ಮುನಿದನೇ ತಿರುಪತಿ ತಿಮ್ಮಪ್ಪ: ಭೀಕರ ದುರಂತಕ್ಕೆ 21 ಬಲಿ
ರಾಜಮಂಡ್ರಿ, ಜೂ 13 (ಪಿಟಿಐ): ಆಂಧ್ರದ ವಿಜಯವಾಡದಿಂದ ವಿಶಾಖಪಟ್ಟಣಕ್ಕೆ ತೆರಳುತ್ತಿದ್ದ ಕ್ರ್ಯೂಸರ್ ಗೋದಾವರಿ ನದಿಗೆ ಉರುಳಿದ ಪರಿಣಾಮ ಒಂದೇ ಕುಟುಂಬದ 21 ಜನ ಸಾವನ್ನಪ್ಪಿದ ಘಟನೆ ಶುಕ್ರವಾರ (ಜೂ 12) ತಡರಾತ್ರಿ ವರದಿಯಾಗಿದೆ.
ಒಂದೇ ಕುಟುಂಬದ 23 ಪ್ರವಾಸಿಗರು ತಿರುಪತಿ ತಿಪ್ಪಮ್ಮನ ದರ್ಶನ ಪಡೆದು ವಿಜಯವಾಡದ ಮೂಲಕ ಅಚ್ಯುತಾಪುರಂಗೆ ವಾಪಸ್ಸಾಗುತ್ತಿದ್ದರು.
ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕ್ರ್ಯೂಸರ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಧವಳೇಶ್ವರ ಬ್ಯಾರೇಜ್ ನಿಂದ ಗೋದಾವರಿ ನದಿಗೆ ಉರುಳಿದೆ.

ಇದರ ಪರಿಣಾಮ 21 ಮಂದಿ ಸ್ಥಳದಲ್ಲೆ ಸಾವನ್ನಪ್ಪಿದ್ದರೆ, ಇಬ್ಬರು ಮಕ್ಕಳು ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ. ಮಕ್ಕಳನ್ನು ಸ್ಥಳೀಯರು ರಾಜಮಂಡ್ರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೃತ 21 ಜನರಲ್ಲಿ ಆರು ಮಕ್ಕಳು, ಒಂಬತ್ತು ಮಹಿಳೆಯರು ಸೇರಿದ್ದಾರೆಂದು ಪಿಟಿಐ ವರದಿ ಮಾಡಿದೆ.
ಮೃತರೆಲ್ಲರೂ ವಿಶಾಖಪಟ್ಟಣಂನ ಅಚ್ಚುತಾಪುರಂ ನಿವಾಸಿಗಳು ಎಂದು ಗುರುತಿಸಲಾಗಿದ್ದು, ಘಟನೆಯ ಕೂಲಂಕುಷ ತನಿಖೆ ನಡೆಸಿ ವರದಿ ನೀಡುವಂತೆ ಪೊಲೀಸ್ ಇಲಾಖೆಗೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆದೇಶ ನೀಡಿದ್ದಾರೆ.
ಘಟನೆಯ ಬಗ್ಗೆ ತೀವ್ರ ವಿಷಾದ ವ್ಯಕ್ತ ಪಡಿಸಿರುವ ವೈಎಸ್ಆರ್ ಕಾಂಗ್ರೆಸ್ ಅಧ್ಯಕ್ಷ ಜಗನಮೋಹನ್ ರೆಡ್ಡಿ, ನೊಂದ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ.
13 ಜನ ಸಾಮರ್ಥ್ಯವಿರುವ ಕ್ರ್ಯೂಸರ್ ನಲ್ಲಿ 23 ಜನ ಪ್ರಯಾಣಿಸುತ್ತಿದ್ದರು. ಘಟನೆಯ ಸಂಬಂಧ ಶನಿವಾರ ಬೆಳಗ್ಗಿನ ಜಾವ 5.30ಕ್ಕೆ ಮಾಹಿತಿ ಬಂದಿದ್ದು, ಕೂಡಲೇ ಕಾರ್ಯಪ್ರವೃತ್ತರಾಗಿದ್ದೇವೆಂದು ರಾಜಮಂಡ್ರಿ ಗ್ರಾಮೀಣ ಉಪ ಪೊಲೀಸ್ ಆಯುಕ್ತೆ ಅಂಬಿಕಾ ಪ್ರಸಾದ್ ಹೇಳಿದ್ದಾರೆ. (ಚಿತ್ರಕೃಪೆ: ANI)












Click it and Unblock the Notifications