ತಮಿಳುನಾಡಿನ ಪಳನಿ ದೇವಾಲಯದ ಪಂಚಾಮೃತದ ಬಗ್ಗೆ ವಿವಾದ: ತಮಿಳು ನಿರ್ದೇಶಕ ಅಂಧರ್
ತಿರುಪತಿ ತಿರುಮಲ ದೇವಸ್ಥಾನದ ಪ್ರಸಾದವಾದ ಲಡ್ಡುವಿನಲ್ಲಿ ಕಲಬೆರಕೆ ತುಪ್ಪ ಬಳಸಲಾಗಿದೆ ಎನ್ನುವ ಆರೋಪದ ವಿವಾದ ಇನ್ನೂ ತಣ್ಣಗಾಗಿಲ್ಲ. ಈ ಬಗ್ಗೆ ಇನ್ನೂ ಗಂಭೀರವಾದ ಚರ್ಚೆಗಳು ನಡೆಯುತ್ತಿವೆ. ಈ ನಡುವೆ ತಮಿಳುನಾಡಿನ ಪ್ರಸಿದ್ಧ ದೇವಸ್ಥಾನವಾದ ಪಳನಿ ದೇಗುಲದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ತಮಿಳು ನಿರ್ದೇಶಕರೊಬ್ಬರನ್ನು ಅಲ್ಲಿನ ಪೊಲೀಸರು ಬಂಧಿಸಿದ್ದಾರೆ. ಪಳನಿ ದೇವಾಲಯವು ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ.
ಪಳನಿ ದೇವಸ್ಥಾನದ ಪ್ರಸಾದದ ಬಗ್ಗೆ ತಮಿಳಿನ ನಿರ್ದೇಶಕ ಮೋಹನ್ ಕ್ಷತ್ರಿಯನ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ತಮಿಳುನಾಡಿನ ತಿರುಚಿ ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ.

ಮಕ್ಕಳಾಗದಂತೆ ತಡೆವ ಔಷಧಿ ಮಿಶ್ರಣ
ಈಚೆಗೆ ನಿರ್ದೇಶಕ ಮೋಹನ್ ಅವರು ಮಾತನಾಡಿದ್ದಾರೆ ಎಂದು ಹೇಳಲಾಗಿರುವ ವಿಡಿಯೋವೊಂದು ವೈರಲ್ ಆಗಿತ್ತು. ಅದರಲ್ಲಿ ಮೋಹನ್, ಈ ದೇವಸ್ಥಾನದಲ್ಲಿ ಭಕ್ತಾಧಿಗಳಿಗೆ ನೀಡುವ ಪಂಚಾಮೃತ ಪ್ರಸಾದದಲ್ಲಿ ನಿರ್ದಿಷ್ಟ ಔಷಧಿಯನ್ನು ಬಳಸಲಾಗುತ್ತಿದೆ. ಈ ಮಾತ್ರೆಗಳನ್ನು ಪ್ರಸಾದದಲ್ಲಿ ಬಳಸುವುದರಿಂದಾಗಿ ಮಕ್ಕಳಾಗದೆ ಇರುವ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಆ ದೇವಸ್ಥಾನದಲ್ಲಿ ಕೆಲಸ ಮಾಡುವವರು ಈ ಬಗ್ಗೆ ನನಗೆ ಈ ಮಾಹಿತಿ ಕೊಟ್ಟಿದ್ದಾರೆ. ಆದರೆ, ತಮಿಳುನಾಡಿನ ಸರ್ಕಾರವೇ ಆಗಲೀ ದೇವಾಲಯದಿಂದ ಯಾವುದೇ ಮಾಹತಿಯೂ ಬಂದಿಲ್ಲ ಎಂದು ಹೇಳಿದ್ದಾರೆ ಎನ್ನುವ ವಿಡಿಯೋ ವೈರಲ್ ಆಗಿತ್ತು.
ತಮಿಳುನಾಡು ಸರ್ಕಾರದಿಂದ ಎಚ್ಚರಿಕೆ
ಇನ್ನು ಈ ವಿಷಯ ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ತಮಿಳುನಾಡಿನಲ್ಲಿ ಭಕ್ತಾಧಿಗಳಿಂದ ಆಕ್ರೋಶ ಹಾಗೂ ಪ್ರತಿಭಟನೆಗಳು ನಡೆದಿವೆ. ವಿವಾದ ತೀವ್ರ ಸ್ವರೂಪಪಡೆದುಕೊಳ್ಳುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ತಮಿಳುನಾಡು ಪೊಲೀಸರು, ಕೂಡಲೇ ನಿರ್ದೇಶಕ ಮೋಹನ್ ಅವರನ್ನು ಚೆನ್ನೈನಲ್ಲಿ ಬಂಧಿಸಿದ್ದಾರೆ. ಅಲ್ಲದೇ ಈ ಬಗ್ಗೆ ತಮಿಳುನಾಡು ಸರ್ಕಾರದಿಂದಲೂ ಎಚ್ಚರಿಕೆ ನೀಡಲಾಗಿದೆ. ತಮಿಳುನಾಡಿನ ಪಳನಿ ದೇವಸ್ಥಾನದಲ್ಲಿ ಪ್ರಸಾದ ರೂಪದಲ್ಲಿ ನೀಡುವ ಪಂಚಾಮೃತಕ್ಕೆ ಸಂಬಂಧಿಸಿದಂತೆ ತಪ್ಪು ಮಾಹಿತಿ ಹಾಗೂ ಸುಳ್ಳು ಸುದ್ದಿಯನ್ನು ಹಬ್ಬಿಸಿದರೆ, ಕಠಿಣ ಕಾನೂನು ಕ್ರಮವನ್ನು ತೆಗೆದುಕೊಳ್ಳುವುದಾಗಿ ತಮಿಳುನಾಡಿನ ಹಿಂದೂ ಧಾರ್ಮಿಕ ಹಾಗೂ ಧರ್ಮ ದತ್ತಿ ಇಲಾಖೆಯ ಸಚಿವರಾದ ಶೇಖರ್ ಬಾಬು ಅವರು ಎಚ್ಚರಿಸಿದ್ದಾರೆ.
ಪ್ರಸಾದ ಪರೀಕ್ಷೆಗೆ ಸೋಷಿಯಲ್ ಮೀಡಿಯಾದಲ್ಲಿ ಆಗ್ರಹ
ಆಂಧ್ರಪ್ರದೇಶದ ತಿರುಪತಿ ತಿರುಮಲ ದೇವಸ್ಥಾನ, ತಮಿಳುನಾಡಿನ ಪಳನಿ ದೇವಸ್ಥಾನ ಸೇರಿದಂತೆ ದೇಶದ ಪ್ರಮುಖ ರಾಜ್ಯಗಳಲ್ಲಿ ಇರುವ ದೇವಸ್ಥಾನಗಳಿಗೆ ಕೋಟ್ಯಾಂತರ ಜನ ಭಕ್ತಾಧಿಗಳು ಪ್ರತಿ ವರ್ಷ ಭೇಟಿ ನೀಡುತ್ತಾರೆ. ಈ ಎರಡೂ ದೇವಸ್ಥಾನಗಳಿಗೂ ಅಪಾರ ಪ್ರಮಾಣ ಭಕ್ತರು ಭೇಟಿ ನೀಡುವುದಲ್ಲದೆ ಹರಕೆಯನ್ನೂ ತೀರಿಸುತ್ತಾರೆ. ಎರಡೂ ದೇವಾಲಯಗಳ ಪ್ರಸಾದಕ್ಕೂ ವಿಶೇಷ ಸ್ಥಾನವಿದೆ. ಈ ರೀತಿ ದೇವಸ್ಥಾನದ ಪ್ರಸಾದದ ಬಗ್ಗೆ ಗಂಭೀರ ಆರೋಪಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಬೃಹತ್ ಪ್ರಮಾಣದಲ್ಲಿ ಭಕ್ತಾಧಿಗಳಿಗೆ ಪ್ರಸಾದ ನೀಡುವ ದೇವಸ್ಥಾನಗಳಲ್ಲಿ ತಯಾರಾಗುವ ಪ್ರಸಾದವನ್ನು ಪರೀಕ್ಷಿಸಬೇಕು ಎನ್ನುವ ಆಗ್ರಹ ಭಕ್ತರಿಂದ ಕೇಳಿ ಬಂದಿದೆ.












Click it and Unblock the Notifications