ಕೋವಿಡ್ -19 ಲಸಿಕೆ ಪ್ರಮಾಣಪತ್ರದಿಂದ ಪ್ರಧಾನಿ ಮೋದಿ ಫೋಟೊ ಮಾಯ!
ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ನೀಡಲಾದ ಕೋವಿನ್ ಲಸಿಕೆ ಪ್ರಮಾಣಪತ್ರಗಳಿಂದ ಪ್ರಧಾನಿ ನರೇಂದ್ರ ಮೋದಿಯವರ ಫೋಟೋವನ್ನು ತೆಗೆದುಹಾಕಲಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ನೀಡಿದ ಪ್ರಮಾಣಪತ್ರಗಳು, "ಭಾರತವು ಒಟ್ಟಾಗಿ ಕೋವಿಡ್-19 ಅನ್ನು ಸೋಲಿಸುತ್ತದೆ" ಎಂಬ ಉಲ್ಲೇಖದೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರ ಚಿತ್ರಗಳನ್ನು ಹಾಕಲಾಗಿತ್ತು.

ಫೋಟೊ ತೆಗೆದುಹಾಕಿರುವುದನ್ನು ಬುಧವಾರ ಸಾಮಾಜಿಕ ಮಾಧ್ಯಮ ಬಳಕೆದಾರರು ಗಮನಿಸಿದ್ದಾರೆ. ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ಮಾದರಿ ನೀತಿ ಸಂಹಿತೆ (MCC) ಜಾರಿಗೆ ಬಂದಾಗ ಎಲ್ಲಾ ಸರ್ಕಾರಿ ವೆಬ್‌ಸೈಟ್‌ಗಳಿಂದ ಮೋದಿಯವರ ಫೋಟೋಗಳನ್ನು ತೆಗೆದುಹಾಕಲಾಗಿದೆ. ಇದು ಕೂಡ ಅದರ ಒಂದು ಭಾಗವಾಗಿದೆ.
ರಾಜ್ಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮಾದರಿನೀತಿ ಸಂಹಿತೆ ಜಾರಿಯಲ್ಲಿದ್ದಾಗ ನಿರ್ದಿಷ್ಟ ರಾಜ್ಯಗಳಲ್ಲಿ ನೀಡಲಾದ ಕೋವಿನ್ ಪ್ರಮಾಣಪತ್ರಗಳಲ್ಲಿ ಕೂಡ ಪ್ರಧಾನ ಮಂತ್ರಿಯ ಫೋಟೋವನ್ನು ತೆಗೆದುಹಾಕಲಾಗಿತ್ತು.
ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ
ಇನ್ನು ಈ ವಿಚಾರವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ಬಗೆಯ ಚರ್ಚೆಯಾಗುತ್ತಿದೆ. ಕೋವಿಡ್ ಲಸಿಕೆ ಪ್ರಮಾಣಪತ್ರಗಳಲ್ಲಿ ಮೋದಿ ಫೊಟೊ ಇನ್ನು ಮುಂದೆ ಇರುವುದಿಲ್ಲ. ಅದನ್ನು ಪರೀಕ್ಷೆ ಮಾಡಲು ಈಗಷ್ಟೇ ಡೌನ್‌ಲೋಡ್ ಮಾಡಲಾಗಿದೆ, ಅವರ ಚಿತ್ರ ಹೋಗಿದೆ ಎಂದು ಎಕ್ಸ್ ಬಳಕೆದಾರ ಸಂದೀಪ್ ಮನುಧಾನೆ ಬರೆದಿದ್ದಾರೆ.
ಹೌದು, ನಾನು ಈಗಷ್ಟೇ ಪರಿಶೀಲಿಸಿದ್ದೇನೆ ಮತ್ತು ಪ್ರಧಾನಿ ಮೋದಿ ಅವರ ಫೋಟೋ ಕಣ್ಮರೆಯಾಗಿದೆ ಮತ್ತು ಅವರ ಫೋಟೋದ ಬದಲಿಗೆ ಕೇವಲ ಕ್ಯೂಆರ್ ಕೋಡ್ ಇದೆ ಎಂದು ಕಾಂಗ್ರೆಸ್ ಕಾರ್ಯಕಾರಿ ಎಂದು ಗುರುತಿಸಿಕೊಂಡಿರುವ ಮತ್ತೊಬ್ಬ ಬಳಕೆದಾರ ಇರ್ಫಾನ್ ಅಲಿ ಬರೆದಿದ್ದಾರೆ.
ಕೋವಿಶೀಲ್ಡ್ ಲಸಿಕೆಯಿಂದ ಅಡ್ಡ ಪರಿಣಾಮ ಇದೆ ಎಂದು ಲಸಿಕೆ ತಯಾರಕ ಆಸ್ಟ್ರಾಜೆನೆಕಾ ಯುಕೆ ನ್ಯಾಯಾಲಯದಲ್ಲಿ ಒಪ್ಪಿಕೊಂಡ ನಂತರ, ಈ ಚರ್ಚೆ ಶುರುವಾಗಿದೆ. ರಕ್ತ ಹೆಪ್ಪುಗಟ್ಟುವಿಕೆಗೆ ಸಂಬಂಧಿಸಿದ ಅಪರೂಪದ ಅಡ್ಡ ಪರಿಣಾಮವಾದ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ (ಟಿಟಿಎಸ್)ಗೆ ಕಾರಣವಾಗಬಹುದು ಎಂದು ಆಸ್ಟ್ರಾಜೆನೆಕಾ ಹೇಳಿದೆ.
ಆಸ್ಟ್ರಾಜೆನೆಕಾ ಜೊತೆಗಿನ ಪರವಾನಗಿ ಒಪ್ಪಂದದ ಅಡಿಯಲ್ಲಿ ಭಾರತದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (SII) ತಯಾರಿಸಿದ ಕೋವಿಶೀಲ್ಡ್ ಇತ್ತೀಚಿನ ವಿವಾದದಿಂದ ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಫೋಟೊ ಕಾಣೆಯಾಗಿದೆ ಎಂದು ಹಲವರು ಊಹಿಸಿದ್ದಾರೆ.
ಆದರೆ, ಲೋಕಸಭಾ ಚುನಾವಣೆ ಇರುವ ಕಾರಣ ಮಾದರಿ ನೀತಿ ಸಂಹಿತೆಯಂತೆ ಮೋದಿ ಅವರ ಫೋಟೊವನ್ನು ತೆಗೆದುಹಾಕಲಾಗಿದೆ ಎಂದಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ ಎಂದು ದಿ ಪ್ರಿಂಟ್ ವರದಿ ಮಾಡಿದೆ.












Click it and Unblock the Notifications