ಕಲುಷಿತ ನೀರು ಸೇವನೆ: ದಂಪತಿಗೆ 10 ವರ್ಷಗಳ ನಂತರ ಜನಿಸಿದ್ದ ಹಸುಗೂಸು ಸಾವು
ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ಕಲುಷಿತ ನೀರಿನಿಂದಾಗಿ ಹಸುಗೂಸು ಜನಿಸಿದ ಕೆಲವೇ ದಿನಗಳಲ್ಲಿ ಸಾವನ್ನಪ್ಪಿದೆ. ದಂಪತಿಗೆ 10 ವರ್ಷಗಳ ನಂತರ ಈ ಮಗು ಜನಿಸಿತ್ತು. ಭಗೀರಥಪುರ ಪ್ರದೇಶದ ಮರಾಠಿ ಮೊಹಲ್ಲಾದ ಒಂದು ಗಲ್ಲಿಯಲ್ಲಿ ಈ ಭಯಾನಕ ಘಟನೆ ಸಂಭವಿಸಿದೆ. ಈ ಭಾಗದಲ್ಲಿ ಕುಡಿಯುವ ನೀರಿಗೆ ಚರಂಡಿ ನೀರು ಮಿಶ್ರಣವಾಗಿ ಜನರ ಜೀವಕ್ಕೆ ಕಂಟಕವಾಗಿ ಪರಿಣಮಿಸಿದೆ. ಇದರಿಂದ ಅವ್ಯಾನ್ ಸಾಹು ಹೆಸರಿನು ಹಸುಗೂಸು ಪ್ರಾಣಬಿಟ್ಟಿದೆ.
ಮೃತ ಮಗುವಿನ ತಾಯಿ ಸಾಧನಾ ಸಾಹು ಅವರ ಪ್ರಕಾರ "ಹಾಲಿಗೆ ಮನೆಯಲ್ಲಿದ್ದ ನೀರನ್ನು ಸೇರಿಸಿ ಮಗುವಿಗೆ ಕುಡಿಸಿದ ಬಳಿಕ ತೀವ್ರ ವಾಂತಿ, ಅತಿಸಾರ ಕಾಣಿಸಿಕೊಂಡಿತು. ಕೂಡಲೇ ಮಗುವನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅಲ್ಲಿಂದ ಖಾಸಗಿ ಆಸ್ಪತ್ರೆಗೆ ಕರೆದೊಯ್ದೆವು. ಅಷ್ಟರಲ್ಲಿ ಅಲ್ಲಿ ವೈದ್ಯರು ಈಗಾಗಲೇ ಮಗು ಮೃತಪಟ್ಟಿದೆ" ಎಂದು ಕಣ್ಣೀರಿಟ್ಟಿದ್ದಾರೆ.

ಪರಿಹಾರ ತಿರಸ್ಕರಿಸಿದ ಕುಟುಂಬ
ಈ ದುರಂತದ ಬಳಿಕ ನಗರಪಾಲಿಕೆ ನಿರಂತರ ನಿರ್ಲಕ್ಷ್ಯದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 10 ವರ್ಷಗಳ ಪ್ರಾರ್ಥನೆ ನಂತರ ಮಗು ಜನಿಸಿತ್ತು ಎಂದು ಕುಟುಂಬಸ್ಥರು ಗೋಳಾಡಿದ್ದಾರೆ. ಅಲ್ಲದೆ ಮಗುವಿನ ಸಾವಿಗೆ ಸರ್ಕಾರ ನೀಡಿದ ಪರಿಹಾರವನ್ನು ಕುಟುಂಬಸ್ಥರು ತಿರಸ್ಕರಿಸಿದ್ದಾರೆ. ಮೃತ ವ್ಯಕ್ತಿಗಳ ಕುಟುಂಬಗಳಿಗೆ ಸರ್ಕಾರ ತಲಾ ₹2 ಲಕ್ಷ ಪರಿಹಾರ ಘೋಷಣೆ ಮಾಡಿದೆ.
ಕಳೆದ ವರ್ಷ ಭಗೀರಥಪುರದಲ್ಲಿ ಕಲುಷಿತ ಕುಡಿಯುವ ನೀರಿನಿಂದ ಉಂಟಾದ ವಾಂತಿ-ಅತಿಸಾರದಿಂದ ಸುಮಾರು 15 ಜನರು ಸಾವನ್ನಪ್ಪಿದ್ದಾರೆ ಎಂದು ಇಲ್ಲಿನ ನಿವಾಸಿಗಳು ಬಹಿರಂಗಪಡಿಸಿದ್ದಾರೆ. ಇವರಲ್ಲಿ ಮೃತ ಅವ್ಯಾನ್ ಅತ್ಯಂತ ಕಿರಿಯ ಎನ್ನಲಾಗಿದೆ. ಆದರೆ ಆರೋಗ್ಯ ಇಲಾಖೆಯು ಈ ಸಾಂಕ್ರಾಮಿಕ ರೋಗದಲ್ಲಿ ಕೇವಲ ನಾಲ್ಕು ಸಾವುಗಳು ಮಾತ್ರ ಸಂಭವಿಸಿರುವುದಾಗಿ ಹೇಳಿವೆ. ಎಂದು ಹೇಳಿದೆ.
ʼನಾವು ಇಲ್ಲಿವರೆಗೆ ರಾಜ್ಯ ಸರ್ಕಾರದಿಂದ ಯಾವುದೇ ಪರಿಹಾರ ಪಡೆದಿಲ್ಲ. ನಮ್ಮ ಮಗು ಈಗ ಇಲ್ಲ, ಪರಿಹಾರವು ಅವನನ್ನು ಮತ್ತೆ ಬದುಕಿಸಲು ಸಾಧ್ಯವೇ? ನಮಗೆ ಮಗುವಿಗಿಂತ ಹಣ ದೊಡ್ಡದಲ್ಲʼ ಎಂದು ಅವ್ಯಾನ್ ಅವರ ಕುಟುಂಬದ ಹೇಳಿದೆ. ಕುಟುಂಬದ ಪ್ರಕಾರ ಅವ್ಯಾನ್ ಡಿಸೆಂಬರ್ 29ರಂದು ನಿಧನರಾದರು. ಮದುವೆಯಾಗಿ 10 ವರ್ಷಗಳ ಈ ಮಗುವಿಗೆ ಜನ್ಮ ನೀಡಿದ್ದರು. ಜನಿಸಿದ ಕೆಲವೇ ತಿಂಗಳಿಗೆ ಮಗು ನಮ್ಮನ್ನಗಲಿದೆ' ಎಂದು ಅವರು ಕಂಬನಿ ಮಿಡಿದಿದ್ದಾರೆ.
ʼಇಡೀ ಕುಟುಂಬವು ಅವನ ಜನನಕ್ಕಾಗಿ ಪ್ರಾರ್ಥಿಸಿ ಹುಸೇನ್ ಟೆಕ್ರಿ ದರ್ಗಾದಲ್ಲಿ ಪ್ರತಿಜ್ಞೆ ಮಾಡಿತ್ತು. ನನ್ನ ಪ್ರಾರ್ಥನೆಗಳಿಗೆ ಉತ್ತರ ಸಿಕ್ಕಿತು, ಆದರೆ, ಮಗು ಇಷ್ಟು ಬೇಗ ನಮ್ಮನ್ನು ಬಿಟ್ಟು ಹೋಗುತ್ತದೆ ಎಂದು ನಾವು ಎಂದಿಗೂ ಊಹಿಸಿರಲಿಲ್ಲ. ಮಗು ಆರೋಗ್ಯವಾಗಿತ್ತು ಮತ್ತು ಐದು ಕೆಜಿ ತೂಕ ಹೊಂದಿತ್ತು' ಎಂದು ನೋವಿನಿಂದ ಹೇಳಿದ್ದಾರೆ.
ಮಗುವಿಗೆ ಆಗಿದ್ದೇನು?
'ಸಾಕಷ್ಟು ಎದೆ ಹಾಲು ಇಲ್ಲದ ಕಾರಣ, ಶಿಶುವಿಗೆ ಪ್ಯಾಕ್ ಮಾಡಿದ ಹಾಲು ಮತ್ತು ಪುರಸಭೆಯಿಂದ ಪೂರೈಕೆಯಾಗುವ ನೀರಿನೊಂದಿಗೆ ಬೆರೆಸಿ ನೀಡಲಾಯಿತು. ಅವನು ತನ್ನ ತಾಯಿಯ ಮಡಿಲಲ್ಲಿ ಆಟವಾಡುತ್ತಿದ್ದ. ಒಂದು ದಿನ, ಅವನಿಗೆ ಇದ್ದಕ್ಕಿದ್ದಂತೆ ಅತಿಸಾರ ಶುರುವಾಯಿತು. ವೈದ್ಯರ ಸಲಹೆಯ ಮೇರೆಗೆ ನಾವು ಮನೆಯಲ್ಲಿಯೇ ಔಷಧ ನೀಡಲು ಪ್ರಾರಂಭಿಸಿದೆವು. ಆದರೂ ಅವನ ಸ್ಥಿತಿ ಹದಗೆಟ್ಟಿತು. ಬಳಿಕ ಅವನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಷ್ಟರಲ್ಲಿ ವೈದ್ಯರು ಅವನು ಸತ್ತಿದ್ದಾನೆಂದು ದೃಢಪಡಿಸಿದರು' ಎಂದು ಕುಟುಂಬಸ್ಥರು ವಿವರಿಸಿದ್ದಾರೆ.
ನೀರು ಕಲುಷಿತವಾಗಿದ್ದೇ ಮಗುವಿಗೆ ಮಾರಕವಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಕಳೆದ ಒಂಬತ್ತು ದಿನಗಳಲ್ಲಿ ಭಗೀರಥಪುರದಲ್ಲಿ 1,400ಕ್ಕೂ ಹೆಚ್ಚು ಜನರು ವಾಂತಿ ಮತ್ತು ಅತಿಸಾರದಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ.












Click it and Unblock the Notifications