ಕರ್ನಲ್ ಸೋಫಿಯಾ ಖುರೇಷಿ ಬಗ್ಗೆ ವಿವಾದಾತ್ಮಕ ಹೇಳಿಕೆ: ಬಿಜೆಪಿ ಸಚಿವನಿಗೆ ಎದುರಾಯ್ತು ಭಾರೀ ಸಂಕಷ್ಟ!
ಭಾರತೀಯರ ಹೆಮ್ಮೆ ಆಗಿರುವ ಹಾಗೂ ಕರ್ನಾಟಕದ ಸೊಸೆ ಕರ್ನಲ್ ಸೋಫಿಯಾ ಖುರೇಷಿ ಅವರನ್ನು ಗುರಿಯಾಗಿಸಿಕೊಂಡು ವಿವಾದಾತ್ಮಕ ಹೇಳಿಕೆ ನೀಡಿರುವ ಆರೋಪ ಎದುರಿಸುತ್ತಿರುವ ಮಧ್ಯಪ್ರದೇಶ ಬಿಜೆಪಿ ಸಚಿವ ಕನ್ವರ್ ವಿಜಯ್ ಶಾ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳುವಂತೆ ಮಧ್ಯಪ್ರದೇಶದ ಹೈಕೋರ್ಟ್ ಮಹತ್ವದ ಆದೇಶವನ್ನು ಮಾಡಿದೆ. ವಿಜಯ್ ಶಾ ನೀಡಿದ್ದ ಹೇಳಿಕೆಯು ದೇಶದಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಕಳೆದ ಒಂದು ವಾರಕ್ಕೂ ಹೆಚ್ಚು ಅವಧಿಯಿಂದ ಕರ್ನಲ್ ಸೋಫಿಯಾ ಅವರ ಬಗ್ಗೆ ದೇಶದಾದ್ಯಂತ ಜನ ಹೆಮ್ಮೆಯಿಂದ ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ, ಇದೇ ಸಂದರ್ಭದಲ್ಲಿ ಬಿಜೆಪಿಯ ಪ್ರಭಾವಿ ಸಚಿವರ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಅಲ್ಲದೇ ಈ ಹೇಳಿಕೆಯಿಂದ ಬಿಜೆಪಿ ಸಹ ಮುಜುಗರಕ್ಕೆ ಒಳಗಾಗಿತ್ತು.
ಭಾರತವು ನಡೆಸಿದ್ದ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಕರ್ನಲ್ ಸೋಫಿಯಾ ಖುರೇಷಿ ಅವರು ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು. ಭಾರತೀಯ ಸೇನೆಯು ಭಾರತ vs ಪಾಕಿಸ್ತಾನದ ನಡುವೆ ನಡೆಯುತ್ತಿರುವ ಸಂಘರ್ಷ ಹಾಗೂ ಭಾರತ ನೀಡಿದ ತಿರುಗೇಟಿನ ಬಗ್ಗೆ ಕರ್ನಲ್ ಸೋಫಿಯಾ ಖುರೇಷಿ ಅವರು ಸ್ಪಷ್ಟವಾಗಿ ಪತ್ರಿಕಾಗೋಷ್ಠಿಗಳಲ್ಲಿ ಮಾತನಾಡಿದ್ದರು. ಇದು ದೇಶದಾದ್ಯಂತ ಭಾರೀ ಮೆಚ್ಚುಗೆಗೆ ಕಾರಣವಾಗಿತ್ತು. ಆದರೆ, ಬಿಜೆಪಿಯ ಸಚಿವ ಕನ್ವರ್ ವಿಜಯ್ ಶಾ, "ನಮ್ಮ ಹೆಣ್ಣುಮಕ್ಕಳ ಸಿಂಧೂರವನ್ನು ಅಳಿಸಿದವರಿಗೆ ತಕ್ಕ ಪಾಠ ಕಲಿಸಲು ನಾವು ಅವರ ಸಹೋದರಿಯನ್ನೇ ಕಳುಹಿಸಿದ್ದೆವು" ಎಂದು ಸೋಫಿಯಾ ಖುರೇಷಿ ಅವರ ಬಗ್ಗೆ ತುಚ್ಛವಾಗಿ ಮಾತನಾಡಿದ್ದರು. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಈ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿತ್ತು.

ಈ ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಕ್ಷಮೆ ಕೋರಿದ್ದ ವಿಜಯ್ ಶಾ. ನಾನು ಆ ಅರ್ಥದಲ್ಲಿ ಹೇಳಿಲ್ಲ. ನನ್ನ ಹೇಳಿಕೆಗಾಗಿ ಒಂದು ಬಾರಿಯಲ್ಲ 10 ಬಾರಿಯಾದರೂ ಕ್ಷಮೆ ಕೇಳುತ್ತೇನೆ ಎಂದಿದ್ದರು. ಆದರೆ, ಇದು ಭಾರೀ ವಿವಾದಾತ್ಮಕ ಹೇಳಿಕೆ ಆಗಿದೆ. ಇದರ ಬೆನ್ನಲ್ಲೇ ಬಿಜೆಪಿ ಸಹ ವಿಜಯ್ ಅವರ ಹೇಳಿಕೆಯಿಂದ ಅಂತರ ಕಾಪಾಡಿಕೊಂಡಿದೆ.
ಇದೀಗ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿರುವ ನ್ಯಾಯಮೂರ್ತಿಗಳಾದ ಅತುಲ್ ಶ್ರೀಧರನ್ ಹಾಗೂ ಅನುರಾಧಾ ಶುಕ್ಲಾ ಅವರನ್ನು ಒಳಗೊಂಡಿರುವ ಮಧ್ಯಪ್ರದೇಶದ ಹೈಕೋರ್ಟ್‌ನ ವಿಭಾಗೀಯ ಪೀಠವು ಸಚಿವರ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿದೆ.
ಮುಂದುವರಿದು ವಿಯಜ್ ಶಾಗೆ ಸಂಬಂಧಿಸಿದ ಎಫ್‌ಐಆರ್ ನೋಂದಣಿ ಬಗ್ಗೆ ಕೋರ್ಟ್‌ಗೆ ತಿಳಿಸಬೇಕು ಅಂತಲೂ ವಿಭಾಗೀಯ ಪೀಠ ಸೂಚನೆ ನೀಡಿದೆ. ಇನ್ನು ಈ ಅರ್ಜಿಯ ಮುಂದಿನ ವಿಚಾರಣೆಯನ್ನು ಗುರುವಾರ ಬೆಳಿಗ್ಗೆ 10.30ಕ್ಕೆ ನಿಗದಿಪಡಿಸಿ ಮುಂದೂಡಿದೆ.
ಪದೇ ಪದೇ ಕ್ಷಮೆ ಕೇಳುತ್ತೇನೆ: ಕರ್ನಲ್ ಖುರೇಷಿ ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ನನ್ನ ಹೇಳಿಕೆಯ ಉದ್ದೇಶ ಅದಾಗಿರಲಿಲ್ಲ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ. ನಾನು ಒಂದಲ್ಲ ಹತ್ತು ಬಾರಿ ಕ್ಷಮೆಯಾಚನೆ ಮಾಡುವುದಕ್ಕೆ ಸಿದ್ಧನಾಗಿದ್ದೇನೆ. ಕರ್ನಲ್ ಖುರೇಷಿ ಅವರನ್ನು ನಾನು ನನ್ನ ಸಹೋದರಿಯರಿಗಿಂತ ಹೆಚ್ಚು ಗೌರವಿಸುತ್ತೇನೆ ಅಂತ ಹೇಳಿದ್ದಾರೆ. ಕೂಡಲೇ ವಿಜಯ್ ಶಾ ಅವರನ್ನು ಬಿಜೆಪಿಯು ಸಚಿವ ಸಂಪುಟದಿಂದ ವಜಾ ಮಾಡಬೇಕು ಅಂತ ಕಾಂಗ್ರೆಸ್ ಆಗ್ರಹಿಸಿದೆ.












Click it and Unblock the Notifications