥವಾ ಅದು ಹಳೆಯ ಗಾಯದ ಗುರುತೆ?

ಪ್ರಜ್ಞೆ ತಪ್ಪುವಂತೆ ಮದ್ಯ ಸೇವಿಸಿದ್ದೇಕೆ?
ಶ್ರೀದೇವಿಯವರಿಗೆ ಮದ್ಯ ಸೇವಿಸುವ ಚಟವಿರಲಿಲ್ಲ ಎಂದು ಉತ್ತರ ಪ್ರದೇಶದ ಮಾಜಿ ರಾಜಕಾರಣಿ ಅಮರ್ ಸಿಂಗ್, ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಹೇಳಿಕೆ ನೀಡಿದ್ದಾರೆ. ಇವರಿಬ್ಬರೂ ಶ್ರೀದೇವಿಯನ್ನು ಹತ್ತಿರದಿಂದ ಬಲ್ಲವರು. ವಸ್ತುಸ್ಥಿತಿ ಹೀಗಿದ್ದಾಗ, ಶ್ರೀದೇವಿಯವರು ಪ್ರಜ್ಞೆ ತಪ್ಪುವಂತೆ ಮದ್ಯ ಸೇವನೆ ಮಾಡಿದ್ದು ಏಕೆ ಮತ್ತು ಹೇಗೆ? ಅವರಿಗೆ ಬಲವಂತವಾಗಿ ಯಾರಾದರೂ ಮದ್ಯ ಕುಡಿಸಿದ್ದರಾ?

ಅಮಲಿನಲ್ಲಿದ್ದ ಹೆಂಡತಿಯೊಂದಿಗೆ ಬೋನಿ ಹೇಗೆ ಮಾತಾಡಿದರು?
ಶ್ರೀದೇವಿಯವರಿಗೆ ಸರ್ಪ್ರೈಸ್ ನೀಡಲೆಂದು ದುಬೈಗೆ ಹೋದ ಬೋನಿ ಅವರು, ಶ್ರೀದೇವಿಯವರು ಬಾತ್ ರೂಮಿಗೆ ಹೋಗುವ ಮುನ್ನ 15 ನಿಮಿಷ ಮಾತಾಡಿದ್ದರಂತೆ. ಆದರೆ, ಪೋರೆನ್ಸಿಕ್ ವರದಿಯ ಪ್ರಕಾರ ಶ್ರೀದೇವಿಯವರ ದೇಹದಲ್ಲಿ ಮದ್ಯದ ಅಂಶವಿತ್ತು ಮತ್ತು ಆಕಾರಣದಿಂದಲೇ ಅವರು ಪ್ರಜ್ಞೆ ಕಳೆದುಕೊಂಡು ಟಬ್ಬಿನಲ್ಲಿ ಮುಳುಗಿ ಸತ್ತಿದ್ದಾರೆ. ಪ್ರಜ್ಞೆ ಕಳೆದುಕೊಳ್ಳುವಷ್ಟು ಮದ್ಯ ಸೇವಿಸಿದ್ದರು ಬೋನಿಯವರು ಶ್ರೀದೇವಿಯೊಂದಿಗೆ 15 ನಿಮಿಷ ಮಾತಾಡಿದ್ದಾದರೂ ಹೇಗೆ?












Click it and Unblock the Notifications