ಸರ್ಕಾರಿ ಆಸ್ಪತ್ರೆಗಳ ದಿಗ್ಬಂಧನ ಬೇಕಿಲ್ಲವೇ ಇಲ್ಲಿದೆ ಮಾರ್ಗೋಪಾಯ!
ನವದೆಹಲಿ, ಏಪ್ರಿಲ್.28: ಕೊರೊನಾ ವೈರಸ್ ಸೋಂಕಿತ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದಂತೆ ನಿಮ್ಮ ನಿಮ್ಮ ಮನೆಗಳಲ್ಲಿಯೇ ಸ್ವಯಂ ದಿಗ್ಬಂಧನಕ್ಕೆ ಒಳಗಾಗಲು ಕೇಂದ್ರ ಸರ್ಕಾರವೇ ಮಾರ್ಗಸೂಚಿಯನ್ನು ಹೊರಡಿಸಿದೆ.
ಕೊರೊನಾ ವೈರಸ್ ಸೋಂಕಿನ ಪೂರ್ವ ಲಕ್ಷಣ ಕಂಡು ಬಂದಲ್ಲಿ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಗೃಹ ದಿಗ್ಬಂಧನವನ್ನು ಆಯ್ಕೆ ಮಾಡಿಕೊಳ್ಳಬಹುದು. ಇದಕ್ಕೆ ಅಗತ್ಯವಾಗಿರುವ ಸೇವೆಯನ್ನು ಸರ್ಕಾರದಿಂದಲೇ ಒದಗಿಸಲಾಗುತ್ತದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ತಿಳಿಸಿದೆ.
ಭಾರತದಲ್ಲಿ ಮಂಗಳವಾರದ ಅಂಕಿ-ಅಂಶಗಳ ಪ್ರಕಾರ 29,572 ಜನರಿಗೆ ಕೊರೊನಾ ವೈರಸ್ ಸೋಂಕು ಹರಡಿರುವುದು ದೃಢಪಟ್ಟಿದ್ದು, 939 ಜನರು ಮಾರಕ ರೋಗಕ್ಕೆ ಬಲಿಯಾಗಿದ್ದಾರೆ. ಇದುವರೆಗೂ ದೇಶದಲ್ಲಿ 7,141ಕ್ಕೂ ಅಧಿಕ ಮಂದಿ ಕೊರೊನಾ ವೈರಸ್ ನಿಂದ ಗುಣಮುಖರಾಗಿದ್ದಾರೆ ಎಂದು ತಿಳಿದು ಬಂದಿದೆ.

ಕೊರೊನಾ ಶಂಕಿತರಲ್ಲಿ ನಾಲ್ಕು ವಿಧಗಳಾಗಿ ವಿಂಗಡಣೆ
ದೇಶದಲ್ಲಿ ಇರುವ ಕಂಟೇನ್ಮೆಂಟ್ ಝೋನ್ ಗಳಲ್ಲಿ ಪತ್ತೆಯಾಗುವ ಕೊರೊನಾ ವೈರಸ್ ಶಂಕಿತರು ಮತ್ತು ಸೋಂಕಿತರನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗುತ್ತಿದೆ. ಕೊವಿಡ್-19 ಆಸ್ಪತ್ರೆಗಳಲ್ಲಿ ದಾಖಲಾಗಿರುವ ಸೋಂಕಿತರನ್ನು ತೀರಾ ಸೌಮ್ಯ, ಸೌಮ್ಯ, ಮಧ್ಯಮ ಹಾಗೂ ತೀವ್ರ ಸ್ಥಿತಿಯಲ್ಲಿ ಇರುವ ಸೋಂಕಿತರು ಎಂದು ಗುರುತಿಸಲಾಗಿದೆ.

ಗೃಹ ದಿಗ್ಬಂಧನದಲ್ಲಿ ಇರಿಸಲು ಎಂಥವರು ಸೂಕ್ತ?
ಕೊರೊನಾ ವೈರಸ್ ಸೋಂಕಿತ ಪೂರ್ವ ಲಕ್ಷಣಗಳನ್ನು ಹೊಂದಿರುವ ಶಂಕಿತ ಹಾಗೂ ತೀರಾ ಸೌಮ್ಯ (ಆರಂಭಿಕ) ಲಕ್ಷಣಗಳನ್ನು ಹೊಂದಿರುವ ಕೊವಿಡ್-19 ಸೋಂಕಿತರನ್ನು ಗೃಹ ದಿಗ್ಬಂಧನದಲ್ಲಿ ಇರಿಸಿ ಚಿಕಿತ್ಸೆ ಮುಂದುವರಿಸಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಾರ್ಗಸೂಚಿಗಳನ್ನು ಹೊರಡಿಸಿದೆ.

ಕೇಂದ್ರ ಸರ್ಕಾರದ ಮಾರ್ಗಸೂಚಿಗಳಲ್ಲಿ ಇರುವುದೇನು?
ಕೊರೊನಾ ವೈರಸ್ ಪ್ರಾಥಮಿಕ ಹಂತದಲ್ಲಿ ಇರುವಾಗಲೇ ಗೃಹ ದಿಗ್ಬಂಧನಕ್ಕೆ ಒಳಗಾಗುವಂತೆ ಕೇಂದ್ರ ಸರ್ಕಾರವು ಸೂಚಿಸಿದೆ. ಹೀಗೆ ಗೃಹ ದಿಗ್ಬಂಧನದಲ್ಲಿ ಇರುವ ಶಂಕಿತರು ಅಥವಾ ಪ್ರಾಥಮಿಕ ಹಂತದ ಸೋಂಕಿತರಿಗೆ ವೈದ್ಯಕೀಯ ಸಿಬ್ಬಂದಿಯೊಬ್ಬರು ಚಿಕಿತ್ಸೆ ನೀಡುತ್ತಾರೆ. ಇದರ ಜೊತೆಗೆ ಗೃಹ ದಿಗ್ಬಂಧನದಲ್ಲಿ ಇರುವವರಿಗೆ ಅಗತ್ಯ ವಸ್ತುಗಳ ಪೂರೈಕೆಯನ್ನು ಮಾಡಲಾಗುತ್ತದೆ. ಆದರೆ ಈ ವೇಳೆಯಲ್ಲಿ ಗೃಹ ದಿಗ್ಬಂಧನದ ಬಗ್ಗೆ ಕೇಂದ್ರದ ಮಾರ್ಗಸೂಚಿಗಳು ಏನು ಹೇಳುತ್ತವೆ ಎಂಬುದನ್ನು ಇಲ್ಲಿ ನೋಡೋಣ.
ಕೇಂದ್ರ ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳು:
- ಸ್ವಯಂಪ್ರೇರಿತ ಗೃಹ ದಿಗ್ಬಂಧನಕ್ಕೆ ಒಳಗಾಗುವವರಿಗೆ ಮತ್ತು ಕುಟುಂಬ ಸದಸ್ಯರು ಅಗತ್ಯ ಮೂಲಭೂತ ಸೌಲಭ್ಯಗಳನ್ನು ಹೊಂದಿರತಕ್ಕದ್ದು
- ದಿನ 24 ಗಂಟೆಗಳ ಕಾಲ ಗೃಹ ದಿಗ್ಬಂಧನದಲ್ಲಿ ಇರುವವವರ ಆರೈಕೆಗೆ ಒಬ್ಬ ಸಿಬ್ಬಂದಿಯನ್ನು ನಿಯೋಜಿಸುವುದು.
- ಗೃಹ ದಿಗ್ಬಂಧನದಲ್ಲಿ ಇರುವವರಿಗೆ ಆರೈಕೆ ಮಾಡುವ ಸಿಬ್ಬಂದಿಯು ಶಿಷ್ಟಾಚಾರಕ್ಕೆ ತಕ್ಕಂತೆ Hydroxychloroquine ರೋಗ ನಿರೋಧಕ ಮಾತ್ರೆಗಳನ್ನು ಸೇವಿಸುವುದು.
- ಆರೋಗ್ಯ ಸೇತು ಮೊಬೈಲ್ ಅಪ್ಲಿಕೇಷನ್ ನ್ನು ಸದಾಕಾಲ ಆಕ್ಟಿವ್ ಆಗಿ ಇಟ್ಟುಕೊಂಡಿರಬೇಕು.
- ಗೃಹ ದಿಗ್ಬಂಧನದಲ್ಲಿ ಇರುವವರ ಆರೋಗ್ಯದಲ್ಲಿ ಆಗುವ ಏರಿಳಿತ ಹಾಗೂ ಬದಲಾವಣೆಗಳ ಮೇಲೆ ನಿಗಾ ವಹಿಸುವುದು. ಇದರ ಜೊತೆಗೆ ಆರೈಕೆದಾರರು ಗೃಹ ದಿಗ್ಬಂಧನದಲ್ಲಿ ಇರುವವವರ ಆರೋಗ್ಯ ಸ್ಥಿತಿಯ ಬಗ್ಗೆ ಹಿರಿಯ ವೈದ್ಯಕೀಯ ಸಿಬ್ಬಂದಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮಾಹಿತಿ ನೀಡುವುದು.
- ಗೃಹ ದಿಗ್ಬಂಧನದಲ್ಲಿ ಇರುವವರಲ್ಲಿ ಉಸಿರಾಟ ತೊಂದರೆ, ನಿರಂತರ ತಲೆನೋವು, ಎದೆನೋವಿನ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣವೇ ವೈದ್ಯಕೀಯ ತಪಾಸಣೆಗೆ ಒಳಪಡುವಂತೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಕೊರೊನಾ ಸೋಂಕಿತರ ಸಂಪರ್ಕದಲ್ಲಿದ್ದರೆ ಎಚ್ಚರ ಎಚ್ಚರ!
ಕೊರೊನಾ ವೈರಸ್ ಸೋಂಕಿತರ ಜೊತೆಗೆ ಪ್ರಾಥಮಿಕ ಹಾಗೂ ದ್ವಿತೀಯ ಮತ್ತು ತೃತೀಯ ಹೀಗೆ ಯಾವುದೇ ಹಂತದ ಸಂಪರ್ಕದಲ್ಲಿ ಇದ್ದರೂ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅದಕ್ಕಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವೇ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಗೃಹ ದಿಗ್ಬಂಧಿತರ ಆರೈಕೆದಾರರಿಗೂ ಮಾರ್ಗಸೂಚಿ:
- ಗೃಹ ದಿಗ್ಬಂಧಿತರನ್ನು ಆರೈಕೆ ಮಾಡುವ ವೈದ್ಯಕೀಯ ಸಿಬ್ಬಂದಿ ಸದಾ ಮಾಸ್ಕ್ ಧರಿಸಿಬೇಕು.
- ಆರೈಕೆದಾರರು ಮೂರು ಪದರಗಳ (Triple-layer) ಮಾಸ್ಕ್ ಗಳನ್ನು ಧರಿಸಬೇಕು ಹಾಗೂ ಪ್ರತಿ ಎಂಟು ಗಂಟೆಗೊಮ್ಮೆ ಅದನ್ನು ಬದಲಾಯಿಸಬೇಕು.
- ಮಾಸ್ಕ್ ಹಾಕಿಕೊಳ್ಳುವ ಮೊದಲು ಹಾಗೂ ಮಾಸ್ಕ್ ತೆಗೆದ ನಂತರ ಕೈಗಳನ್ನು ತೊಳೆದುಕೊಳ್ಳುವುದು.
- ಗೃಹ ದಿಗ್ಬಂಧಿತರ ಜೊತೆಗೆ ನೇರ ಸಂಪರ್ಕ ಹೊಂದದಿರುವಂತೆ ಸೂಚನೆ.
- ವಿಶೇಷವಾಗಿ ಗೃಹ ದಿಗ್ಬಂಧನದಲ್ಲಿ ಇರುವವರೊಂದಿಗೆ ಮಾತನಾಡುವುದು ನಿಷಿದ್ಧ.
- ಕೊರೊನಾ ಸೋಂಕಿತರನ್ನು ಮುಟ್ಟುವಾಗ ಬಿಸಾಡಬಹುದಾದ ಗ್ಲೌಸ್ ಗಳನ್ನು ಹಾಕಿಕೊಳ್ಳುವುದು.
- ಸೋಂಕಿತರ ಆರೈಕೆದಾರರ ಸಂಪರ್ಕದಲ್ಲಿ ಇರುವವರು ಕೂಡಾ ನಿತ್ಯ ದೇಹದ ಉಷ್ಣಾಂಶವನ್ನು ಪರೀಕ್ಷಿಸಿಕೊಳ್ಳುವುದು ಉತ್ತಮ.












Click it and Unblock the Notifications