ಮತ್ತೊಂದು ರಾಜ್ಯದಲ್ಲಿ "ಗ್ಯಾರಂಟಿ"ಗೆ ಮುಂದಾದ ಕಾಂಗ್ರೆಸ್
ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಬಿಡುತ್ತಿಲ್ಲ. ಕರ್ನಾಟಕ ಹಾಗೂ ತೆಲಂಗಾಣದಲ್ಲಿ ಗ್ಯಾರಂಟಿ ಯೋಜನೆಗಳಿಂದಲೇ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷವು ಇದೀಗ ಮತ್ತೊಂದು ರಾಜ್ಯದಲ್ಲೂ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವುದಾಗಿ ಹೇಳಿದೆ. ಉತ್ತರ ಭಾರತದ ಪ್ರಮುಖ ರಾಜ್ಯಗಳಲ್ಲಿ ಚುನಾವಣಾ ದಿನಾಂಕಗಳು ಘೋಷಣೆಯಾಗುತ್ತಿದ್ದು, ಕಾಂಗ್ರೆ, ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳು ರಾಜಕೀಯ ತಂತ್ರವನ್ನು ಅನುಸರಿಸುತ್ತಿವೆ. ಆದರೆ, ಕಾಂಗ್ರೆಸ್ ಗ್ಯಾರಂಟಿಯನ್ನೇ ನಂಬಿಕೊಂಡಿದೆ. ಈ ರಾಜ್ಯದಲ್ಲಿ ಬರೋಬ್ಬರಿ 7 ಗ್ಯಾರಂಟಿಗಳನ್ನು ಕಾಂಗ್ರೆಸ್ ಘೋಷಿಸಿದ್ದು, ಇದರಲ್ಲಿ ಬಡವರಿಗೆ ಮನೆ ನೀಡುವಂತಹ ಮಹತ್ವದ ಯೋಜನೆಗಳು ಸೇರಿವೆ.
ಗ್ಯಾರಂಟಿ ಯೋಜನೆಗಳ ಮೂಲಕ ಮತದಾರರನ್ನು ಗೆಲ್ಲಲು ಕಾಂಗ್ರೆಸ್ ಮುಂದಾದಂತಿದೆ. ಈಗಾಗಲೇ ಕರ್ನಾಟಕ ಹಾಗೂ ತೆಲಂಗಾಣ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲಾಗಿದೆ. ಮುಂದುವರಿದು ಜಮ್ಮು - ಕಾಶ್ಮೀರದಲ್ಲೂ ಗೆದ್ದರೆ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡುವುದಾಗಿ ಹೇಳಿದೆ. ಇದೀಗ ಹರಿಯಾಣದಲ್ಲೂ ಕಾಂಗ್ರೆಸ್ ಏಳು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದೆ. ಹೌದು ಹರಿಯಾಣ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಈ ರಾಜ್ಯದಲ್ಲೂ ಕಾಂಗ್ರೆಸ್ ಮತದಾರರನ್ನು ಸೆಳೆಯಲು ಗ್ಯಾರಂಟಿ ಮೊರೆ ಹೋಗಿದೆ.

ಜಮ್ಮ - ಕಾಶ್ಮೀರದಲ್ಲೂ ಗ್ಯಾರಂಟಿ ಪ್ಲಾನ್
ಚುನಾವಣೆ ನಡೆಯುತ್ತಿರುವ ಉತ್ತರ ಭಾರತದ ರಾಜ್ಯಗಳಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆ ಮೊರೆ ಹೋಗಿದೆ. ಈಚೆಗೆ ಜಮ್ಮು - ಕಾಶ್ಮೀರದಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಯನ್ನು ಪರಿಚಯಿಸಿತ್ತು. ಜಮ್ಮು - ಕಾಶ್ಮೀರದಲ್ಲಿ ಘೋಷಿಸಿದ 5 ಗ್ಯಾರಂಟಿಗಳಿವು ಕಾಶ್ಮೀರಿ ಪಂಡಿತರ ಪುನರ್ವಸತಿ. ಪ್ರತಿ ಕುಟುಂಬಕ್ಕೆ 25 ಲಕ್ಷ ರೂಪಾಯಿ ವರೆಗೆ ಆರೋಗ್ಯ ವಿಮೆ, ಮನೆಯ ಯಜಮಾನಿಗೆ 3,000 ಸಾವಿರ ರೂಪಾಯಿ, ಉದ್ಯಮಿ ಮಹಿಳೆಯರಿಗೆ 5 ಲಕ್ಷ ರೂಪಾಯಿ ವರೆಗೆ ಬಡ್ಡಿ ರಹಿತ ಸಾಲ ಹಾಗೂ ಪ್ರತಿ ವ್ಯಕ್ತಿಗೂ 11 ಕೆ.ಜಿ ಧಾನ್ಯ ವಿತರಣೆ ಸಿಗಲಿದೆ. ಒಂದೊಂದು ರಾಜ್ಯದಲ್ಲೂ ಒಂದೊಂದು ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್ ಪರಿಚಯಿಸುತ್ತಿದ್ದು, ರಾಜ್ಯದಿಂದ ರಾಜ್ಯಕ್ಕೆ ಈ ಗ್ಯಾರಂಟಿ ಯೋಜನೆಗಳ ಸ್ವರೂಪ ಬದಲಾಗುತ್ತಿವೆ.
ಗ್ಯಾರಂಟಿಯಿಂದ ಈ ರಾಜ್ಯದಲ್ಲಿ ಅಧಿಕಾರಕ್ಕೆ
ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಮೊದಲು ಕಾಂಗ್ರೆಸ್ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂತು. ಇದಾದ ನಂತರ ತೆಲಂಗಾಣದಲ್ಲೂ ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್ ಪರಿಚಯಿಸಿತ್ತು. ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳನ್ನು ಶೀಘ್ರ ಹಾಗೂ ಪ್ರಾರಂಭದಲ್ಲಿ ಪರಿಣಾಮಕಾರಿಯಾಗಿ ಜಾರಿ ಮಾಡಿದ್ದರಿಂದಾಗಿ ನೆರೆಯ ತೆಲಂಗಾಣದಲ್ಲೂ ಗ್ಯಾರಂಟಿ ಯೋಜನೆ ಪರಿಣಾಮ ಬೀರಿತ್ತು. ಕರ್ನಾಟಕದಲ್ಲಿ ಕಾಂಗ್ರೆಸ್ ಜಾರಿ ಮಾಡಿದ ಐದು ಪ್ರಮುಖ ಗ್ಯಾರಂಟಿ ಯೋಜನೆಗಳು ದೇಶದಾದ್ಯಂತ ಸದ್ದು ಮಾಡಿವೆ. ಈ ಯೋಜನೆಗಳಿಂದ ಬಡ ಕುಟುಂಬಗಳಿಗೆ ತಿಂಗಳಿಗೆ 5ರಿಂದ 6 ಸಾವಿರ ರೂಪಾಯಿ ಹೆಚ್ಚುವರಿ ಆರ್ಥಿಕ ಲಾಭ ಬರುತ್ತಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ. ಕರ್ನಾಟಕದ ನಂತರ ತೆಲಂಗಾಣ ವಿಧಾನಸಭಾ ಕ್ಷೇತ್ರದಲ್ಲೂ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಪರಿಚಯಿಸಿತ್ತು.
ತೆಲಂಗಾಣ ವಿಧಾನಸಭಾ ಕ್ಷೇತ್ರದಲ್ಲೂ ಗ್ಯಾರಂಟಿ ಯೋಜನೆಗಳು ಭಾರೀ ಪ್ರಭಾವವನ್ನು ಬೀರಿತ್ತು. ತೆಲಂಗಾಣದಲ್ಲಿ ಮೊದಲ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಇದೀಗ ಈ ಪ್ರಯೋಗವನ್ನು ಕಾಂಗ್ರೆಸ್ ಪಕ್ಷವು ದಕ್ಷಿಣ ಭಾರತದಿಂದ ಉತ್ತರ ಭಾರತಕ್ಕೆ ತೆಗೆದುಕೊಂಡು ಹೋಗುತ್ತಿದೆ. ಉತ್ತರ ಭಾರತದಲ್ಲೂ ಐದು ಗ್ಯಾರಂಟಿ ಯೋಜನೆಗಳನ್ನು ಪರಿಚಯಿಸುತ್ತಿದೆ.











Click it and Unblock the Notifications